ಗ್ವಾಲಿಯರ್: ಮಗು ಹೊಂದಲು ಜೈಲಿನಲ್ಲಿರುವ ತನ್ನ ಪತಿಗೆ ಪೆರೋಲ್ ನೀಡಬೇಕು ಎಂದು ಪತ್ನಿಯೊಬ್ಬರು ಮನವಿ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವರದಿಯಾಗಿದೆ. ದಾರಾ ಸಿಂಗ್ ಜಟಾವ್ ಎಂಬಾತ ಗ್ವಾಲಿಯರ್ ಕೇಂದ್ರ ಕಾರಾಗೃಹದಲ್ಲಿ ಕಳೆದ 7 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದಾನೆ. ಈತ ಮದುವೆ ನಡೆದ ಸ್ವಲ್ಪ ದಿನಗಳಲ್ಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಈತನ ಕುಟುಂಬ ಶಿವಪುರಿಯಲ್ಲಿ ನೆಲೆಸಿದೆ. ಮದುವೆ ಆದ ತತ್‌ಕ್ಷಣ ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಸಂಸಾರ ನಡೆಸಿಲ್ಲ. ಈಗಾಗಲೇ 7 ವರ್ಷಗಳು ಆಗಿರುವುದರಿಂದ ಮಗು ಹೊಂದಲು ಪತಿಗೆ ಪೆರೋಲ್ ನೀಡುವಂತೆ ಪತ್ನಿ ಅರ್ಜಿ ಸಲ್ಲಿಸಿದ್ದಾರೆ. “ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿ ಶಿಕ್ಷೆ ಆರಂಭವಾಗಿ 2 ವರ್ಷಗಳ ಅನಂತರ ಪೆರೋಲ್‌ಗೆ ಅರ್ಹರಾಗಿರುತ್ತಾನೆ. ಆದರೆ ಜೈಲಿನಲ್ಲಿರುವ ಸಹ ಕೈದಿಗಳು ಮತ್ತು ಜೈಲು ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ಆತನ ಚಾರಿತ್ರ್ಯದ ಬಗ್ಗೆ ಸಕಾರಾತ್ಮಕ ವರದಿ ನೀಡಬೇಕು. ಅಂತಿಮ ನಿರ್ಧಾರವನ್ನು ಜಿಲ್ಲಾಧಿಕಾರಿಗಳು ತಾಳುತ್ತಾರೆ’ ಎಂದು ಗ್ವಾಲಿಯರ್ ಕೇಂದ್ರ ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.