ನವದೆಹಲಿ: ಭಾರತದ ಇತಿಹಾಸದಲ್ಲಿ ನಾನಾ ಕ್ರಾಂತಿಕಾರಕ ಬದಲಾವಣೆಗಳಿಗೆ ಸಾಕ್ಷಿಯಾಗಿದ್ದ 96 ವರ್ಷ ಹಿಂದಿನ ಸಂಸತ್ ಕಟ್ಟಡದಲ್ಲಿ ಸೋಮವಾರ ಕಡೇ ಅಧಿವೇಶನ ನಡೆಯಲಿದೆ. ನಾಲ್ಕು ತಿಂಗಳ ಹಿಂದಷ್ಟೇ ಹೊಸ ಕಟ್ಟಡದ ಉದ್ಘಾಟನೆಯಾಗಿದ್ದು, ಮಂಗಳವಾರದಿಂದ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನದ ಕಾರ್ಯಕಲಾಪಗಳು ಮುಂದುವರಿಯಲಿವೆ.
ಸೋಮವಾರ ಹಳೇ ಕಟ್ಟಡದಲ್ಲಿ 5 ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನ 75 ವರ್ಷಗಳ ಸಂಸತ್ ಭವನದ ಇತಿಹಾಸದ ಬಗ್ಗೆ ಚರ್ಚೆಯಾಗಲಿದೆ. ಈ ಕಟ್ಟಡ 1927ರ ಜ.18ರಂದು ಲಾರ್ಟ್ ಇರ್ವಿನ್‌ರಿಂದ ಉದ್ಘಾಟನೆಯಾಗಿದ್ದು, ವಸಾಹತುಶಾಹಿ ಇತಿಹಾಸ, ಎರಡನೇ ಜಾಗತಿಕ ಮಹಾಯುದ್ಧ, ಸ್ವಾತಂತ್ರೊéàತ್ಸವದ ಸಂಭ್ರಮ, ಸಂವಿಧಾನದ ಅಳವಡಿಕೆ ಮತ್ತು ಹಲವಾರು ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಸಾಕ್ಷಿಯಾಗಿದೆ.
ಕಡೇ ದಿನ, ಕಡೇ ಅಧಿವೇಶನ
ಇಂಥ ಹಲವಾರು ಮೈಲುಗಲ್ಲುಗಳಿಗೆ ಸಾಕ್ಷಿಯಾಗಿರುವ ಈ ಕಟ್ಟಡದಲ್ಲಿ ಹೆಚ್ಚು ಕಡಿಮೆ ಸೋಮವಾರವೇ ಕಡೇ ದಿನದ ಅಧಿವೇಶನ. ಆದರೆ, ಇದು ವಿಶೇಷ ಚರ್ಚೆಗೆ ಸಾಕ್ಷಿಯಾಗಲಿದೆ. ಉಳಿದಂತೆ ಯಾವುದೇ ಸಾಮಾನ್ಯ ಕಾರ್ಯಕಲಾಪಗಳು ನಡೆಯುವುದಿಲ್ಲ. ಅಧಿಕೃತವಾಗಿ ಮುಂಗಾರು ಅಧಿವೇಶನವೇ ಹಳೇ ಕಟ್ಟಡದ ಕಡೇ ಅಧಿವೇಶನದಂತಾಗುತ್ತದೆ. ಜು.20ರಿಂದ ಆರಂಭವಾಗಿದ್ದು, ಆ.11ರವರೆಗೆ ನಡೆಯಿತು. ಈ ಸಂದರ್ಭದಲ್ಲಿ 23 ದಿನ 17 ಕಲಾಪಗಳು ನಡೆದಿದ್ದವು.
ಮುಂಗಾರು ಅಧಿವೇಶನದಲ್ಲಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಮಸೂದೆಗಳು ಮಂಡನೆಯಾಗಿದ್ದು, ಇವುಗಳನ್ನು ಸಂಸದೀಯ ಸಮಿತಿಗಳಿಗೆ ಒಪ್ಪಿಸಲಾಗಿದೆ. ಇವುಗಳನ್ನು ಬಿಟ್ಟರೆ, ದೆಹಲಿ ಎಲ್‌ಜಿಗೆ ಹೆಚ್ಚಿನ ಅಧಿಕಾರ, ಲಿಥಿಯಂ ರೀತಿಯ ಪ್ರಮುಖ ಖನಿಜಗಳ ಗಣಿಗಾರಿಕೆಗೆ ಒಪ್ಪಿಗೆ, ಖಾಸಗಿ ದತ್ತಾಂಶ ಮಸೂದೆಗಳು ಅನುಮೋದನೆ ಪಡೆದಿದ್ದವು.
ಕಟ್ಟಡದ ಮೈಲುಗಲ್ಲುಗಳು
- ನೆಹರು ಅವರ ಉತ್ತಮ ಭವಿಷ್ಯದ ಸಂಕಲ್ಪ(ದಿ ಟ್ರಿಸ್ಟ್ ವಿತ್ ಡೆಸ್ಟಿನಿ) ಭಾಷಣ
- 1946ರ ಡಿ.9ರಂದು ಸಂವಿಧಾನ ಸಭೆಯ ಮೊದಲ ಸಮಾಲೋಚನೆ
- 1949ರ ನ.26ರಂದು ಸೆಂಟ್ರಲ್ ಹಾಲ್‌ನಲ್ಲಿ ಸಂವಿಧಾನಕ್ಕೆ ಒಪ್ಪಿಗೆ
- ಹಲವಾರು ಪ್ರಮುಖ ಮಸೂದೆಗಳಿಗೆ ಅನುಮೋದನೆ
ಮಹಿಳಾ ಮಸೂದೆಗೆ ಒತ್ತಾಯ
ಸೋಮವಾರದಿಂದ 5 ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಸರ್ವಪಕ್ಷಗಳ ಸಭೆ ನಡೆಯಿತು. ಈ ಅಧಿವೇಶನದಲ್ಲಿ ಮಹಿಳಾ ಮಸೂದೆಗೆ ಒಪ್ಪಿಗೆ ಪಡೆಯುವಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಆಗ್ರಹಿಸಿದರು. ಸಭೆ ಬಳಿಕ ಮಾತನಾಡಿದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಮಹಿಳಾ ಮಸೂದೆಗೆ ಒಪ್ಪಿಗೆ ಪಡೆಯುವಂತೆ ಮನವಿ ಮಾಡಲಾಗಿದೆ ಎಂದರು. ಜತೆಗೆ ಗಣೇಶ ಚತುರ್ಥಿ ದಿನ ಹೊಸ ಸಂಸತ್ ಭವನ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರೂ, ಮಹಿಳಾ ಮಸೂದೆಗೆ ಆಗ್ರಹಿಸಿರುವುದಾಗಿ ತಿಳಿಸಿದರು.