Advertisement
ಬ್ರಿಟಿಷರಿಂದ ಸ್ವಾತಂತ್ರ್ಯ ದೊರೆತ ಬಳಿಕ ಇಷ್ಟು ವರ್ಷಗಳ ವರೆಗೂ ನಮ್ಮ ದೇಶದಲ್ಲಿ ಆಗಿರುವ ಹಲವು ಪ್ರಮಾದಗಳಿಗೆ ಬ್ರಿಟಿಷರೇ ಕಾರಣ ಎಂದು ದೂರಿಕೊಂಡು ಬಂದಿದ್ದೇವೆ. ಆದರೆ ಭಾರತೀಯರು ಬ್ರಿಟಿಷರಿಂದ ಕಲಿಯಬೇಕಾದ ಪಾಠಗಳು ತುಂಬಾ ಇವೆ. ಅದರಲ್ಲೂ ಸಂಸದೀಯ ವ್ಯವಹಾರಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಾವು ಬ್ರಿಟಿಷರಿಂದ ಪಾಠ ಹೇಳಿಸಿಕೊಳ್ಳಲೇಬೇಕಿದೆ. ನಾನು ಹೀಗೆ ಹೇಳುತ್ತಿರುವುದು ಕಾಂಗ್ರೆಸ್ ಪಕ್ಷವೀಗ ನಮ್ಮ ವಿಧಾನಪರಿಷತ್ತಿನ ಸಭಾಧ್ಯಕ್ಷ ಡಿ.ಎಚ್. ಶಂಕರಮೂರ್ತಿಯವರನ್ನು ಮೇಲ್ಮನೆಯಲ್ಲಿ ಬಿಜೆಪಿ ಬಹುಮತ ಹೊಂದಿರುವ ಪಕ್ಷವಾಗಿ ಉಳಿದಿಲ್ಲವೆಂಬ ಕಾರಣ ಕ್ಕಾಗಿ ಮತ್ತು ಶಂಕರಮೂರ್ತಿಯವರ ಕಾರ್ಯಶೈಲಿ ತನಗೆ ಮೆಚ್ಚುಗೆಯಾಗಿಲ್ಲವೆಂಬ ಕಾರಣಕ್ಕಾಗಿ ಸಭಾಪತಿ ಹುದ್ದೆಯಿಂದ ಕೆಳಗಿಳಿಸ ಹೊರಟಿರುವ ಹಿನ್ನೆಲೆಯಲ್ಲಿ. ಇಲ್ಲಿ ಕಾಂಗ್ರೆಸ್‌ನ ನಡೆಯನ್ನು ಬ್ರಿಟನಿನಲ್ಲಿ ಥೆರೇಸಾ ಮೇ ಅವರ ನೇತೃತ್ವದ ಕನ್ಸರ್ವೇಟಿವ್ ಪಕ್ಷದ ಸರಕಾರದ ನಡೆಯೊಂದಿಗೆ ಹೋಲಿಸಿ ನೋಡಿ. ಅಲ್ಲಿನ ಹೌಸ್ ಆಫ್ ಕಾಮನ್ಸ್‌ನ ಸ್ಪೀಕರ್, ಜಾನ್ ಬೆರ್ಕೋ ಅವರ ನಾಲ್ಕು ತಿಂಗಳ ಹಿಂದಿನ ಮುಜುಗರ ಹುಟ್ಟಿಸುವ ನಿಲುವನ್ನು ಅಲ್ಲಿನ ಸರಕಾರ ತಾಳ್ಮೆಯಿಂದ ಸಹಿಸಿಕೊಂಡಿತು. ದಿಲ್ಲಿಯ ಸಂಸತ್ ಭವನಕ್ಕೆ ಸಮಾನವಾದ (ಬ್ರಿಟನ್‌ನ) ವೆಸ್ಟ್ ಮಿನಿಸ್ಟರ್ ಹಾಲ್‌ನಲ್ಲಿ, ಬ್ರಿಟಿಷ್ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾಷಣ ಮಾಡಬೇಕಿತ್ತು. ಆದರೆ ಸ್ಪೀಕರ್ ಜಾನ್ ಬೆರ್ಕೋ ಇದಕ್ಕೆ ಅವಕಾಶ ನೀಡಲಿಲ್ಲ. ಈ ವರ್ಷದ ಕೊನೆಯಲ್ಲಿ ನಡೆ ಯಬೇಕೆಂದು ನಿಗದಿಯಾಗಿದ್ದ ಟ್ರಂಪ್‌ರ ಬ್ರಿಟನ್ ಭೇಟಿಯ ವೇಳೆ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುವಂತೆ ಬ್ರಿಟನ್ ಸರಕಾರ ಅವರಿಗೆ ಆಹ್ವಾನ ನೀಡಿತ್ತು. ಆದರೆ, ಥೆರೆಸಾ ಅವರೀಗ ರಾಜಿನಾಮೆ ನೀಡಿದ್ದಾರೆ. ಹೌಸ್ ಆಫ್ ಕಾಮನ್ಸ್‌ಗೆ ಅವಧಿಪೂರ್ವ ಚುನಾವಣೆ ನಡೆಸುವಂತೆ ಕರೆ ನೀಡಿದ್ದಾರೆ.
