Advertisement

NEET ಗದ್ದಲಕ್ಕೆ ಸಂಸತ್‌ ಕಲಾಪ ಬಲಿ; ಉಭಯ ಸದನದಲ್ಲಿ ಕೋಲಾಹಲ

12:23 AM Jun 29, 2024 | Team Udayavani |

ಹೊಸದಿಲ್ಲಿ: ನೀಟ್‌ ಅಕ್ರಮ ವಿಚಾರ ಶುಕ್ರವಾರ ಸಂಸತ್‌ನ ಎರಡೂ ಸದನಗಳ ಕಲಾಪಗಳನ್ನು ಬಲಿಪಡೆದುಕೊಂಡಿದೆ. ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಲೇ ಅಕ್ರಮ ಆರೋಪಗಳ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ವಿಪಕ್ಷಗಳು ಪಟ್ಟುಹಿಡಿದವು. ಸರಕಾರ ಇದಕ್ಕೆ ಒಪ್ಪದ್ದರಿಂದ ಗದ್ದಲ ಉಂಟಾಗಿ, ದಿನದ ಮಟ್ಟಿಗೆ ಕಲಾಪವನ್ನು ಮುಂದೂಡ ಬೇಕಾಯಿತು.

Advertisement

ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಗದ್ದಲ ಶುರುವಾಗಿದ್ದರಿಂದ ಸ್ಪೀಕರ್‌ ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿಕೆ ಮಾಡಿದರು. 12 ಗಂಟೆಗೆ ಸದನ ಸಮಾವೇಶಗೊಂಡಾಗಲೂ ವಿಪಕ್ಷಗಳು 1,500 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿದ್ದನ್ನು ಪ್ರಶ್ನಿಸಿ ಗದ್ದಲ ಎಬ್ಬಿಸಿದವು. ಈ ವೇಳೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಗೊತ್ತುವಳಿ ಮೇಲಿನ ಚರ್ಚೆ ಬಳಿಕವೇ ಪರೀಕ್ಷಾ ಅಕ್ರಮದ ಬಗ್ಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ ಎಂದರು.

ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತನಾಡಿ “ನೀಟ್‌ ಅಕ್ರಮ ದೇಶಕ್ಕೆ ಸಂಬಂಧಿಸಿದ ವಿಚಾರ. ಅದರ ಬಗ್ಗೆ ಮೊದಲು ಸಮಗ್ರ ಚರ್ಚೆ ನಡೆಯಬೇಕು’ ಎಂದರು. ಸರಕಾರ ಮತ್ತು ವಿಪಕ್ಷಗಳು ಪಟ್ಟು ಸಡಿಲಿಸದ ಕಾರಣ ಗದ್ದಲ ಉಂಟಾಗಿ ಕಲಾಪ ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.

ಗೊತ್ತುವಳಿ ಮಂಡಿಸಿದ ಕರ್ನಾಟಕ ಸಂಸದ: ರಾಜ್ಯಸಭೆಯಲ್ಲಿ ಕೂಡ ನೀಟ್‌ ಅಕ್ರಮ ಚರ್ಚೆಗೆ ಆಗ್ರಹಿಸಿ ಕರ್ನಾಟಕದ ಕಾಂಗ್ರೆಸ್‌ ಸಂಸದ ಸಯ್ಯದ್‌ ನಾಸಿರ್‌ ಹುಸೇನ್‌ ಗೊತ್ತುವಳಿ ಮಂಡಿಸಿದರು. ಆದರೆ ಅಲ್ಲೂ ಕೋಲಾಹಲದಿಂದಾಗಿ ಚರ್ಚೆ ಸಾಧ್ಯವಾಗದೇ ಕಲಾಪ ಮುಂದೂಡಲ್ಪಟ್ಟಿತು.

