Advertisement

ಪೊಲೀಸ್‌ ಫೋನ್‌ ಇನ್‌ 

12:14 PM Feb 24, 2018 | |

ಮಹಾನಗರ: ಬಹುಮಹಡಿ ಕಟ್ಟಡಗಳು ರಸ್ತೆಯಲ್ಲಿನ ಪಾರ್ಕಿಂಗ್‌ ಜಾಗವನ್ನು ಅತಿಕ್ರಮಿಸುತ್ತಿವೆ. ಖಾಸಗಿ ಅಂಗಡಿಗಳ ಎದುರು ಅನಧಿಕೃತವಾಗಿ ಪಾರ್ಕಿಂಗ್‌ ಫಲಕಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ತೊಂದರೆಯಾಗುತ್ತಿದ್ದು, ಇದರ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ ಆಗ್ರಹಿಸಿದರು. ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌- ಇನ್‌ ಕಾರ್ಯಕ್ರಮದಲ್ಲಿ ಅವರು ದೂರು ನೀಡಿದರು.

Advertisement

ಖಾಸಗಿ ಅಂಗಡಿಗಳು ಪಾರ್ಕಿಂಗ್‌ ಜಾಗವನ್ನು ಅತಿಕ್ರಮಿಸುವುದಲ್ಲದೆ, ಖಾಸಗಿ ಸೆಕ್ಯೂರಿಟಿ ಸಿಬಂದಿ ದರ್ಪದಿಂದ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪಾಲಿಕೆಗೆ ಮೂರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದವರು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ನಗರದ ಪ್ರದೇಶದಲ್ಲಿ ಪಾರ್ಕಿಂಗ್‌ ಅತಿಕ್ರಮಿಸಿರುವವರ ವಿರುದ್ಧ ಪಾಲಿಕೆಯ ಸಹಯೋಗದಲ್ಲಿ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗುವುದು. ಖಾಸಗಿ ಕಟ್ಟಡಗಳಿಗೆ ಸ್ವಂತ ಜಾಗದಲ್ಲಿ ಮಾತ್ರ ಪಾರ್ಕಿಂಗ್‌ ಎಂದು ಬೋರ್ಡ್‌ ಹಾಕಲು ಅವಕಾಶ ಇದೆ. ರಸ್ತೆ ಅಥವಾ ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸಿದ್ದು ಕಂಡುಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್‌ ವಿವರಿಸಿದರು.

ಬಲ್ಮಠ, ಶೇಡಿಗುರಿ, ಮೂಲ್ಕಿ ಬಸ್‌ ನಿಲ್ದಾಣ ಬಳಿ, ಕಿನ್ನಿಗೋಳಿಗಳಲ್ಲಿ ರಸ್ತೆ ಬದಿ ಪಾರ್ಕಿಂಗ್‌ ಮಾಡುತ್ತಿರುವ ಬಗ್ಗೆ ನಾಗರಿಕರು ದೂರು ನೀಡಿ, ಕ್ರಮ ಜರಗಿಸುವಂತೆ ಆಗ್ರಹಿಸಿದರು. ಅತ್ರೆಬೈಲಿಗೆ ಪರವಾನಿಗೆ ರೂಟ್‌ ಇದ್ದರೂ ಖಾಸಗಿ ಬಸ್‌ ಬಾರದಿರುವ ಬಗ್ಗೆ ಮೂರನೇ ಬಾರಿ ಫೋನ್‌-ಇನ್‌ ನಲ್ಲಿ ದೂರು ಕೇಳಿಬಂತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಮಿಷನರ್‌ ಭರವಸೆ ನೀಡಿದರು.

ಗಾಂಜಾ ಪ್ರಕರಣ
ಕಾಟಿಪಳ್ಳ 1ನೇ ಬ್ಲಾಕ್‌ನಲ್ಲಿ ಗಾಂಜಾ ಮಾರಾಟದ ಬಗ್ಗೆ ನಾಗರಿಕರೊಬ್ಬರು ಗಮನ ಸೆಳೆದರು. ಈ ಬಗ್ಗೆ ಸುರತ್ಕಲ್‌
ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ದೂರು ನೀಡುತ್ತಿದ್ದೇನೆ ಎಂದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಕಮಿಷನರ್‌ ಹೇಳಿದರು.

Advertisement

ಟಿಕೆಟ್‌ ಯಂತ್ರ ಇಲ್ಲ
ಮಂಗಳೂರು-ಬಜಪೆ ಮಧ್ಯೆ ಸಂಚರಿಸುವ ಬಸ್‌ಗಳಲ್ಲಿ ಟಿಕೆಟ್‌ ನೀಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ನಿರ್ವಾಹಕರು ಉಡಾಫೆಯಿಂದ ಉತ್ತರಿಸುತ್ತಾರೆ ಎಂದು ನಾಗರಿಕರೊಬ್ಬರು ಅವಹಾಲು ತೋಡಿಕೊಂಡರು. ಗ್ರಾಮಾಂತರ ಮಾತ್ರವಲ್ಲ ನಗರ ಸಾರಿಗೆಯಲ್ಲೂ ಇದೇ ರೀತಿ ಟಿಕೆಟ್‌ ನೀಡುತ್ತಿಲ್ಲ ಎಂದು ಪತ್ರಕರ್ತರೊಬ್ಬರು ಗಮನಕ್ಕೆ ತಂದರು. ಖಾಸಗಿ ಬಸ್‌ಗಳ ಈ ಧೋರಣೆಯ ವಿರುದ್ಧ ದಿಢೀರ್‌ ಕಾರ್ಯಾಚರಣೆ ನಡೆಸುವಂತೆ ಕಮಿಷನರ್‌ ಸಂಚಾರಿ ಪೊಲೀಸರಿಗೆ ಸೂಚನೆ ನೀಡಿದರು.

