Advertisement

ರೈತರ ಆಯೋಗಕ್ಕೆ ಅಸ್ತು

09:41 AM Jul 21, 2019 | mahesh |

ನವದೆಹಲಿ: ರೈತರ ವಿಚಾರ ಮತ್ತು ಸಂಕಷ್ಟಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಮಾನ್ಯತೆ ಇರುವ ರಾಷ್ಟ್ರೀಯ ರೈತರ ಆಯೋಗ (ಎನ್‌ಎಫ್ಸಿ) ರಚಿಸುವ ನಿರ್ಣಯವು ಸರ್ವಾನುಮತದಿಂದ ಅಂಗೀಕಾರವಾಗಿದೆ.

Advertisement

ರಾಜ್ಯಸಭೆಯಲ್ಲಿ ಶುಕ್ರವಾರ ಈ ಕುರಿತು ಚರ್ಚೆಯಾಗಿದ್ದು, ವಿಶೇಷವೆಂದರೆ ಪಕ್ಷಾತೀತವಾಗಿ ಇದಕ್ಕೆ ಬೆಂಬಲ ವ್ಯಕ್ತವಾಗಿದೆ. ಬಿಜೆಪಿ ಸಂಸದ ವಿಜಯ ಪಾಲ್ ಸಿಂಗ್‌ ತೋಮರ್‌ ಮಂಡಿಸಿದ ಸಂಸದರ ಖಾಸಗಿ ಮಸೂದೆ ಚರ್ಚೆ ವೇಳೆ ಈ ಅಂಶ ಪ್ರಸ್ತಾಪ ಮಾಡಿದ್ದಾರೆ. ಜತೆಗೆ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಲ್ಲಿ ರೈತರಿಗೆ ನೀಡಲಾಗುವ ಮೊತ್ತವನ್ನು 6 ಸಾವಿರ ರೂ.ಗಳಿಂದ 10 ಸಾವಿರ ರೂ.ಗಳಿಗೆ ಹೆಚ್ಚಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.

ದೇಶದಲ್ಲಿ ಪ್ರತಿ ವರ್ಷಕ್ಕೆ 3 ಬೆಳೆ ತೆಗೆಯುವ ಸಾಮರ್ಥ್ಯ ವಿದೆ. ರೈತರ ಆತ್ಮಹತ್ಯೆ ವಿಚಾರ ಕಳವಳಕಾರಿ. ಇಂಥ ಪ್ರವೃತ್ತಿಗೆ ನಿಯಂತ್ರಣ ಹೇರಬೇಕು. ಈ ಮೂಲಕ ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ರೈತರಿಗೆ ನೆರವು ನೀಡಬೇಕಾಗಿದೆ ಎಂದು ತೋಮರ್‌ ಹೇಳಿದ್ದಾರೆ. ಕೇಂದ್ರ ಸರ್ಕಾರ ಕೃಷಿಗೆ ಬಳಕೆ ಮಾಡುವ ಪರಿಕರಗಳನ್ನು ಸರಕು ಮತ್ತು ಸೇವಾ ತೆರಿಗೆಗಳ ವ್ಯಾಪ್ತಿಯಿಂದ ಹೊರಗಿಡಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಮೊದಲ ಹಂತದಲ್ಲಿ ಸುಮಾರು 2.69 ಲಕ್ಷ ರೈತರು ಲಾಭ ಪಡೆಯಲು ವಿಫ‌ಲರಾಗಿದ್ದಾರೆ. ಬ್ಯಾಂಕ್‌ ಖಾತೆಗಳಲ್ಲಿ ಏನಾದರೂ ಲೋಪವಿದೆಯೇ ಎಂದು ರಾಜ್ಯ ಸರ್ಕಾರಗಳು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ ಎಂದು ಸಚಿವ ಪುರುಷೋತ್ತಮ ರುಪಾಲ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ತಿದ್ದುಪಡಿ ವಿಧೇಯಕ ಮಂಡನೆ: ಪ್ರತಿಪಕ್ಷಗಳ ಆಕ್ಷೇಪಗಳ ನಡುವೆ ಲೋಕಸಭೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ. ಚುನಾವಣಾ ಆಯುಕ್ತರಿಗೆ ಸಮನಾಗಿರುವ ಮಾನ್ಯತೆ ಈಗ ಮಾಹಿತಿ ಹಕ್ಕು ಆಯುಕ್ತರಿಗೆ ಇದೆ. ತಿದ್ದುಪಡಿಯಲ್ಲಿ ಅದನ್ನು ಹಿಂಪಡೆವ ಪ್ರಸ್ತಾವನೆ ಇದೆ. ಜತೆಗೆ ವೇತನದಲ್ಲಿಯೂ ಸಮಾನತೆ ಇರುವುದನ್ನು ಬದಲು ಮಾಡುವ ಇರಾದೆ ಸರ್ಕಾರದ್ದು. ಮಾಹಿತಿಯನ್ನು ಇನ್ನಷ್ಟು ಸುಲಭವಾಗಿ ಮತ್ತು ಸಾಂಸ್ಥೀಕರಣಗೊಳಿಸಿ ನೀಡುವುದು ಆದ್ಯತೆಯಾಗಿದೆ. ಜತೆಗೆ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿದಂತಾಗುತ್ತದೆ ಎಂದು ವಿಧೇಯಕ ಮಂಡಿಸಿದ ಪ್ರಧಾನ ಮಂತ್ರಿಗಳ ಕಚೇರಿಯ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ. ಕಾಂಗ್ರೆಸ್‌ ಸಂಸದರು ಸರ್ಕಾರ ಮಾಹಿತಿ ಹಕ್ಕು ಕಾಯ್ದೆ ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ದೂರಿದರು.