ರಾಹುಲ್‌ ಗಾಂಧಿ ಮೈಕ್‌ ಆಫ್: ಆರೋಪ: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ನೀಟ್‌ ಅಕ್ರಮದ ಬಗ್ಗೆ ಮಾತಾಡುವ ವೇಳೆ ಮೈಕ್‌ ಆಫ್ ಮಾಡಲಾಗಿದೆ ಎಂದು ಕಾಂಗ್ರೆಸ್‌ ಸಂಸದ ದೀಪೇಂದರ್‌ ಹೂಡಾ ಆರೋಪಿಸಿದ್ದಾರೆ. ಹರಿಯಾಣದಲ್ಲಿ ಕೂಡ ನೂರಾರು ವಿದ್ಯಾರ್ಥಿಗಳಿಗೆ ಅಕ್ರಮದಿಂದ ಅನ್ಯಾಯವಾಗಿದೆ ಎಂದು ದೂರಿದ್ದಾರೆ.

Advertisement

ಇದು ಇತಿಹಾಸದಲ್ಲೇ ಮೊದಲು: ಖರ್ಗೆ ನಡೆಗೆ ಧನಕರ್‌ ಕಳವಳ
ವಿಪಕ್ಷಗಳ ಪ್ರತಿಭಟನೆಯ ಸಮಯದಲ್ಲಿ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸದನದ ಬಾವಿಗೆ ಇಳಿದಿದ್ದಕ್ಕೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಪಕ್ಷ ನಾಯಕರೊಬ್ಬರು ಸದನದ ಬಾವಿಗೆ ಇಳಿದ ಘಟನೆ ಇತಿಹಾಸದಲ್ಲೇ ಮೊದಲ ಬಾರಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರದ ನಿರ್ಧಾರ ಸರಿ ಇದೆ: ಎಚ್‌ಡಿಡಿ
ನೀಟ್‌ ಅಕ್ರಮದ ತನಿಖೆಯನ್ನು ಕೇಂದ್ರ ಸರಕಾರ ಸಿಬಿಐಗೆ ವಹಿಸಿದ್ದು ಸರಿಯಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ವಿಪಕ್ಷಗಳ ಕೋಲಾಹಲದ ನಡುವೆ ಮಾತನಾಡಿದ ಅವರು, ಕೇಂದ್ರ ಸರಕಾರ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿದ್ದು ಸರಿಯಾಗಿದೆ. ಅಕ್ರಮದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕೇಂದ್ರ ಸರಕಾರ ಸರಿಯಾದ ರೀತಿಯಲ್ಲಿ ತನಿಖೆ ನಡೆಸದೆ ಯಾರ ಮೇಲೂ ಆರೋಪ ಹೊರಿಸಲು ಆಗುವುದಿವಿಲ್ಲ ಎಂದಿದ್ದಾರೆ. ಇದೇ ಪ್ರಕರಣ ಮುಂದಿಟ್ಟು, ಸದನದಲ್ಲಿ ಕಲಾಪಕ್ಕೆ ಅಡ್ಡಿ ಮಾಡುವುದು ಸರಿಯಲ್ಲ ಎಂದೂ ಅವರು ಹೇಳಿದರೂ, ವಿಪಕ್ಷಗಳು ಲಕ್ಷ್ಯಕೊಡಲಿಲ್ಲ.

