Advertisement
ನಗರದ ಎಂ.ಜಿ. ರಸ್ತೆಯಿಂದ ಲಾಲ್ ಬಾಗ್ ವರೆಗಿನ ಮಾರ್ಗವು ಪ್ರಮುಖ ಜನನಿಬಿಡ ರಸ್ತೆಯಾಗಿದ್ದು, ಹೆಚ್ಚಿನ ಸಂಖ್ಯೆಯ ವಾಹನಗಳು ದಿನನಿತ್ಯ ಓಡಾಡು ತ್ತಿವೆ. ಈ ಭಾಗದಲ್ಲಿ ಪ್ರಮುಖ ಸಭಾಂಗಣ, ಪಾಲಿಕೆ ಕೇಂದ್ರ ಕಚೇರಿ, ಹೊಟೇಲ್‌ಗಳು ಸಹಿತ ಅನೇಕ ವಾಣಿಜ್ಯ ಮಳಿಗೆಗಳಿವೆ. ಆದರೆ ಅದಕ್ಕೆ ತಕ್ಕಂತೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಗಳು ರಸ್ತೆ ಯುದ್ದಕ್ಕೂ ಇಲ್ಲ. ಈ ರಸ್ತೆಯಲ್ಲಿ ಕೇವಲ ಒಂದು ಕಡೆ ಅಂದರೆ, ಪಬ್ಟಾಸ್ ಬಳಿ ಮಾತ್ರ ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ ಇದ್ದು, ಅದು ಜನಸಾಮಾನ್ಯರಿಗೆ ಅಷ್ಟೇನೂ ಉಪಯೋಗವಿಲ್ಲ. ನಗರದ ಬಲ್ಲಾಳ್‌ಬಾಗ್ ಮಳಿಗೆಗೆ ಆಗಮಿಸುವ ಮಂದಿ ಕರಾವಳಿ ಉತ್ಸವ ಮೈದಾನ ಬಳಿ ಪಾರ್ಕಿಂಗ್ ಮಾಡುವುದು ಕಷ್ಟ. ಒಂದುವೇಳೆ ಅಲ್ಲಿ ಪಾರ್ಕಿಂಗ್ ಮಾಡಿದರೂ ಒಂದೂವರೆ ಕಿ.ಮೀ. ನಡೆದುಕೊಂಡೇ ಬರಬೇಕು. ಇನ್ನು ಪಾಲಿಕೆ, ಕೆಎಸ್ಸಾರ್ಟಿಸಿ ಸಹಿತ ಇನ್ನುಳಿದೆಡೆ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಅದು ಆ ಕಚೇರಿಗೆ ಮಾತ್ರ ಸೀಮಿತ.
Related Articles
Advertisement
ಕುದ್ಮಲ್ ರಂಗರಾವ್ ರಸ್ತೆಯಿಂದ ಕೋರ್ಟ್ ರಸ್ತೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನೋ-ಪಾರ್ಕಿಂಗ್ ಇದ್ದ ಆದೇಶವನ್ನು ಪರಿಷ್ಕರಿಸಿ ರಸ್ತೆಯ ಎಡಬದಿಯಲ್ಲಿ 20 ಮೀಟರ್ ವರೆಗೆ, ಬಲಬದಿಯಲ್ಲಿ 200 ಮೀಟರ್ ವರೆಗೆ ನೋ-ಪಾರ್ಕಿಂಗ್ ಸ್ಥಳವೆಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಫಲಕ ಕೂಡ ಅಳವಡಿಸಲಾಗಿದೆ. ಆದರೆ ಪಾರ್ಕಿಂಗ್ ಜಾಗದಲ್ಲಿ ಯಾವುದೇ ಫಲಕಗಳಿಲ್ಲ. ಹೀಗಾಗಿ ಅಧಿಕೃತ ಪಾರ್ಕಿಂಗ್ ಜಾಗದ ಕುರಿತಂತೆ ಇಲ್ಲಿ ಜನರಿಗೆ ಗೊಂದಲ ವಿದೆ. ಕೆ.ಬಿ. ಕಟ್ಟೆ ಜಂಕ್ಷನ್‌ನಿಂದ ಗಣಪತಿ ಹೈಸ್ಕೂಲ್ ಕ್ರಾಸ್‌ವರೆಗಿನ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾರ್ಪಾಡು ಮಾಡಿದ್ದು, ಈ ಪೈಕಿ ಕೆ.ಬಿ. ಕಟ್ಟೆ ಜಂಕ್ಷನ್‌ನಿಂದ ಜನತಾ ಬಜಾರ್‌ನ ಕ್ರಾಸ್ ವರೆಗಿನ ರಸ್ತೆ ಎಡಬದಿಯಲ್ಲಿ ನೋ- ಪಾರ್ಕಿಂಗ್ ಎಂದು ಪರಿಷ್ಕರಿಸಲಾಗಿದೆ. ಆದರೆ ಹತ್ತಿರದಲ್ಲಿ ಪಾರ್ಕಿಂಗ್‌ಗೆ ಬೇರೆ ಜಾಗ ಇಲ್ಲದಿರುವುದರಿಂದ ಇಲ್ಲೇ ನಿಲ್ಲಿಸುತ್ತಾರೆ.
