Advertisement
ಶ್ರೀ ಕೃಷ್ಣ ಮಠದಲ್ಲಿ ಉತ್ಸವಗಳು ಸಾಮಾನ್ಯ. ಅಲ್ಲಿಗೆ ಸಾವಿರಾರು ಮಂದಿಯ ಭಕ್ತರು ನಿತ್ಯವೂ ಭೇಟಿ ನೀಡುತ್ತಾರೆ. ಉತ್ಸವದ ದಿನಗಳಲ್ಲಿ ಪ್ರವಾಸಿಗರೊಂದಿಗೆ ಸ್ಥಳೀಯರೂ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ. ಆಗ ನಗರದ ಹೃದಯಭಾಗ ಪೂರ್ತಿ ಟ್ರಾಫಿಕ್ ಜಾಮ್ ನಲ್ಲಿ ನರಳುತ್ತಿರುತ್ತದೆ.
Related Articles
Advertisement
ಕೆಎಂ ಮಾರ್ಗದ ಕಥೆ ಕೇಳಿ :
ಕೆಎಂ ಮಾರ್ಗ ನಗರದ ಹೃದಯಭಾಗದಲ್ಲಿದ್ದು, ಹೆಚ್ಚು ವಾಣಿಜ್ಯಾತ್ಮಕ ಚಟುವಟಿಕೆಗಳಿಗೆ ಮೀಸಲಾಗಿದೆ. ಆದ್ದರಿಂದ ವಾಹನಗಳ ಓಡಾಟ ಸ್ವಾಭಾವಿಕವಾಗಿ ತುಸು ಹೆಚ್ಚು. ನಾಗರಿಕರೂ ತಮ್ಮ ವಾಹನಗಳನ್ನು ನಿಲ್ಲಿಸಿ ಹತ್ತಿರದ ಮಳಿಗೆಗಳಿಗೆ ವ್ಯಾಪಾರಕ್ಕೆಂದು ತೆರಳುತ್ತಾರೆ. ತ್ರಿವೇಣಿ ಸರ್ಕಲ್‌ನಿಂದ ಸಿಂಡಿಕೇಟ್ ಬ್ಯಾಂಕ್ ಸರ್ಕಲ್‌ವರೆಗೂ ಟ್ರಾಫಿಕ್ ಜಾಮ್ ಇದ್ದದ್ದೇ. ಜನದಟ್ಟಣೆ ಇರುವಾಗ(ಪೀಕ್ ಅವರ್) ಹೇಳುವಂತಿಲ್ಲ. ಕೋರ್ಟ್ ರಸ್ತೆಯಲ್ಲೂ (ನೋ ಪಾರ್ಕಿಂಗ್ ಪ್ರದೇಶ ಹೊರತುಪಡಿಸಿ) ಪಾರ್ಕಿಂಗ್‌ಗೆ ಅವಕಾಶವಿದೆ. ಆದರೆ, ವಾಹನಗಳನ್ನು ಸರಿಯಾಗಿ ನಿಲ್ಲಿಸುವುದಿಲ್ಲ. ಫುಟ್‌ಪಾತ್‌ನಲ್ಲೂ ಕೆಲವರು ವ್ಯಾಪಾರ ನಡೆಸುವುದರಿಂದ ಪಾದಚಾರಿಗಳು ಮುಖ್ಯರಸ್ತೆಗೆ ಬರಲೇಬೇಕು. ಆಗ ವಾಹನ ಸವಾರರಿಗೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯರು.
