Advertisement

ಮಹಿಳಾ ಮೀಸಲು ಅಂಗೀಕಾರಕ್ಕೆ ಒತ್ತಾಯ

07:30 AM Mar 09, 2018 | Team Udayavani |

ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನದ ಎರಡನೇ ಭಾಗ ಆರಂಭವಾಗಿ ಗುರುವಾರಕ್ಕೆ 4 ದಿನ ಪೂರ್ಣಗೊಂಡರೂ, ಪ್ರತಿಪಕ್ಷಗಳ ಗದ್ದಲದಿಂದಾಗಿ ಕಲಾಪ ಮಾತ್ರ ನಡೆದೇ ಇಲ್ಲ. ಆದರೆ, ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗುರುವಾರ ಮಹಿಳೆಯರಿಗೆ ಶೇ.33 ಮೀಸಲು ನೀಡುವ ಮಸೂದೆ ಅಂಗೀಕರಿಸಬೇಕು ಎಂಬ ಒತ್ತಾಯ ಕೇಳಿಬಂದಿತು.

Advertisement

ಲೋಕಸಭೆಯಲ್ಲಿ ಟಿಡಿಪಿ, ಎಐಎಡಿಎಂಕೆ, ಟಿಆರ್‌ಎಸ್‌ ಮತ್ತು ಟಿಎಂಸಿ ಸದಸ್ಯರು  ಗದ್ದಲ ಎಬ್ಬಿಸಿದರು. ಟಿಡಿಪಿ ಸದಸ್ಯರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರೆ,  ಕಾಂಗ್ರೆಸ್‌ ಸದಸ್ಯರು ಪಿಎನ್‌ಬಿ ಹಗರಣ ಮುಂದಿಟ್ಟುಕೊಂಡು ಗದ್ದಲ ಎಬ್ಬಿಸಿದರು. ಕೋಲಾಹಲದ ನಡುವೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌, ಪ್ರಶ್ನೋತ್ತರ ಕಲಾಪ ಮುಂದುವರಿಸುವಂತೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ಗೆ ಮನವಿ ಮಾಡಿಕೊಂಡರು.  

ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿರುವಂತೆಯೇ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಅಂಗೀಕರಿಸಬೇಕು ಎಂದು ಒತ್ತಾಯಿಸಲಾಯಿತು. ಸದನ ಸಮಾವೇಶವಾಗುತ್ತಿದ್ದಂತೆ ಒಂದು ಗಂಟೆ ಕಾಲ ಪಕ್ಷಬೇಧ ಮರೆತು ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಕ್ರೌರ್ಯ, ಹಿಂಸೆ ಬಗ್ಗೆ ಸಂಸದರು ಕಳವಳ ವ್ಯಕ್ತಪಡಿಸಿದರು.  ಚರ್ಚೆ ಮುಕ್ತಾಯವಾಗುತ್ತಿದ್ದಂತೆ ರಾಜ್ಯಸಭೆಯಲ್ಲಿ ಟಿಡಿಪಿ, ಎಐಎಡಿಎಂಕೆ  ಸದಸ್ಯರು ಸಭಾಪತಿಗಳ ಪೀಠದ ಮುಂಗಟ್ಟೆಗೆ ಧಾವಿಸಿ, ಕಾವೇರಿ ಮೇಲುಸ್ತುವಾರಿ ಮಂಡಳಿ ರಚನೆ, ಪಿಎನ್‌ಬಿ ಹಗರಣ ಸೇರಿ ಹಲವು ವಿಚಾರಗಳ ಬಗ್ಗೆ ಘೋಷಣೆ ಕೂಗಿದರು. ಅದಕ್ಕೆ ಸಭಾಪತಿ ವೆಂಕಯ್ಯ ನಾಯ್ಡು ಕೋಪೋದ್ರಿಕ್ತರಾಗಿ ಆಕ್ಷೇಪಿಸಿ, 2 ಗಂಟೆ ವರೆಗೆ ಕಲಾಪ ಮುಂದೂಡಿದರು. 

ಮಧ್ಯಪ್ರವೇಶ ಸಾಧ್ಯವಿಲ್ಲ: ದೇಶಾದ್ಯಂತ ಖಾಸಗಿ ಸಂಸ್ಥೆಗಳು ನೀಡುವ ಕೋಚಿಂಗ್‌ ಸೆಂಟರ್‌ಗಳನ್ನು ನಿಯಂತ್ರಿರುವುದು ಕೇಂದ್ರಕ್ಕೆ ಸಾಧ್ಯವಿಲ್ಲ. ಅದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ರಾಜ್ಯಸಭೆಗೆ ತಿಳಿಸಲಾಗಿದೆ. ಇದೇ ವೇಳೆ ಜಿಎಸ್‌ಟಿ ಜಾರಿ ಬಳಿಕ ವಿವಿಧ ಕ್ಷೇತ್ರಗಳಲ್ಲಿ ತೆರಿಗೆ ನಷ್ಟ ಉಂಟಾದ ಹಿನ್ನೆಲೆಯಲ್ಲಿ 85,315 ಕೋಟಿ ರೂ. ಮೊತ್ತ ವೆಚ್ಚ ಮಾಡುವ ಬಗ್ಗೆ ಕೇಂದ್ರ  ಸಂಸತ್‌ನ ಅನುಮತಿ ಕೋರಿದೆ. 

ಕವಿತೆ ವಾಚಿಸಿದ ಸ್ಪೀಕರ್‌ 
ಕಲಾಪ ಆರಂಭವಾಗುವುದಕ್ಕಿಂತ ಮೊದಲು ಸ್ಪೀಕರ್‌ ಸುಮಿತ್ರಾ ಮಹಾಜನ್‌, ವಿಶ್ವ ಮಹಿಳಾ ದಿನಾಚರಣೆ ಶುಭಾಶಯ ಕೋರಿದರು. “ಪುರುಷ ಮತ್ತು ಮಹಿಳೆಯನ್ನು ಮಾನವತೆಯ ಎರಡು ರೆಕ್ಕೆಗಳು ಎಂದು ಪರಿಗಣಿಸಬೇಕು. ಅವರ ಅಭಿವೃದ್ಧಿಯೇ ಪ್ರಮುಖವಾಗಿರಬೇಕು’ ಎಂದರು. ಜತೆಗೆ ಮಹಿಳಾ ಸಬಲೀಕರಣದ ಬಗ್ಗೆ ಕವಿತೆಗಳನ್ನು ವಾಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next