Advertisement

ಅನುಮೋದನೆ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರನ್ನು ನೇಮಿಸುವ ಕುರಿತಾಗಿ ಇರುವ ಮಾನವ ಹಕ್ಕುಗಳ ರಕ್ಷಣೆ (ತಿದ್ದುಪಡಿ) ವಿಧೇಯಕ 2019ಕ್ಕೆ ಲೋಕಸಭೆ ಅನುಮೋದನೆ ನೀಡಿದೆ.

ಮಾರ್ಕೆಟಿಂಗ್‌ ಮಾಡಬೇಡಿ: ಪಶ್ಚಿಮ ಬಂಗಾಳದ ಬಗ್ಗೆ ಮಾರ್ಕೆಟಿಂಗ್‌ ಮಾಡಬೇಡಿ ಎಂದು ಟಿಎಂಸಿ ಸಂಸದ ಸುದೀಪ್‌ ಬಂದೋಪಾಧ್ಯಾಯಗೆ ಸ್ಪೀಕರ್‌ ಓಂ ಬಿರ್ಲಾ ಎಚ್ಚರಿಕೆ ನೀಡಿದ ಪ್ರಸಂಗ ನಡೆದಿದೆ. ಪ್ರಶ್ನೋತ್ತರ ವೇಳೆಯಲ್ಲಿ ಬಂದೋಪಾಧ್ಯಾಯ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಜಾರಿ ಮಾಡಿರುವ ಆರೋಗ್ಯ ಯೋಜನೆ ಬಗ್ಗೆ ವಿವರಿಸಲಾರಂಭಿಸಿದರು. ಈ ಸಂದರ್ಭದಲ್ಲಿ ಸ್ಪೀಕರ್‌ ನಿಮ್ಮ ರಾಜ್ಯದ ಯೋಜನೆ ಬಗ್ಗೆ ಮಾತನಾಡಬೇಡಿ ಎಂದರು.

ಪರಿಶೀಲನೆಗೆ ಆಗ್ರಹ: ನಿಜವಾದ ನಾಗರಿಕರು ಹೊರಗೆ ಉಳಿಯದಂತಾಗಲು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಪರಿಶೀಲನೆಗೆ ಒಳಪಡಿಸಬೇಕು ಎಂಬ ಒತ್ತಾಯ ರಾಜ್ಯಸಭೆಯಲ್ಲಿ ಮಾಡಲಾಗಿದೆ. ಕಾಂಗ್ರೆಸ್‌ನ ರಿಪುನ್‌ ಬೋರಾ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸಾವಿರಾರು ಅಸ್ಸಾಮಿಗರನ್ನು ವಿದೇಶಿಯರು ಎಂದು ಘೋಷಿಸಲಾಗಿದೆ. ಅವರಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಹಿಂದೂಗಳು, ಬಂಗಾಳಿಗಳು ಮತ್ತು ಗೂರ್ಖಾಗಳು ಸೇರಿದ್ದಾರೆ. ಇದರಿಂದಾಗಿ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಬ್ಯಾಂಕುಗಳ ಖಾಸಗೀಕರಣ ಬೇಡ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವುದು ಬೇಡ. ಈ ಬಗ್ಗೆ ಕೇಂದ್ರ ಸರ್ಕಾರ ಘೋಷಣೆ ಹೊರಡಿಸಬೇಕು ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಒತ್ತಾಯಿಸಿದ್ದಾರೆ. ಜು.19ರ ಇದೇ ದಿನ 50 ವರ್ಷಗಳ ಹಿಂದೆ ದಿ.ಇಂದಿರಾ ಗಾಂಧಿ 14 ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ್ದರು ಎಂದಿದ್ದಾರೆ.