ವನ್‌ ವೇ ಜಾರಿಗೊಳಿಸಿ
ವೆನ್ಲಾಕ್‌ ಆಸ್ಪತ್ರೆಯಿಂದ ಫಳ್ನೀರ್‌ವರೆಗೆ ವನ್‌ ವೇ ಮಾಡಿದಂತೆ ಫಳ್ನೀರ್‌ನಿಂದ ಜ್ಯೋತಿ ಟಾಕೀಸ್‌ ಹಾಗೂ ಡಾನ್‌ ಬಾಸ್ಕೊದಿಂದ ಜ್ಯೋತಿ ವರೆಗೆ ವನ್‌ ವೇ ಜಾರಿಗೊಳಿಸುವಂತೆ ಹಿರಿಯ ನಾಗರಿಕರೊಬ್ಬರು ಸಲಹೆ ಮಾಡಿದರು.

ಒಟ್ಟು 29 ಕರೆ
ಇದು 72ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 29 ಕರೆಗಳು ಬಂದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌, ಎಸಿಪಿಗಳಾದ ಮಂಜುನಾಥ ಶೆಟ್ಟಿ ಮತ್ತು ವೆಲೆಂಟೈನ್‌ ಡಿ’ಸೋಜಾ, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ಶಿವ ಪ್ರಕಾಶ್‌, ಅಮಾನುಲ್ಲಾ, ಮಂಜುನಾಥ್‌, ಎಎಸ್‌ಐ ಯೂಸುಫ್‌, ಹೆಡ್‌ಕಾನ್ಸ್‌ಟೆಬಲ್‌ ಪುರುಷೋತ್ತಮ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫುಟ್‌ಪಾತ್‌ ತೆರವು
ನಗರ ಸ್ಟೇಟ್‌ಬ್ಯಾಂಕ್‌, ಹಂಪನಕಟ್ಟೆ, ಮಣ್ಣಗುಡ್ಡೆ ಸೇರಿದಂತೆ ಕೆಲವು ಕಡೆಗಳಲ್ಲಿ ಫುಟ್‌ಪಾತ್‌ ಮೇಲೆ ವ್ಯಾಪಾರ ನಡೆಯುತ್ತಿದೆ. ಹಲವು ಕಡೆಗಳಲ್ಲಿ ಫುಟ್‌ಪಾತ್‌ನಲ್ಲೇ ದ್ವಿಚಕ್ರ ವಾಹನಗಳು ಪಾರ್ಕಿಂಗ್‌ ಮಾಡುತ್ತಿವೆ. ಇದರಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಫುಟ್‌ಪಾತ್‌ ಮೇಲೆ ವ್ಯಾಪಾರ ನಡೆಸಲು ಅವಕಾಶ ಇಲ್ಲ. ಅಂಥವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು. ಆದರೆ ಮತ್ತೆ ಅದೇ ಸ್ಥಳಕ್ಕೆ ಬಂದು ವ್ಯಾಪಾರ ನಡೆಸುತ್ತಾರೆ. ಹಾಗಾಗಿ ಪದೇ ಪದೇ ಫುಟ್‌ಪಾತ್‌ ವ್ಯಾಪಾರದ ಮೇಲೆ ಕ್ರಮ ಜರಗಿಸುವಂತೆ ಪೊಲೀಸರಿಗೆ ಸೂಚಿಸಲಾಗುವುದು ಎಂದು ಕಮಿಷನರ್‌ ತಿಳಿಸಿದರು.

ನಿಲ್ದಾಣದಲ್ಲಿ ನಿಲ್ಲದ ಬಸ್‌
ಕೂಳೂರಿನಲ್ಲಿ ಬಸ್‌ಗಳು ನಿಲ್ದಾಣದಲ್ಲಿ ನಿಲ್ಲದೆ ಮುಂದೆ ನಿಲ್ಲುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ರೀತಿಯ ಸಮಸ್ಯೆ ನಂತೂರು ಹಾಗೂ ಮೂಲ್ಕಿ ಖಾಸಗಿ ಬಸ್‌ ನಿಲ್ದಾಣದಲ್ಲೂ ಇದೆ ಎಂದು ನಾಗರಿಕರು ಗಮನ ಸೆಳೆದರು. ಉಳ್ಳಾಲ, ತೊಕ್ಕೊಟ್ಟಿನಲ್ಲಿ ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಸಂಚರಿಸುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next