Related Articles
Advertisement
ಪಕ್ಷಾಂತರ ಕಾಯ್ದೆ ಜಾರಿಯಾಗುವ ಮುಂಚಿನ ದಿನಗಳಲ್ಲಿ ಆಗಿನ ತೆಲುಗು ದೇಶಂನ ಸ್ಪೀಕರ್ ಹಾಗೂ ಡೆಪ್ಯುಟಿ ಸ್ಪೀಕರ್ ಆಂಧ್ರದಲ್ಲಿ ಪಕ್ಷಾಂತರ ಮಾಡಿದ್ದರು. ಈ ವಿಲಕ್ಷಣ ವಿದ್ಯಮಾನ ಜರುಗಿದ್ದು, ತೆಲುಗುದೇಶಂ ಪಕ್ಷ ಹೋಳಾದ ಸಂದರ್ಭದಲ್ಲಿ ಹಾಗೂ ನಾದೇಂಡ್ಲ ಭಾಸ್ಕರ ರಾವ್ ಅವರು ಎನ್.ಟಿ. ರಾಮ ರಾವ್ ಅವರ ವಿರುದ್ಧ ಬಂಡೆದ್ದ ಸಂದರ್ಭದಲ್ಲಿ (1984).
ಸಭಾಪತಿಗಳ ಪೈಕಿ ಅಭೂತಪೂರ್ವವೆನ್ನಿಸುವ ತೀರ್ಮಾನ ಗಳನ್ನು ನೀಡಿದವರು ಕೆಲವೇ ಕೆಲವರು ಎಂಬುದನ್ನು ಅಗತ್ಯವಾಗಿ ಗಮನಿಸಬೇಕು. ಇದೇ ಕಾರಣಕ್ಕಾಗಿ ಲೋಕಸಭೆಯ ಮಾತು ಬಂದಾಗ ಜಿ.ವಿ. ಮಳಂಗಾವ್ಕರ್ ಅಥವಾ ಎಂ. ಅನಂತಶಯನಂ ಹಾಗೂ ನಮ್ಮ ವಿಧಾನಮಂಡಲಗಳ ಪ್ರಸಕ್ತಿ ಬಂದಾಗ ಕೆ.ಟಿ. ಭಾಷ್ಯಂ ಅಥವಾ ವೈಕುಂಠ ಬಾಳಿಗರಂಥವರು ನೀಡಿದ್ದ ತೀರ್ಮಾನಗಳನ್ನು ಇಂದಿಗೂ ನೆನಪಿಟ್ಟುಕೊಂಡವರಿದ್ದಾರೆ. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲದಲ್ಲೇ ಕೇಂದ್ರೀಯ ಶಾಸನ ಸಭೆಯಲ್ಲಿ ವಿಟuಲ ಭಾಯಿ ಪಟೇಲ್ (ಸರ್ದಾರ್ ಪಟೇಲರ ಅಣ್ಣ) ಅವರಂಥ ಉನ್ನತ ವ್ಯಕ್ತಿತ್ವದ ಧೀಮಂತರು ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ಸಭಾಪತಿ ಸ್ಥಾನದಲ್ಲಿರುವವರು ನಿರ್ಲಿಪ್ತ ಹಾಗೂ ನಿಷ್ಪಕ್ಷಪಾತಿಯಾಗಿರಬೇಕೆಂದು ತೋರಿಸಿಕೊಟ್ಟರು.