ನಗರಸಭೆಯಿಂದ ಆರಂಭವಾಗುವ ಟ್ರಾಫಿಕ್ ಜಾಮ್, ಅಡ್ಡಾದಿಡ್ಡಿ ಪಾರ್ಕಿಂಗ್ ಕಿರಿಕಿರಿ ತಾಲೂಕು ಕಚೇರಿಯ ವೃತ್ತದವರೆಗೂ ಮುಂದುವರಿಯುತ್ತದೆ. ಈ ರಸ್ತೆಯಲ್ಲಿ ಕೆಲವೊಮ್ಮೆ ವಾಹನ ಮುನ್ನಡೆಯಲಿಕ್ಕೆ ಕೆಲವು ನಿಮಿಷಗಳೇ ಬೇಕು. ಅದರೊಂದಿಗೆ ಖಾಸಗಿ ಬಸ್‌ನವರೂ ದಾರಿ ಬಿಟ್ಟು ಕೊಡುವಂತೆ ಹಾರ್ನ್ ಹಾಕುವಾಗ ತೀರಾ ಕಿರಿಕಿರಿಯಾಗುತ್ತದೆ. ಮುಂದಿನ ವಾಹನ ಚಲಿಸದೇ ನಾವೇನು ಮಾಡಲಿಕ್ಕಾಗುತ್ತದೆ? ಈ ಸಂದರ್ಭ ಟ್ರಾಫಿಕ್ ಪೊಲೀಸರಿದ್ದರೆ ಸ್ವಲ್ಪ ಅನುಕೂಲವಾಗಹುದು ಎನ್ನುತ್ತಾರೆ ವಾಹನ ಮಾಲಕರೊಬ್ಬರು.
ಹತ್ತು ಸಾವಿರ ಕಾರುಗಳು ! :
ಈ ಹೊತ್ತಿನವರೆಗೂ ಹೇಗೋ ಆಯಿತೆಂದು ಅಂದುಕೊಳ್ಳಬಹುದು. ಆದರೆ ಕೊರೊನಾ ಸ್ಥಿತಿ ನಿಧಾನವಾಗಿ ವಾಹನಗಳ ಮೇಲಿನ ಪ್ರೀತಿ ಹೆಚ್ಚಿಸಿದೆ. ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿನ ವಾಹನ ಸಂಖ್ಯೆಗಳು ಮೂರು ಪಟ್ಟಾಗಬಹುದು. 2019 ರಲ್ಲಿ ಇಲ್ಲದ್ದು, 2020 ರಲ್ಲಿ ಆಗದ್ದು 2021 ರಲ್ಲಿ ಸಂಭವಿಸುವ ಸಾಧ್ಯತೆ ತೋರುತ್ತಿದೆ. ಯಾಕೆಂದರೆ, ಈ ಹಿಂದಿನ ವರ್ಷಗಳಲ್ಲಿ ಒಂದು ವರ್ಷದಲ್ಲಿ ಕೆಲವೇ ಸಾವಿರ ಕಾರುಗಳು, ದ್ವಿಚಕ್ರ ವಾಹನಗಳು ನೋಂದಣಿಯಾದರೆ, ಹೊಸ ವರ್ಷದ ಮೊದಲ ತಿಂಗಳಲ್ಲೇ (2021 ರ ಜನವರಿ) 788 ಕಾರುಗಳು ನೋಂದಣಿಯಾಗಿವೆ. ಇದರ ನಾಗಾಲೋಟ ನೋಡಿದರೆ ಈ ವರ್ಷ ಬರೋಬ್ಬರಿ ಹತ್ತು ಸಾವಿರ ಕಾರುಗಳು ರಸ್ತೆಗಿಳಿಯಬಹುದು. ಇದರರ್ಥ ಈಗಿನ (2019 ರ ಲೆಕ್ಕಕ್ಕೆ ಹೋಲಿಸಿದರೆ) ಮೂರರಷ್ಟು ಹೆಚ್ಚು. ಪಾರ್ಕಿಂಗ್‌ಗೆ ಸ್ಥಳ ಎಲ್ಲಿಂದ ತರುವುದು? ಯಾರಿಗೂ ಗೊತ್ತಿಲ್ಲ. ಇಷ್ಟಕ್ಕೂ ಇಲ್ಲಿ ಹೇಳಿರುವುದು ಕೇವಲ ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಕಥೆ. ಇನ್ನುಳಿದ ವಾಹನಗಳ ಕಥೆ ಬಾಕಿ ಇದೆ.