ನೀಟ್‌ ಅಕ್ರಮ ಬಗ್ಗೆ ರಚನಾತ್ಮಕ ಚರ್ಚೆಯಾಗಲಿ: ರಾಹುಲ್‌
ನೀಟ್‌ ಹಗರಣದ ಕುರಿತು ರಚನಾತ್ಮಕ ಚರ್ಚೆ ಯಾಗಲು ಐಎನ್‌ಡಿಐಎ ಒಕ್ಕೂಟ ಬಯಸುತ್ತದೆ. ಆದರೆ ಆಡಳಿತ ಸರಕಾರ ಅದಕ್ಕೆ ಅನುವು ಮಾಡಿಕೊಡುತ್ತಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಶುಕ್ರವಾರ ವೀಡಿಯೋ ಸಂದೇಶವೊಂದಲ್ಲಿ ಮಾತನಾಡಿ, ಬಳಿಕ ವೀಡಿಯೋವನ್ನು ಟ್ವೀಟ್‌ ಮಾಡಿರುವ ರಾಹುಲ್‌, ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಗಂಭೀರ ವಿಷಯ ವಾಗಿದ್ದು, ಇದು ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲೆ ಪರಿಣಾಮ ಬೀರಿದೆ. ಸಾವಿರಾರು ವಿದ್ಯಾರ್ಥಿಗಳ ವೈದ್ಯರಾಗಬೇಕೆಂಬ ಕನಸು ನಾಶವಾಗಿದೆ. ಸಮಸ್ಯೆ ಬಗ್ಗೆ ಚರ್ಚಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಪ್ರಧಾನಿ ಮೋದಿ ಅವರಿಗೆ ಆಗ್ರಹಿಸುತ್ತೇವೆ ಎಂದಿದ್ದಾರೆ.

ಝಾರ್ಖಂಡ್‌ನ‌ ಶಾಲೆ ಪ್ರಾಂಶುಪಾಲರ ಬಂಧನ
ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಝಾರ್ಖಂಡ್‌ನ‌ ಹಜಾರಿಬಾಘ…ನ ಶಾಲೆಯೊಂದರ ಪ್ರಾಂಶುಪಾಲ ಹಾಗೂ ಉಪ ಪ್ರಾಂಶುಪಾಲರನ್ನು ಸಿಬಿಐ ಶುಕ್ರ ವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಟಿಎ ನಡೆಸಿದ್ದ ನೀಟ್‌-ಯುಜಿ ಪರೀಕ್ಷೆಯಲ್ಲಿ, ಓಯಸಿಸ್‌ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್‌ ಹಖ್‌ ಹಜಾರಿಬಾಘ… ನಗರದ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಉಪ ಪ್ರಾಂಶುಪಾಲ ಇಮಿ¤ಯಾಜ್‌ ಆಲಂ ಓಯಸಿಸ್‌ ಶಾಲೆಯಲ್ಲಿ ಕೇಂದ್ರ ಸಂಯೋಜಕರು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ವೀಕ್ಷಕರನ್ನಾಗಿ ನೇಮಿಸಿತ್ತು. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಇವರ ಪಾತ್ರದ ಬಗ್ಗೆ ಅನುಮಾನವಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಸಚಿವ ಕಿಶನ್‌ ರೆಡ್ಡಿ ಮನೆಗೆ ನುಗ್ಗಲು ವಿದ್ಯಾರ್ಥಿಗಳ ಯತ್ನ
ನೀಟ್‌ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಕೇಂದ್ರ ಸಚಿವ ಜಿ. ಕಿಶನ್‌ ರೆಡ್ಡಿ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದ ಘಟನೆ ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದಿದೆ. ವಿದ್ಯಾರ್ಥಿಗಳನ್ನು ಅರ್ಧಕ್ಕೆ ತಡೆದ ಪೊಲೀಸರು, ಎಲ್ಲರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಎನ್‌ಎಸ್‌ಯುಐ, ಎಸ್‌ಎಫ್ಐ, ಎಐಎಸ್‌ಎಫ್ ಮತ್ತು ಪಿಡಿಎಸ್‌ಯು ಸಂಘಟನೆಗಳ ಸದಸ್ಯರು ರೆಡ್ಡಿ ಅವರ ನಿವಾಸದ ಬಳಿ ಜಮಾಯಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ವಿದ್ಯಾರ್ಥಿ ನಾಯಕ ಅಭಿಜಿತ್‌ ಯಾದವ್‌ ಜತೆ ಒಂದಷ್ಟು ವಿದ್ಯಾರ್ಥಿಗಳು ಸಚಿವರ ಮನೆಯತ್ತ ಧಾವಿಸಿದ್ದು, ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next