ಕಿಸಾನ್‌ ಆಯೋಗದ ನಿರ್ಣಯದಲ್ಲೇನಿದೆ?

•ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಬೆಳೆಗಳ ಖರೀದಿ ಮತ್ತು ಮಾರಾಟ ನಡೆಯದಂತೆ ನೋಡಿಕೊಳ್ಳುವುದು

•ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ

•ಕಿಸಾನ್‌ ಸಮ್ಮಾನ್‌ ನಿಧಿಯನ್ವಯ ರೈತರಿಗೆ ನೀಡಲಾಗುವ ಮೊತ್ತವನ್ನು ಈಗ ಇರುವ 6 ಸಾವಿರದಿಂದ 10 ಸಾವಿರಕ್ಕೇರಿಸುವುದು

•ಕೃಷಿಗೆ ಸಂಬಂಧಿಸಿದ ಎಲ್ಲ ಅತ್ಯಾಧುನಿಕ ತಂತ್ರಜ್ಞಾನ, ವಿಧಾನಗಳ ಕುರಿತು ರೈತರಿಗೆ ಮಾಹಿತಿ ನೀಡುವುದು

•ಆ ಮೂಲಕ ಕೃಷಿ ಚಟುವಟಿಕೆಯನ್ನು ಸರಳ ಹಾಗೂ ಕ್ಷಿಪ್ರಗೊಳಿಸುವುದು

•ಬೆಳೆ ವಿಮೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು

•ಹಳ್ಳಿ ಹಾಗೂ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಎಲ್ಲ ಸರ್ಕಾರಿ ಸೇವೆಗಳಿಗೂ ಇಂಟರ್ನೆಟ್ ಮತ್ತು ವೈಫೈ ಸೌಲಭ್ಯ ಕಲ್ಪಿಸುವುದು. ಆ ಮೂಲಕ ಜಗತ್ತಿನ ಬೆಳವಣಿಗೆಗಳ ಕುರಿತು ರೈತರಿಗೆ ಮಾಹಿತಿ ಸಿಗುವಂತೆ ಮಾಡುವುದು

•ರೈತರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ‘ಭಾರತ ರತ್ನ’ ಗೌರವ ನೀಡುವುದು

ಅಧಿವೇಶನ ಆಗಸ್ಟ್‌ 2ರವರೆಗೆ ವಿಸ್ತರಣೆ?
ಸಂಸತ್‌ ಅಧಿವೇಶನವನ್ನು ಆಗಸ್ಟ್‌ 2 ರವರೆಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ತ್ರಿವಳಿ ತಲಾಖ್‌ ಸೇರಿದಂತೆ ಮಹತ್ವಾಕಾಂಕ್ಷಿ ವಿಧೇಯಕಗಳು ಸಂಸತ್‌ನ ಅಂಗೀಕಾರ ಪಡೆಯುವುದಕ್ಕೆ ಬಾಕಿ ಇದೆ. ಹೀಗಾಗಿ, ಈ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ. ಮಂಗಳವಾರ ನಡೆದಿದ್ದ ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅಧಿವೇಶನ ವಿಸ್ತರಿಸುವುದರ ಬಗ್ಗೆ ಸುಳಿವು ನೀಡಿದ್ದರು. ಸದ್ಯದ ಪ್ರಕಾರ ಜು.26ಕ್ಕೆ ಅಧಿವೇಶನ ಮುಕ್ತಾಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next