ಬಿಜೆಪಿ ಮಹಾರಾಷ್ಟ್ರದಲ್ಲಿ ಮಾಡಿದ್ದು ಇದನ್ನೇ: ಯಾವುದೇ ದೃಷ್ಟಿಯಿಂದ ನೋಡಿದರೂ ಮೇಲ್ಮನೆ ಸಭಾಪತಿ ಶಂಕರಮೂರ್ತಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿಯೇ, ಘನಸ್ತಿಕೆಯಿಂದಲೇ ನಿರ್ವಹಿಸಿರುವುದು ಎದ್ದು ತೋರುತ್ತದೆ. ಅವರು ಸ್ವತಃ ಬಿಜೆಪಿಯವರೇ ಆಗಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಇರುವ ರಾಜಕೀಯ ಶತ್ರುತ್ವ ಭಾವದಿಂದ ಪ್ರಭಾವಿತವಾಗಲು ತಮ್ಮ ವ್ಯಕ್ತಿತ್ವಕ್ಕೆ ಯಾವ ರೀತಿಯಲ್ಲೂ ಅವಕಾಶ ಮಾಡಿಕೊಟ್ಟಿಲ್ಲ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಬೇಕೆಂದು ನಿರೀಕ್ಷಿಸುವವರು, ಬೆಂಗಳೂರೇ ತಮ್ಮ ಖಾಯಂ ನಿವಾಸವೆಂದು ಅಧಿಕೃತವಾಗಿ ಘೋಷಿಸಿಕೊಂಡಿದ್ದ ಎಂಟು ವಿಧಾನಪರಿಷತ್ ಸದಸ್ಯರುಗಳಿಗೆ – ಹಾಗೇ ಘೋಷಿಸಿಕೊಂಡೂ ತಮ್ಮ ತಮ್ಮ ತವರು ಜಿಲ್ಲೆಗಳ ಪ್ರಯಾಣಕ್ಕಾಗಿ ಭತ್ಯೆ ಪಡೆದರೆಂಬ ಕಾರಣಕ್ಕಾಗಿ ನೋಟೀಸ್ ನೀಡಿರುವ ಕ್ರಮವನ್ನು ಬೆಂಬಲಿಸಬೇಕಾಗುತ್ತದೆ.
ಶಂಕರಮೂರ್ತಿಗಳಲ್ಲ; ಈಗ ಶಂಕರಮೂರ್ತಿಯವರ ಮೇಲೆ ಬಾಣ ಪ್ರಯೋಗ ಮಾಡಹೊರಟಿರುವ ಕಾಂಗ್ರೆಸ್ ಪಕ್ಷ ಇದರ ಬದಲಿಗೆ, ತಪ್ಪೆಸಗಿರುವ ತನ್ನ ಎಂಎಲ್‌ಸಿಗಳನ್ನು ತರಾಟೆಗೆ ತೆಗೆದುಕೊಂಡರೆ ಚೆನ್ನಾಗಿರುತ್ತದೆ. ಆದರೆ ಬಿಜೆಪಿ ಕೂಡ ಈ ಹಿಂದೊಮ್ಮೆ ಕ್ಷಮಾರ್ಹವಲ್ಲದ ರೀತಿಯಲ್ಲಿ ನಡೆದುಕೊಂಡಿತ್ತು. “ಅನುಕೂಲಕರವಲ್ಲದ ರೀತಿ’ಯಲ್ಲಿ ಕಾರ್ಯನಿರ್ವಹಿಸಿದ್ದ ಸಭಾಪತಿಯೊಬ್ಬರ ಬಗ್ಗೆ ದ್ವೇಷಪೂರಿತ ವರ್ತನೆ ತೋರಿದ ಈ ಪ್ರಸಂಗ ಘಟಿಸಿದ್ದು 2015ರಲ್ಲಿ; ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವಿದ್ದಾಗ. ಮಹಾರಾಷ್ಟ್ರ ವಿಧಾನಪರಿಷತ್ತಿನ ಸಭಾಪತಿಯಾಗಿದ್ದ ಶಿವಾಜಿ ರಾವ್ ದೇಶ್‌ಮುಖ್ ಅವರನ್ನು ಪದಚ್ಯುತಿಗೊಳಿಸುವ ಪ್ರಯತ್ನದಲ್ಲಿ ಬಿಜೆಪಿ ಅಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದೊಂದಿಗೆ ಕೈ ಜೋಡಿಸಿತ್ತು.
