Advertisement

ಈ ವಾರ ಸಂಸತ್‌ ಕುತೂಹಲ: ಸದನಕ್ಕೆ ಬರುವರೇ ರಾಹುಲ್‌ ಗಾಂಧಿ?

08:01 PM Aug 06, 2023 | Team Udayavani |

ನವದೆಹಲಿ: ಸೋಮವಾರದಿಂದ ಸಂಸತ್‌ನ ಮುಂಗಾರು ಅಧಿವೇಶನದ ಕೊನೆಯ ವಾರದ ಕಲಾಪಗಳು ಆರಂಭವಾಗಲಿವೆ. ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಕುರಿತು ಲೋಕಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಲಿದ್ದರೆ, ರಾಜ್ಯಸಭೆಯು ದೆಹಲಿ ಸೇವೆಗಳ ವಿಧೇಯಕದ ಕುರಿತ ಬಿಸಿಬಿಸಿ ಚರ್ಚೆಗೆ ಸಾಕ್ಷಿಯಾಗಲಿದೆ.

Advertisement

ಇದಲ್ಲದೆ,  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ ತಂದಿದ್ದರ ಕುರಿತು ಲೋಕಸಭೆ ಕಾರ್ಯಾಲಯವು ಸೋಮವಾರ ಪರಿಶೀಲನೆ ನಡೆಸಿ, ಅವರ ಸಂಸತ್‌ ಸದಸ್ಯತ್ವವನ್ನು ಪುನಸ್ಥಾಪಿಸುವ ಕುರಿತು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಒಂದು ವೇಳೆ, ರಾಹುಲ್‌ ಸದಸ್ಯತ್ವ ಮರಳಿ ಸಿಕ್ಕಿದರೆ, ಅವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ರಾಹುಲ್‌ ಅವರೇ ಪ್ರತಿಪಕ್ಷಗಳ ಪರವಾಗಿ ಪ್ರಧಾನವಾಗಿ ಮಾತನಾಡುವ ಸಾಧ್ಯತೆಯಿದೆ. ಮಂಗಳವಾರ, ಬುಧವಾರ ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚೆಯಾಗಲಿದೆ. ಸರ್ಕಾರದ ಪರವಾಗಿ ವೈಆರ್‌ಎಸ್‌ ಕಾಂಗ್ರೆಸ್‌, ಬಿಜೆಡಿ ಬೆಂಬಲ ನೀಡುವ ವಾಗ್ಧಾನ ಮಾಡಿದೆ.

ಲೋಕಸಭೆಯ ಸದನ ಸಲಹಾ ಸಮಿತಿಯು ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚೆಗೆ 12 ಗಂಟೆಗಳ ಕಾಲಾವಕಾಶ ಒದಗಿಸಿದ್ದು, ಗುರುವಾರ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯಿಸುವ ನಿರೀಕ್ಷೆಯಿದೆ. ಮಣಿಪುರ ಗಲಭೆ ವಿಚಾರದಲ್ಲಿ ಮೋದಿಯವರೇ ವಿಸ್ತೃತ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿರುವ ಕಾರಣ, ಅಧಿವೇಶನ ಆರಂಭವಾದಾಗಿನಿಂದಲೂ ಅಂದರೆ ಜು.20ರಿಂದಲೂ ಎರಡೂ ಸದನಗಳ ಕಲಾಪಗಳು ವ್ಯರ್ಥವಾಗಿವೆ.

ಇಂದು ರಾಜ್ಯಸಭೆಯಲ್ಲಿ:

ಬಹು ಚರ್ಚಿತ ದೆಹಲಿ ಸೇವಾ ವಿಧೇಯಕವನ್ನು ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಧೇಯಕ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಆಪ್‌ ಸಂಸತ್‌ ಸದಸ್ಯರಿಗೆ ಪಕ್ಷಗಳ ವಿತಿಯಿಂದ ವಿಪ್‌ ನೀಡಲಾಗಿದೆ. ಕಳೆದ ವಾರ ಅದನ್ನು ಲೋಕಸಭೆಯಲ್ಲಿ ಮಂಡಿಸಿ, ಪ್ರತಿಪಕ್ಷಗಳ ಕೋಲಾಹಲದ ನಡುವೆಯೇ ಅದನ್ನು ಅಂಗೀಕರಿಸಲಾಗಿತ್ತು.  ಬಹುಮತ ಇಲ್ಲದೇ ಇದ್ದರೂ, ವಿಧೇಯಕಕ್ಕೆ ಅನುಮೋದನೆ ಪಡೆದುಕೊಳ್ಳುವ ವಿಶ್ವಾಸವನ್ನು ಕೇಂದ್ರ ಸರ್ಕಾರ ಹೊಂದಿದೆ.

