ಹೊಸದಿಲ್ಲಿ: ಈಗಲೇ ಲೋಕಸಭೆಗೆ ಚುನಾವಣೆಗೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 261 ಸ್ಥಾನಗಳಲ್ಲಿ ಜಯಗಳಿಸಲಿದೆ. ಯುಪಿಎ 116 ಮತ್ತು ಇತರ ಪಕ್ಷಗಳು 163 ಸ್ಥಾನಗಳಲ್ಲಿ ಗೆಲ್ಲಲಿವೆ. ‘ಎಬಿಪಿ ನ್ಯೂಸ್’ ನಡೆಸಿದ “ದೇಶ್ ಕಾ ಮೂಡ್’ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. 2014ಕ್ಕೆ ಹೋಲಿಕೆ ಮಾಡಿದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸ್ಥಾನಗಳ ಸಂಖ್ಯೆಯಲ್ಲಿ ಕಡಿಮೆಯಾಗಲಿದೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷ ಜತೆಯಾಗಿ ಸ್ಪರ್ಧಿಸದೇ ಇದ್ದರೆ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ. ಬಿಜೆಪಿಯನ್ನು ಎದುರಿಸಲು ಟಿಡಿಪಿ ನಾಯಕ ನಾಯ್ಡು ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳ ನಾಯಕರನ್ನು ಭೇಟಿ ಮಾಡಿರುವಂತೆಯೇ ಈ ಸಮೀಕ್ಷೆ ಪ್ರಸಾರವಾಗಿದೆ.
ಪ್ರಧಾನಿ ಮೋದಿ ಬಗ್ಗೆ ಶೇ.56 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಶೇ.36 ಮಂದಿ ಪ್ರಶಂಸೆ ಮಾಡಿದ್ದಾರೆ. ಜತೆಗೆ ಅವರಿಬ್ಬರ ಪ್ರಭಾವಳಿಯೂ ಕೊಂಚ ಪ್ರಮಾಣದಲ್ಲಿ ತಗ್ಗಿದೆ ಎಂದು ‘ಎಬಿಪಿ ನ್ಯೂಸ್’ ವರದಿ ಮಾಡಿದೆ.
ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಲ್ಲಿ ಪ್ರಾದೇಶಿಕ ಪಕ್ಷಗಳು 75 ಸ್ಥಾನಗಳನ್ನು ಪಡೆದುಕೊಳ್ಳಲಿದ್ದರೆ ಯುಪಿಎ 34 ಸ್ಥಾನಗಳನ್ನು ಗಳಿಸಲಿದೆ. ಎನ್‌ಡಿಎ ಕೇವಲ 20 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಲಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನ ಪಡೆಯಲಿದೆ.
ಇದೇ ವೇಳೆ ‘ರಿಪಬ್ಲಿಕ್’ ಇಂಗ್ಲಿಷ್ ಸುದ್ದಿವಾಹಿನಿಯೂ ಸಮೀಕ್ಷೆ ನಡೆಸಿದ್ದು ಎನ್‌ಡಿಎ 261, ಯುಪಿಎ 119, ಇತರ ಪಕ್ಷಗಳು 163 ಸ್ಥಾನಗಳಲ್ಲಿ ಜಯಗಳಿಸಲಿವೆ. ಈ ವಾಹಿನಿ ಪ್ರಕಾರ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಹಿನ್ನಡೆಯಾಗಲಿದೆ. ಎನ್‌ಡಿಎಗೆ 31, ಕಾಂಗ್ರೆಸ್, 5, ಮಹಾ ಮೈತ್ರಿ ಕೂಟ 44 ಸ್ಥಾನಗಳಲ್ಲಿ ಜಯಗಳಿಸಲಿವೆ. ಕರ್ನಾಟಕದ 28ರಲ್ಲಿ ಬಿಜೆಪಿಗೆ 18, ಕಾಂಗ್ರೆಸ್‌ಗೆ 7, ಜೆಡಿಎಸ್‌ಗೆ 3 ಸ್ಥಾನ ಲಭಿಸಲಿದೆ.