ನವದೆಹಲಿ:ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಉಲ್ಲೇಖಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ಕೆಂಡಾಮಂಡಲರಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಶುಕ್ರವಾರ ನಡೆಯಿತು.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖಂಡರೊಬ್ಬರು ಭಾರತೀಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಬೇಕು ಎಂಬಂತಹ ಹೇಳಿಕೆಯನ್ನು ನೀಡಿದ್ದಾರೆ. ಇದೇನಾ ದೇಶದ ಜನರಿಗೆ ರಾಹುಲ್ ಗಾಂಧಿ ನೀಡುವ ಸಂದೇಶ? ಇಂತಹ ಹೇಳಿಕೆ ನೀಡಿದ ರಾಹುಲ್ ಗೂ ಶಿಕ್ಷೆಯಾಗಬೇಕು ಎಂದು ಸ್ಮೃತಿ ಇರಾನಿ ಲೋಕಸಭೆಯಲ್ಲಿ ಕಿಡಿಕಾರಿದರು.
ಜಾರ್ಖಂಡ್ ನಲ್ಲಿ ರಾಹುಲ್ ಹೇಳಿದ್ದೇನು?
ದೇಶದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧ ಪ್ರಕರಣದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸರ್ಕಾರವನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ದೇಶ ಮೇಕ್ ಇನ್ ಇಂಡಿಯಾದಿಂದ ರೇಪ್ ಇನ್ ಇಂಡಿಯಾದತ್ತ ಹೊರಳುತ್ತಿದೆ ಎಂದು ಹೇಳಿದ್ದರು.
ನರೇಂದ್ರ ಮೋದಿ ಹೇಳುತ್ತಾರೆ ಮೇಕ್ ಇನ್ ಇಂಡಿಯಾ ಅಂತ. ಆದರೆ ಇತ್ತೀಚೆಗಿನ ದಿನಗಳಲ್ಲಿ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಎಂಬಂತೆ ಘಟನೆಗಳು ನಡೆಯುತ್ತಿದೆ. ಉತ್ತರಪ್ರದೇಶದಲ್ಲಿ ನರೇಂದ್ರ ಮೋದಿ ಪಕ್ಷದ ಶಾಸಕರೊಬ್ಬರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರು. ನಂತರ ಆಕೆ ಮೇಲೆ ಟ್ರಕ್ ಹರಿಸಿ ಕೊಲ್ಲಲು ಯತ್ನಿಸಲಾಯಿತು. ಆದರೆ ಪ್ರಧಾನಿ ಮೋದಿ ಅವರು ಒಂದೇ ಒಂದು ಶಬ್ದ ಮಾತನಾಡಲಿಲ್ಲ ಎಂದು ಜಾರ್ಖಂಡ್ ನಲ್ಲಿ ಗುರುವಾರ ಸಾರ್ವಜನಿಕ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿಕೆ ನೀಡಿದ್ದರು.
ಮೋದಿಜೀ ಹೇಳುತ್ತಾರೆ ಬೇಟಿ ಬಚಾವೋ, ಬೇಟಿ ಪಡಾವೋ..ಆದರೆ ಹೆಣ್ಮಕ್ಕಳನ್ನು ಯಾರು ರಕ್ಷಿಸಬೇಕೆಂದು ಯಾವತ್ತೂ ಹೇಳಿಲ್ಲ. ಅವರು ಕೇವಲ ಬಿಜೆಪಿ ಶಾಸಕರನ್ನು ಮಾತ್ರ ರಕ್ಷಿಸುತ್ತಾರೆ ಎಂದು ರಾಹುಲ್ ಆರೋಪಿಸಿದ್ದರು.