Advertisement

ಮದುವೆಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ: ಖಾಸಗಿ ವಿಧೇಯಕ ಮಂಡನೆ

ಮದುವೆಗಳು ಮತ್ತು ಶುಭ ಸಮಾರಂಭಗಳಲ್ಲಿ ದುಂದು ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸಂಸದ ಜಸಿºàರ್‌ ಸಿಂಗ್‌ ಗಿಲ್‌ ಅವರು ಲೋಕಸಭೆಯಲ್ಲಿ ಖಾಸಗಿ ವಿಧೇಯಕವನ್ನು ಮಂಡಿಸಿದ್ದಾರೆ. “ವಿಶೇಷ ಸಂದರ್ಭಗಳಲ್ಲಿ ದುಂದು ವೆಚ್ಚ ತಡೆ ವಿಧೇಯಕವನ್ನು ಮಂಡಿಸಿದ ಪಂಜಾಬ್‌ನ ಖಾದೂರ್‌ ಸಾಹಿಬ್‌ ಕ್ಷೇತ್ರದ ಸಂಸದ, “ಇದು ಹೆಣ್ಣು ಮಕ್ಕಳ ಕುಟುಂಬದ ಮೇಲಿನ ಅನಗತ್ಯ ಹೊರೆಯನ್ನು ಇಳಿಸಲಿದೆ. ಅಲ್ಲದೇ ಇದು ಸಕಾರಾತ್ಮಕ ಬದಲಾವಣೆಯನ್ನು ತರಲಿದ್ದು, ಹೆಣ್ಣು ಭ್ರೂಣ ಹತ್ಯೆಯಂತಹ ಕೃತ್ಯಗಳನ್ನು ತಡೆಯಲಿದೆ’ ಎಂದು ಹೇಳಿದರು. ಈ ಹಿಂದೆಯೂ ಈ ರೀತಿಯ ಖಾಸಗಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.

ವಿಧೇಯಕದಲ್ಲಿ ಏನಿದೆ?

*  ಮದುವೆಗೆ ಗಂಡಿನ ಕಡೆಯವರು ಗರಿಷ್ಠ 50 ಮಂದಿ ಮಾತ್ರ ಬರಬೇಕು.

* ಮದುವೆ ಊಟದಲ್ಲಿ ಗರಿಷ್ಠ 10 ಬಗೆಯ ಆಹಾರಗಳು ಮಾತ್ರ ಇರಬೇಕು.

* ಗರಿಷ್ಠ 2,500 ರೂ.ಗಿಂತ ಹೆಚ್ಚಿನ ಬೆಲೆಯ ಉಡುಗೊರೆಗಳನ್ನು ನೀಡುವಂತಿಲ್ಲ.

ವಿಧೇಯ ಅಂಗೀಕಾರವಾದದ್ದು ಎಷ್ಟು?

12- ರಾಜ್ಯಸಭೆಯಲ್ಲಿ ಅನುಮೋದನೆ ಪಡೆದದ್ದು

15- ಲೋಕಸಭೆಯಲ್ಲಿ ಅಂಗೀಕಾರ ಮಾಡಿದ್ದು

09- ಎರಡೂ ಸದನಗಳಲ್ಲಿ ಸಮ್ಮತಿ ಪಡೆದ ವಿಧೇಯಕಗಳು

12 ಗಂಟೆ- ಅವಿಶ್ವಾಸ ಗೊತ್ತುವಳಿಗೆ ನಿಗದಿಯಾಗಿರುವ ಅವಧಿ

Advertisement

Udayavani is now on Telegram. Click here to join our channel and stay updated with the latest news.

Next