Advertisement

New Parliament: ಇಂದಿನಿಂದ ಹೊಸ ಸಂಸತ್‌ ಭವನದಲ್ಲಿ ಕಲಾಪ… ಶಾಂತಿ ಕಾಪಾಡಲು ಸ್ಪೀಕರ್ ಮನವಿ

08:29 AM Sep 19, 2023 | Team Udayavani |

ಹೊಸದಿಲ್ಲಿ: ದೇಶದ ಐತಿಹಾಸಿಕ ಹಳೆ ಸಂಸತ್‌ ಭವನ ಇತಿಹಾಸದ ಪುಟಕ್ಕೆ ಸೇರಿದೆ. ಸೋಮವಾರದಂದು ಹಳೆ ಸಂಸತ್‌ ಭವನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಕೊನೆಯ ಕಲಾಪಗಳು ನಡೆದವು. ಮಂಗಳವಾರ ಹೊಸ ಸಂಸತ್‌ ಭವನದಲ್ಲಿ ಸಂಸತ್‌ ಕಲಾಪಗಳು ನಡೆಯಲಿದೆ. ಹೊಸ ಸಂಸತ್‌ ಭವನದಲ್ಲಿ ಕಲಾಪಗಳು ನಡೆಯುವ ಸಂದರ್ಭದಲ್ಲಿ ಅನಾವಶ್ಯಕ ಗದ್ದಲ, ಧರಣಿ, ಕರಪತ್ರ, ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ಕೈಗೊಳ್ಳದಿರುವಂತೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಆಡಳಿತ ಮತ್ತು ವಿಪಕ್ಷ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.

Advertisement

ಸೋಮವಾರದಂದು ಉಭಯ ಸದನಗಳ ಆಡಳಿತ ಮತ್ತು ವಿಪಕ್ಷ ಸದಸ್ಯರು ಹಳೆಯ ಸಂಸತ್‌ ಭವನ ನಡೆದು ಬಂದ ಹಾದಿಯ ಬಗೆಗೆ ಮೆಲುಕು ಹಾಕಿದರು. ಹಳೆ ಸಂಸತ್‌ ಭವನದಲ್ಲಿ ನಡೆದ ಸಂವಿಧಾನ ಸಭಾದಿಂದ ಹಿಡಿದು ಸಾಧನೆಗಳು, ಅನು ಭವಗಳು, ನೆನಪುಗಳು ಮತ್ತು ಕಲಿತ ಪಾಠಗಳ ಬಗೆಗೆ ಸದಸ್ಯರು ತಮ್ಮ ಅನುಭಗಳನ್ನು ಹಂಚಿಕೊಂಡರು.

ಲೋಕಸಭೆ ಕಲಾಪವನ್ನು ಮುಂದೂಡುವುದಕ್ಕೂ ಮುನ್ನ ಮಾತನಾಡಿದ ಸ್ಪೀಕರ್‌ ಓಂ ಬಿರ್ಲಾ, ಈ ಐತಿಹಾಸಿಕ ಮತ್ತು ಪ್ರತಿಷ್ಟಿತ ಕಟ್ಟಡದಲ್ಲಿ ಕೊನೆಯ ದಿನ ನಡೆದ ಕಲಾಪದಲ್ಲಿ ರಚನಾತ್ಮಕ ಚರ್ಚೆಗಳು ನಡೆದಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿ ಮತ್ತು ಎಲ್ಲ ಪಕ್ಷಗಳ ನಾಯಕರು ತಮ್ಮ ಅನುಭವ, ಅಭಿಪ್ರಾಯಗಳನ್ನು ಮುಖ್ತವಾಗಿ ಹಂಚಿಕೊಂಡಿದ್ದಾರೆ. ಇದೊಂದು ಎಲ್ಲರಿಗೂ ಐತಿಹಾಸಿಕ ಮತ್ತು ಮರೆಯಲಾರದ ಕ್ಷಣವಾಗಿದೆ. ಈಗ ನಾವು ಹೊಸ ಸಂಸತ್‌ ಭವನದತ್ತ ಮುಖ ಮಾಡಿದ್ದೇವೆ. ಆದರೆ ಹಳೆಯ ಕಟ್ಟಡದಲ್ಲಿನ ನೆನಪುಗಳು ಎಂದಿಗೂ ನಮ್ಮೊಂದಿಗಿರಲಿವೆ ಎಂದರು.

ನಮ್ಮ ಸಂಸದೀಯ ಪ್ರಜಾಸತ್ತೆಯ ಮುಂದಿನ ಪಯಣ ಹೊಸ ಸಂಸತ್‌ ಭವನದಲ್ಲಿ ಆರಂಭಗೊಳ್ಳಲಿದೆ.ಈ ಸಂಸತ್‌ ಭವನದಲ್ಲಿ ನಾವು ಹೊಸ ಮೈಲುಗಲ್ಲುಗಳನ್ನು ನೆಡಬೇಕಿದೆ. ಎಲ್ಲ ಸದಸ್ಯರು ಅನಾವಶ್ಯಕ ಗದ್ದಲ, ಗಲಾಟೆ, ಧರಣಿ, ಪ್ರತಿಭಟನೆಯಲ್ಲಿ ತೊಡಗಿ ಕೊಳ್ಳಲದೆ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಸಂಸದೀಯ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕು ಎಂದವರು ಕರೆ ನೀಡಿದರು.

Advertisement

ಹೊಸ ಸಂಸತ್‌ ಭವನದಲ್ಲಿ ಹೊಸ ಉತ್ಸಾಹ, ಸ್ಫೂರ್ತಿಯೊಂದಿಗೆ ಉತ್ತಮ ಗುಣಮಟ್ಟದ ಚರ್ಚೆಗಳು ಸದನದಲ್ಲಿ ನಡೆಯಲಿ ಎಂದು ಹಾರೈಸಿದ ಅವರು, ಇದೇ ವೇಳೆ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಹಳೆ ಕಟ್ಟಡದಲ್ಲಿ ಲೋಕಸಭೆ ಸ್ಪೀಕರ್‌ ಆಗಿ ಕರ್ತವ್ಯ ನಿರ್ವಹಿಸಿದಾಗಿನ ತಮ್ಮ ಅನುಭವವನ್ನು ಅವರು ಸದಸ್ಯರೊಂದಿಗೆ ಹಂಚಿ ಕೊಂಡರು.

ಮಂಗಳವಾರ ಅಪರಾಹ್ನ ಗಂಟೆ 2.15ಕ್ಕೆ ಹೊಸ ಸಂಸತ್‌ ಭವನದ ಮೇಲ್ಮನೆ ಚೇಂಬರ್‌ನಲ್ಲಿ ಕಲಾಪಗಳು ಆರಂಭಗೊಳ್ಳಲಿದ್ದರೆ ಕೆಳಮನೆ ಚೇಂಬರ್‌ನಲ್ಲಿ ಅಪರಾಹ್ನ ಗಂಟೆ 1.15ಕ್ಕೆ ಲೋಕಸಭೆ ಕಲಾಪ ಆರಂಭಗೊಳ್ಳಲಿದೆ.

ಇದನ್ನೂ ಓದಿ : Asian Games  ಫುಟ್ ಬಾಲ್‌: ಭಾರತಕ್ಕೆ ಇಂದು ಚೀನ ಸವಾಲು

Advertisement

Udayavani is now on Telegram. Click here to join our channel and stay updated with the latest news.

Next