Advertisement

ಇಂದಿನಿಂದ ಮುಂಗಾರು ಅಧಿವೇಶನ: ಆ.12ರ ವರೆಗೆ ನಡೆಯಲಿದೆ ಕಲಾಪ

09:09 PM Jul 17, 2022 | Team Udayavani |

ನವದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಜು.18ರಂದು ಚುನಾವಣೆ ನಡೆಯಲಿರುವಂತೆಯೇ, ಸಂಸತ್‌ನ ಮುಂಗಾರು ಅಧಿವೇಶನ ಕೂಡ ಶುರುವಾಗಲಿದೆ.

Advertisement

ಆ.12ರ ವರೆಗೆ ನಡೆಯಲಿರುವ ಅಧಿವೇಶನದಲ್ಲಿ ಕೇಂದ್ರ ಸರ್ಕಾರ 24 ವಿಧೇಯಕಗಳನ್ನು ಮಂಡಿಸಲು ಮುಂದಾಗಿದೆ. ಅದರಲ್ಲಿ ದಂಡು ವಿಧೇಯಕ (ಕಂಟೋನ್ಮೆಂಟ್‌ ವಿಧೇಯಕ), ಬಹು ರಾಜ್ಯಗಳಲ್ಲಿ ಕಾರ್ಯವೆಸಗುವ ಸಹಕಾರಿ ಸಂಸ್ಥೆಗಳ ವಿಧೇಯಕ ಪ್ರಧಾನವಾಗಿದೆ.

ತಮಿಳುನಾಡು ಮತ್ತು ಛತ್ತೀಸ್‌ಗಡಕ್ಕೆ ಸಂಬಂಧಿಸಿದ ಎಸ್‌ಸಿ, ಎಸ್‌ಟಿ ತಿದ್ದುಪಡಿ ವಿಧೇಯಕಗಳೂ ಸೇರಿವೆ. ಇಷ್ಟು ಮಾತ್ರವಲ್ಲದೆ, ಎಂಟು ವಿಧೇಯಕಗಳು ಸಂಸತ್‌ನ ಎರಡೂ ಸದನಗಳಲ್ಲಿ ಅಂಗೀಕಾರ ಪಡೆಯಲು ಬಾಕಿ ಉಳಿದಿವೆ. ಅಧಿವೇಶನದ ನಿಟ್ಟಿನಲ್ಲಿ ನವದೆಹಲಿಯಲ್ಲಿ ಭಾನುವಾರ ಸರ್ವಪಕ್ಷಗಳ ಸಭೆಯೂ ನಡೆದಿತ್ತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅನುಪಸ್ಥಿತಿಯನ್ನು ಕಾಂಗ್ರೆಸ್‌ ಪ್ರಶ್ನಿಸಿ, ಅಸಮಾಧಾನ ವ್ಯಕ್ತಪಡಿಸಿತು. ಹಾಲಿ ಅಧಿವೇಶನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಉಪ-ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಕೊನೆಯ ಅಧಿವೇಶನವಾಗಲಿದೆ. ಜತೆಗೆ ಸೋಮವಾರದ ರಾಷ್ಟ್ರಪತಿ ಚುನಾವಣೆಯ ಫ‌ಲಿತಾಂಶ ಗುರುವಾರ ಪ್ರಕಟವಾಗಲಿದೆ.

ಪದ ನಿಷೇಧ ವಿವಾದ:
ಕೆಲ ದಿನಗಳ ಹಿಂದಷ್ಟೇ ಕಲಾಪದಲ್ಲಿ ನಿಷೇಧಿತ ಶಬ್ದಗಳ ಬಗ್ಗೆ ಹೊರಡಿಸಲಾಗಿದ್ದ ಸೂಚನೆಯೂ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸ್ಪೀಕರ್‌ ಓಂ ಬಿರ್ಲಾ ಕೂಡ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು. ಅದಕ್ಕೆ ಪೂರಕವಾಗಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಲಾಪದಲ್ಲಿ ಯಾವುದೇ ಪದಗಳ ಬಳಕೆಯ ಬಗ್ಗೆ ನಿಷೇಧ ಹೇರಲಾಗಿಲ್ಲ ಎಂದಿದ್ದಾರೆ.

Advertisement

ಸಭೆಯಲ್ಲಿ 45 ಪಕ್ಷಗಳ ಪೈಕಿ 36 ಪಕ್ಷಗಳ ನಾಯಕರು ಭಾಗವಹಿಸಿದ್ದರು. ಕೇಂದ್ರ ಸರ್ಕಾರ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಅಗ್ನಿಪಥ, ಹಣದುಬ್ಬರ ವಿಚಾರ ಪ್ರಸ್ತಾಪ
ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್‌ ಸಂಸತ್‌ನಲ್ಲಿ ತೈಲೋತ್ಪನ್ನಗಳ ಬೆಲೆಯಲ್ಲಿ ಏರಿಕೆ, ಅಗ್ನಿಪಥ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಮೆರಿಕದ ಡಾಲರ್‌ ಎದುರು ರೂಪಾಯಿ ಇಳಿಕೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಕಲಾಪದಲ್ಲಿ ಪ್ರಸ್ತಾಪಿಸಲು ಗುರುವಾರ(ಜು.14) ನಡೆದಿದ್ದ ಮುಖಂಡರ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ.

ಜು.18- ಶುರುವಾಗುವ ದಿನ
ಆ.12- ಮುಕ್ತಾಯದ ದಿನ
24- ಮಂಡಿಸಲು ಉದ್ದೇಶಿಸಲಾಗಿರುವ ಹೊಸ ವಿಧೇಯಕಗಳು
14- ಅನುಮೋದನೆ ಪಡೆಯಲು ಬಾಕಿ ಇರುವ ವಿಧೇಯಕಗಳು
18 – ಲಭ್ಯವಾಗಲಿರುವ ಸಿಟ್ಟಿಂಗ್‌ಗಳು
108 ಗಂಟೆಗಳು- ಲಭ್ಯವಾಗುವ ಕಲಾಪದ ಅವಧಿಗಳು

Advertisement

Udayavani is now on Telegram. Click here to join our channel and stay updated with the latest news.

Next