ಪಡುಪಣಂಬೂರು : ದೇಶದ ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಸಂಸದೀಯ ಸ್ಥಾಯೀ ಸಮಿತಿಯ ತಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುತ್ತಿರುವ ಅಧ್ಯಯನಕ್ಕಾಗಿ ಅ. 27ರಂದು ಪಡುಪಣಂಬೂರು ಗ್ರಾಮ ಪಂಚಾಯತ್‌ಗೆ ದಿಢೀರ್ ಆಗಿ ಭೇಟಿ ನೀಡಿ, ಅಲ್ಲಿನ ಆಡಳಿತ ಹಾಗೂ ವಿವಿಧ ಯೋಜನೆಗಳನ್ನು ವೀಕ್ಷಿಸಿತು. ಸಮಿತಿಯ ಅಧ್ಯಕ್ಷ ಡಾ| ಪಿ.ವೇಣುಗೋಪಾಲ್ ಅವರ ನೇತೃತ್ವದಲ್ಲಿ 14 ಮಂದಿ ಲೋಕಸಭಾ ಸದಸ್ಯರು, 4 ಮಂದಿ ಲೋಕಸಭಾ ಕಾರ್ಯದರ್ಶಿಗಳು ಹಾಗೂ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ್ದರು.
ಸಮಿತಿಯ ಸದಸ್ಯರು ಆರಂಭದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ನ ಕಚೇರಿಯನ್ನು ವೀಕ್ಷಿಸಿ, ಸಿಬಂದಿ ಸಹಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಪ್ರಶ್ನೋತ್ತರ ನಡೆಸಿದರು. ಕೇಂದ್ರ ಸರಕಾರದ ಯೋಜನೆಗಳಾದ ಉಜ್ವಲ, ನರೇಗಾ ಬಳಕೆಯಾಗುತ್ತಿದೆಯೇ, ಬಿಎಸ್ ಎನ್‌ಎಲ್ ಸಂಪರ್ಕ ಹೇಗಿದೆ, ಬಾಪೂಜಿ ಕೇಂದ್ರದ ಬಳಕೆ ಹೇಗೆ, ಗ್ರಾಮಸ್ಥರಿಗೆ ಹೇಗೆ ಸ್ಪಂದಿಸುತ್ತಿದ್ದೀರಿ, ವರ್ಷದಿಂದ ವರ್ಷಕ್ಕೆ ಹೇಗೆ ಅಭಿವೃದ್ಧಿ, ಗ್ರಾಮ ಸಭೆ, ಮಹಿಳೆಯರಿಗೆ ನೀಡುವ ಸವಲತ್ತುಗಳ ಬಗ್ಗೆ ಗಮನ ಸೆಳೆದು ಮಾಹಿತಿಯನ್ನು ಪಡೆದುಕೊಂಡರು.
ಪಂಚಾಯತ್‌ಗೆ ಸಿಕ್ಕ ಪುರಸ್ಕಾರಗಳ ಮಾನದಂಡದ ಬಗ್ಗೆ, ಸ್ವಚ್ಛತೆಗೆ ಆದ್ಯತೆ ನೀಡಿರುವ, ಸ್ಥಳೀಯ ಸಂಘ ಸಂಸ್ಥೆಗಳ ಚಟುವಟಿಕೆಯೊಂದಿಗೆ ವಿವಿಧ ಪತ್ರಿಕಾ ಪ್ರಕಟನೆಗಳನ್ನು ಗಮನಿಸಿದರು. ಕುಡಿಯುವ ನೀರಿನ ಬಗ್ಗೆ ವಿಶೇಷ ಮಾಹಿತಿ ಪಡೆದುಕೊಂಡರಲ್ಲದೇ ಗ್ರಾಮೀಣ ಭಾಗದ ಚಟುವಟಿಕೆಯನ್ನು ಅಧಿಕಾರಿಗಳು ಹಾಗೂ ಪಂಚಾಯತ್‌ನ ಪ್ರತಿನಿಧಿಗಳು ವಿವರಿಸಿದರು. ಗ್ರಾಮಸ್ಥರು ಭೇಟಿ ನೀಡುವ ಕಚೇರಿಯ ವಾತಾವರಣವನ್ನು ದಾಖಲಿಸಿಕೊಂಡರು.
ತೋಕೂರಿಗೆ ಭೇಟಿ
ಪಂಚಾಯತ್‌ನ ಅಧೀನದಲ್ಲಿರುವ ತೋಕೂರಿನಲ್ಲಿ ನಿರ್ಮಿಸಿರುವ ಎರಡು ಕಿಂಡಿ ಅಣೆಕಟ್ಟನ್ನು ವೀಕ್ಷಿಸಿದ ಸಮಿತಿಯು ನರೇಗಾ ಯೋಜನೆಯಲ್ಲಿ ನಿರ್ಮಿಸಿದ ರೀತಿ ಹಾಗೂ ಜಾಬ್‌ಕಾರ್ಡ್‌ನ ಮೂಲಕ ಗ್ರಾಮಸ್ಥರ ಸ್ಪಂದನೆಯನ್ನು ಗಮನಿಸಿದರಲ್ಲದೇ, ಕಿಂಡಿ ಅಣೆಕಟ್ಟು ನಿರ್ಮಾಣದ ಅನಂತರ ನೀರಿನ ಒಳ ಅರಿವು ಹೆಚ್ಚಿರುವ ಬಗ್ಗೆಯೂ ಸಮಿತಿ ಸದಸ್ಯರು ವಿವರಣೆ ಪಡೆದುಕೊಂಡರು.