ಕನಿಷ್ಠ ಪಕ್ಷ ನಮ್ಮ ದೇಶದ ಪ್ರಮುಖ ರಾಜಕೀಯ ಪಕ್ಷಗಳಾ ದರೂ ಸಂಸದೀಯ ವ್ಯವಹಾರ ನಿರ್ವಹಣೆಯ ಸಾಂಪ್ರದಾಯಕ ಆಚಾರ-ವಿಚಾರಗಳಿಗೆ ಗೌರವ ತೋರಬೇಕಾ ಗಿದೆ. ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ ಪುಸ್ತಕಗಳಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳಿಗೆ ಸಂಬಂಧಿಸಿದ ಹಲವಾರು ಪ್ಯಾರಾಗಳಿವೆ. ಯಾವ ಯಾವ ಸಂದರ್ಭಗಳಲ್ಲಿ ಬ್ರಿಟಿಷ್ ಸಂಸತ್ತು ಹೇಗೆ ಹೇಗೆ ನಡೆದುಕೊಳ್ಳುತ್ತದೆ ಎಂಬ ಬಗೆಗಿನ ವಿವರಗಳೆಲ್ಲ ಇಂಥ ಪುಸ್ತಕಗಳಲ್ಲಿರುತ್ತವೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಬಗ್ಗೆ ತಳೆದಿದ್ದ ನಿಲುವಿಗಾಗಿ ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಅವರು ಅಲ್ಲಿನ ಸ್ಪೀಕರ್‌ರನ್ನು ಪದಚ್ಯುತಿಗೊಳಿಸಲಿಲ್ಲ. ವಿಪಕ್ಷೀಯ ನಾಯಕರೊಬ್ಬರು ಪರಿಷತ್ತಿನ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದಾರೆಂಬ ಕಾರಣಕ್ಕೆ ಸಿದ್ದರಾಮಯ್ಯ ಹಾಗೂ ಅವರ ಮಂತ್ರಿಗಳು ಅಸಹಿಷ್ಣು ಧೋರಣೆಯನ್ನು ತೋರಬಾರದು.
ಸಂಸದೀಯ ವ್ಯವಹಾರಗಳ ಸಂಹಿತೆಯನ್ನು ಭಂಗಿಸುವ ಮೂಲಕ ಮುಖ್ಯಮಂತ್ರಿಯೊಬ್ಬರು ಅವಿವೇಕದ “ವಿಪರೀತ’ ನಡೆಯನ್ನು ಪ್ರದರ್ಶಿಸಿದ ಪ್ರಸಂಗ ಈ ಹಿಂದೆ ತಮಿಳುನಾಡಿನಲ್ಲಿ ಆಗಿಹೋಗಿದೆ. 1986ರಲ್ಲಿ ಎಂ.ಜಿ. ರಾಮಚಂದ್ರನ್ ಅವರು ಮುಖ್ಯಮಂತ್ರಿಯಾಗಿದ್ದಾಗ, ತಮಿಳು ಚಿತ್ರನಟಿ ವಿ. ನಿರ್ಮಲಾ ಅವರನ್ನು ಮೇಲ್ಮನೆಗೆ ನಾಮಕರಣ ಸದಸ್ಯೆಯ ನ್ನಾಗಿ ಆಯ್ಕೆ ಮಾಡುವ ಪ್ರಸ್ತಾವವನ್ನು ರಾಜ್ಯಪಾಲ ಎಸ್.ಎಲ್. ಖುರಾನಾ ತಿರಸ್ಕರಿಸಿದರೆಂಬ ಕಾರಣಕ್ಕಾಗಿ ಎಂಜಿಆರ್ ವಿಧಾನಪರಿಷತ್ತನ್ನೇ ಬರ್ಖಾಸ್ತುಗೊಳಿಸಿದ್ದರು. ಆ ಚಿತ್ರನಟಿ ತನ್ನನ್ನು “ದಿವಾಳಿ’ಯೆಂದು ಘೋಷಿಸಿಕೊಂಡಿದ್ದರು ; ರಾಜ್ಯಪಾ ಲರು ಈ ಹಿನ್ನೆಲೆಯಲ್ಲಿ ಆಕೆಯ ನಾಮಕರಣ ಸದಸ್ಯತ್ವದ ಪ್ರಸ್ತಾವವನ್ನು ತಿರಸ್ಕರಿಸಿದ್ದರು. ಎಂ.ಜಿ. ಆರ್. ಅವರು ತನ್ನ ಈ ವಿಪರೀತ ನಡೆಯ ಮೂಲಕ ಒಂದು ಸಂಸದೀಯ ಸಂಸ್ಥೆಯನ್ನೇ ಗಂಡಾಂತರಕ್ಕೆ ಸಿಲುಕಿಸಿದರು; ಅದೂ ಕೇವಲ ಓರ್ವ ಚಿತ್ರಕಲಾವಿದೆಗಾಗಿ! ಮುಂದೆ ಭಾರತ ರತ್ನ ಪ್ರಶಸ್ತಿಗೆ ಭಾಜನರಾದವರು ಇದೇ ಎಂ.ಜಿ. ರಾಮಚಂದ್ರನ್. – ಅರಕೆರೆ ಜಯರಾಮ್