ಪಾರ್ಕಿಂಗ್ ಬೋರ್ಡ್ ಏಕಿಲ್ಲ? :
ಸಂಚಾರ ಪೊಲೀಸರು ಕೆಲವು ಕಡೆ ಗಳಲ್ಲಿ ಮಾತ್ರ ನೋ-ಪಾರ್ಕಿಂಗ್ ಸೂಚನ ಫಲಕ ಹಾಕಿದ್ದಾರೆ. ನಗರದ ಹಲವು ಕಡೆ ಸಾರ್ವಜನಿಕರು ವಾಹನ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅತ್ತ, ಪೊಲೀಸರು ಕೂಡ ನೋ -ಪಾರ್ಕಿಂಗ್ ಜಾಗ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಪಾರ್ಕಿಂಗ್ ಮಾಡಬಹುದು ಎನ್ನುತ್ತಾರೆ. ಆದರೆ ಈ ಬಗ್ಗೆ ಜನರಿಗೆ ಮಾಹಿತಿ ನೀಡುವ ಯಾವುದೇ ಸೂಚನ ಫಲಕ ಹಾಕಿಲ್ಲ. ಈ ಕಾರಣಕ್ಕೆ ನಗರ ವ್ಯಾಪ್ತಿಯಲ್ಲಿ ಯಾವ ಜಾಗ ಪಾರ್ಕಿಂಗ್; ಯಾವುದು ನೋ-ಪಾರ್ಕಿಂಗ್ ಜಾಗ ಎಂದು ಜನಸಾಮಾನ್ಯರಿಗೆ ಗುರುತಿಸುವುದೇ ಕಷ್ಟವಾಗಿದೆ.
ಸರಕಾರಿ ಕಚೇರಿ ಪರಿಸ್ಥಿತಿಯೂ ಭಿನ್ನವಿಲ್ಲ ! :
ನಗರದಲ್ಲಿರುವ ಪ್ರಮುಖ ಸರಕಾರಿ ಕಚೇರಿ ಹೊಂದಿರುವ ಸ್ಥಳಗಳಲ್ಲಿಯೂ ಪಾರ್ಕಿಂಗ್ ಸಮಸ್ಯೆ ಜಾಸ್ತಿಯಿದೆ. ಲಾಲ್‌ಬಾಗ್ ಬಳಿಯ ಪಾಲಿಕೆ ಕೆಳ ಅಂತಸ್ತಿನಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಇದೆ. ಆದರೆ ಪಾಲಿಕೆಗೆ ಆಗಮಿಸುವವರ ಸಂಖ್ಯೆ ಹೆಚ್ಚಿರುವ ಕಾರಣ ಅಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ನಿತ್ಯದ ಗೋಳು. ಇದೇ ಕಾರಣಕ್ಕೆ ಪಾಲಿಕೆ ಎದುರು ರಸ್ತೆಯಲ್ಲಿ ಬೈಕ್, ಕಾರುಗಳನ್ನು ನಿಲ್ಲಿಸಲಾಗುತ್ತಿದೆ.
ಹಂಪನಕಟ್ಟೆ ಬಳಿ ಇರುವ ತಾಲೂಕು ಪಂಚಾಯತ್ ಕೆಳ ಅಂತಸ್ತಿನಲ್ಲಿ ಪಾರ್ಕಿಂಗ್ ಜಾಗದಲ್ಲಿ ಕ್ಯಾಂಟೀನ್ ಇದೆ. ಇರುವ ಸ್ವಲ್ಪ ಜಾಗ ಕೂಡ ಕೇವಲ ಅಧಿಕಾರಿಗಳ ವಾಹನ ಪಾರ್ಕಿಂಗ್‌ಗೆ ಸೀಮಿತಗೊಳಿಸಲಾಗಿದೆ. ಸದ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಯಿದೆ. ಆರ್‌ಟಿಒ ಕಚೇರಿಯಲ್ಲಿಯೂ ವಾಹನಗಳ ಪಾರ್ಕಿಂಗ್‌ಗೆ ಜಾಗ ಇಕ್ಕಟ್ಟಾಗಿದೆ.
ಸಮಸ್ಯೆ, ಸಲಹೆಗಳು ತಿಳಿಸಿ :
ನಗರದಲ್ಲಿ ಪಾರ್ಕಿಂಗ್ ಸಮಸ್ಯೆ, ಟೋಯಿಂಗ್ ಅವಾಂತರಗಳ ಕುರಿತಂತೆ ಉದಯವಾಣಿ ಸುದಿನ ಈಗಾಗಲೇ “ಪಾರ್ಕಿಂಗ್ ಪರದಾಟ’ ಅಭಿಯಾನದ ಮೂಲಕ ಆಡಳಿತ ವ್ಯವಸ್ಥೆಯ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅಭಿಯಾನದ ಭಾಗವಾಗಿ ಸಾರ್ವಜನಿಕರು ಪಾರ್ಕಿಂಗ್ ಕೊರತೆಯಿಂದ ಅನುಭವಿಸುತ್ತಿರುವ ಸಮಸ್ಯೆ, ಪ್ರಸ್ತುತ ಜಾರಿಯಲ್ಲಿರುವ ಟೋಯಿಂಗ್ ವ್ಯವಸ್ಥೆ, ಅದು ಸೃಷ್ಟಿಸಿರುವ ಸಮಸ್ಯೆಗಳು, ಪರಿಹಾರದ ನಿಟ್ಟಿನಲ್ಲಿ ಅಭಿಪ್ರಾಯ, ಸಲಹೆಗಳಿದ್ದಲ್ಲಿ ಉದಯವಾಣಿ ಸುದಿನ ವಾಟ್ಸ್‌ಆ್ಯಪ್‌ಗೆ ಕಳುಹಿಸಿಕೊಡಬಹುದು. ಇದನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಒಂದು ವೇದಿಕೆಯಾಗುವ ಕಾರ್ಯವನ್ನು ಉದಯವಾಣಿ ಸುದಿನ ಮಾಡಲಿದೆ. ವಾಟ್ಸ್ ಆ್ಯಪ್ ನಂ. 9900567000