ಸಮಿತಿಯಲ್ಲಿ ಲೋಕಸಭಾ ಸದಸ್ಯರಾದ ಕೀರ್ತಿ ಆಜಾದ್, ಹರಿಶ್ಚಂದ್ರ ಚೌವಾಣ್, ಜಿ. ಗಂಗಾರಾಜು, ಡಾ| ಯಶವಂತ್ ಸಿಂಗ್, ಜುಗಲ್ ಕಿಶೋರ್ ಶರ್ಮಾ, ಶಾಂತಾ ಚೆತ್ರಿ, ಶಂಸೇರ್ ಸಿಂಗ್ ಡಿಲ್ಲೋ, ಜಾವೆದ್ ಅಲಿ ಖಾನ್, ಎ.ಕೆ.ಸೆಲ್ವರಾಜ್, ಲಾಲ್ ಸಿಂಗ್ ವಡೋಡ್ಲಾ, ನಾರಾಯಣ ಲಾಲ್ ಪಂಚಾರಿಯಾ, ನರನ್‌ಭಾಯಿ ಜೆ. ರಾತ್ವಾ, ಮೌಸಮ್ ನೂರ್, ಲೋಕಸಭಾ ಕಾರ್ಯದರ್ಶಿಗಳಾದ ಅಭಿಜಿತ್ ಕುಮಾರ್, ಸತೀಶ್‌ಕುಮಾರ್, ಅತುಲ್ ಸಿಂಗ್, ಕಿಶೋರ್ ಕುಮಾರ್, ಬೆಂಗಳೂರಿನ ಪಂಚಾಯತ್ ರಾಜ್ ಆಯುಕ್ತರಾದ ಅಲೋಕ್, ಜಿಲ್ಲಾ ಪಂಚಾಯತ್‌ನ ಜಂಟಿ ನಿರ್ದೇಶಕ ಮಹೇಶ್, ಸಿಇಒ ಡಾ. ಸೆಲ್ವಮಣಿ, ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ನಿರ್ದೇಶಕ ಹಿಮಕರ್, ಪಡುಪಣಂಬೂರು ಗ್ರಾಮ ಪಂಚಾಯತ್ ನ ಅಧ್ಯಕ್ಷ ಮೋಹನ್‌ದಾಸ್, ಸದಸ್ಯರಾದ ಹೇಮನಾಥ ಅಮೀನ್ ತೋಕೂರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಲೋಕನಾಥ ಭಂಡಾರಿ, ಸಿಬಂದಿ ಗಳಾದ ನಮಿತಾ, ಅಭಿಜಿತ್, ದಿನಕರ್, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಪ್ರಭಾರ ಪಿಡಿಒ ಕೇಶವ ದೇವಾಡಿಗ, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಮಿತಿಯಿಂದ ಮೆಚ್ಚುಗೆ
ಪಂಚಾಯತ್‌ನ ಕಚೇರಿ ಸಿಬಂದಿ ಸಮವಸ್ತ್ರದ ಶಿಸ್ತು, ಅಲ್ಲಿನ ವಾತಾವರಣ, ಕುಡಿಯುವ ನೀರಿನ ವ್ಯವಸ್ಥೆ, ಮಡಕೆಯನ್ನು ಬಳಸುತ್ತಿರುವುದು, ಅಧಿಕಾರಿಗಳು ಹಾಗೂ ಸದಸ್ಯರ ಸಹಭಾಗಿತ್ವದ ಜತೆಗೆ ತೋಕೂರಿನಲ್ಲಿನ ಕಿಂಡಿ ಅಣೆಕಟ್ಟಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಗ್ರಾಮ ಪಂಚಾಯತ್‌ನ ಕಾರ್ಯವೈಖರಿಯನ್ನು ವಿಶೇಷವಾಗಿ ದಾಖಲಿಸಿಕೊಂಡು ಇಡಲು ಸಲಹೆ ನೀಡಿದರು.
ಅಧ್ಯಯನ ಪ್ರವಾಸ..
ಸಮಿತಿಯು ಅ. 24ರಿಂದ 29ರವರೆಗೆ ಊಟಿ, ಕೊಡಗು, ಮಂಗಳೂರು, ಕಾರವಾರ, ಗೋವಾ ಅಧ್ಯಯನ ಪ್ರವಾಸ ನಡೆಸಲಿದೆ. ಗ್ರಾಮೀಣ ಭಾಗದಲ್ಲಿನ ಯೋಜನೆಗಳ ಪರಿಣಾಮ ಹಾಗೂ ಅದರ ಹಿನ್ನೆಲೆ, ಅನಂತರದ ಜನ ಜೀವನ, ಪಂಚಾಯತ್‌ನ ಕಾರ್ಯ ವೈಖರಿಯನ್ನು ಅಭ್ಯಸಿಸಿ ಅಂತಿಮವಾಗಿ ವರದಿಯನ್ನು ಸಲ್ಲಿಸಲಿದೆ. ಇದರಿಂದ ಯಾವ ಯೋಜನೆಗಳು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಲಾಗುತ್ತದೆ ಎಂದು ಡಾ| ಪಿ.ವೇಣುಗೋಪಾಲ್ ಅವರು ತಿಳಿಸಿದರು.