ಹೊಸದಿಲ್ಲಿ: ಲೋಕಸಭಾ ಕಲಾಪದ ವೇಳೆ ಸಂಸತ್ ನೊಳಕ್ಕೆ ನುಗ್ಗಿ ದುಷ್ಕೃತ್ಯ ಎಸಗಲು ಒಟ್ಟು ಆರು ಮಂದಿ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲೋಕಸಭೆಯೊಳಗೆ ನುಗ್ಗಿದ ಇಬ್ಬರು ಸೇರಿ ಒಟ್ಟು ನಾಲ್ವರನ್ನು ಸಂಸತ್ ಭವನದ ಭದ್ರತಾ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸಂಸತ್ ನೊಳಗೆ ಪಾಸ್ ಪಡೆದು ತೆರಳಿದ್ದ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಸಂಸದರು ಕುಳಿತುಕೊಳ್ಳುವ ಪ್ರದೇಶಕ್ಕೆ ಜಿಗಿದು, ಹಳದಿ ಬಣ್ಣದ ಸ್ಪ್ರೇ ಹೊಡೆದು ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಸಂಸದರು ಇಬ್ಬರನ್ನು ಥಳಿಸಿದ್ದಾರೆ. ಭದ್ರತಾ ಪಡೆಗಳ ಕಣ್ತಪ್ಪಿಸಿ ಶೂ ಗಳ ಒಳಗೆ ಕಲರ್ ಸ್ಪ್ರೇ ತೆಗೆದುಕೊಂಡು ಹೋಗಿದ್ದರು ಎನ್ನುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ: Parliament: ಸಂಸತ್ ಗೆ ನುಗ್ಗಿದ ಇಬ್ಬರ ಗುರುತು ಪತ್ತೆ; ಯಾರೀತ ಮೈಸೂರು ಮೂಲದ ಮನೋರಂಜನ್?
ಬಂಧನಕ್ಕೊಳಗಾದವರು ಉತ್ತರ ಭಾರತ ಮೂಲದ ಸಾಗರ್ ಶರ್ಮಾ ಮತ್ತು ಮೈಸೂರಿನ ಮನೋರಂಜನ್ ಡಿ ಎಂದು ಗುರುತಿಸಲಾಗಿದೆ.ಸಂಸತ್ತಿನ ಆವರಣದ ಹೊರಗೆ ಘೋಷಣೆಗಳನ್ನು ಕೂಗಿ ಕಲರ್ ಸ್ಪ್ರೇ ಹಾರಿಸಿದವರು ಅನ್ಮೋಲ್ ಮತ್ತು ನೀಲಂ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಸಂಚಿನಲ್ಲಿ ಭಾಗಿಯಾಗಿದ್ದು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ನಾಲ್ವರಿಗೂ ಪರಸ್ಪರ ಪರಿಚಯವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದರು ಮತ್ತು ಯೋಜನೆಯನ್ನು ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ.
“ನಾವಾಗಿಯೇ ಸಂಸತ್ತನ್ನು ತಲುಪಿದ್ದು, ನಮಗೆ ಯಾವುದೇ ಸಂಘಟನೆಯೊಂದಿಗೆ ಒಡನಾಟವಿಲ್ಲ ಎಂದು ಅವರು ಹೇಳಿರುವುದಾಗಿ, ವಿಚಾರಣೆಗಾಗಿ ವಿಶೇಷ ತಂಡವನ್ನು ರಚಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.