ಎಷ್ಟು ಸುತ್ತು ಹೊಡೆದರೂ ಅಷ್ಟೇ :
ಉತ್ಸವದ ಸಂದರ್ಭಗಳಲ್ಲಿ ಕುಟುಂಬವನ್ನು ರಾಜಾಂಗಣ ಬಳಿ ಕೆಳಗಿಳಿಸಿ, ವಾಹನ ನಿಲುಗಡೆಗೆ ಪ್ರಯತ್ನಿಸಿದರೆ ಎಷ್ಟೋ ಬಾರಿ ಕಲ್ಸಂಕ ರಸ್ತೆಗೆ ಬಂದು ವಾಹನ ನಿಲ್ಲಿಸಿ ಕಾರ್ಯಕ್ರಮಕ್ಕೆ ವಾಪಸು ಹೋಗಬೇಕು. ಈ ಹೊತ್ತಿನಲ್ಲಿ ವುಡ್‌ಲ್ಯಾಂಡ್ಸ್ ಪಕ್ಕದ ರಸ್ತೆ ಅಥವಾ ಮತ್ತಿತರ ಮಾರ್ಗಗಳಲ್ಲಿ ವಾಹನಗಳನ್ನು ನಿಲ್ಲಿಸುವುದಿ ರಲಿ, ಬರೀ ಹೋಗುವುದೇ ದುಸ್ಸಾಹಸ. ಅಲ್ಲಿ ಎರಡೂ ಬದಿಯಿಂದ ವಾಹನಗಳು ಚಲಿಸುವ ಕಾರಣ, ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಕೊಳ್ಳುವ ಆತಂಕ ಇದ್ದೇ ಇರುತ್ತದೆ.
ಉಡುಪಿ ನಗರದಲ್ಲಿ ವಾಹನ ನಿಲುಗಡೆಯ ಸಮಸ್ಯೆಯ ತೀವ್ರತೆ ನಿಮಗೆ ತಿಳಿದೇ ಇದೆ. ನೀವು ಈ ಕುರಿತು ಎದುರಿಸಿರುವ ಘಟನೆ, ಸಮಸ್ಯೆ ಇದ್ದರೆ ನಮಗೆ ತಿಳಿಸಿ. ಸೂಕ್ತವಾದವುಗಳನ್ನು ಪ್ರಕಟಿಸುತ್ತೇವೆ.7618774529
ದ್ವಿಚಕ್ರ ವಾಹನಗಳು :
2020 : 16,852
ಕಾರುಗಳು : 1,958
ದ್ವಿಚಕ್ರ ವಾಹನಗಳು :
2019 : 18,724
ಕಾರುಗಳು : 3,286
ನಮ್ಮ ಕಷ್ಟ ಕೇಳಿ ;
ಇತ್ತೀಚೆಗೆ ನನಗೆ ಮೈತ್ರಿ ಕಾಂಪ್ಲೆಕ್ಸ್‌ನಲ್ಲಿದ್ದ ಬ್ಯಾಂಕ್‌ನ ಎಟಿಎಂಗೆ ಹೋಗಬೇಕಿತ್ತು. ಡಯಾನಾ ಸರ್ಕಲ್‌ನಿಂದ ಕಾರಿನಲ್ಲಿ ನಿಧಾನವಾಗಿ ಮುಂದೆ ಸಾಗಿದೆ. ನಗರಸಭೆ ಕಚೇರಿ ಯಿಂದ ಪಾರ್ಕಿಂಗ್ ಸ್ಥಳಕ್ಕಾಗಿ ಆಚೀಚೆ ಹುಡುಕಿ ಕೊಂಡು ಎರಡು ಸುತ್ತು ಹಾಕಿದೆ. ಎಲ್ಲಿಯೂ ಸ್ಥಳವೇ ಇರಲಿಲ್ಲ. ಮೂರನೇ ಸುತ್ತು ಹೊಡೆದಾಗ ಕೊನೆಗೆ ಸಂಸ್ಕೃತ ಕಾಲೇಜಿನ ಹತ್ತಿರ ಸ್ವಲ್ಪ ಜಾಗ ಸಿಕ್ಕಿತು. ಅದರಲ್ಲೇ ವಾಹನ ನಿಲ್ಲಿಸಿದೆ. ಸುಮಾರು ಸಮಯ ಹಾಳಾಯಿತು, ಜತೆಗೆ ಇಂಧನವೂ ಬೇರೆ. ನಿಜವಾಗಿಯೂ ನಗರದ ಪಾರ್ಕಿಂಗ್ ಸಮಸ್ಯೆ ಬಗೆಹರಿಸಬೇಕು. -ಡಾ| ಎಂ. ಶಾಮರಾವ್, ಅಜ್ಜರಕಾಡು
ವರದಿ, ವಿಶ್ಲೇಷಣೆ:
ಉದಯವಾಣಿ ಅಧ್ಯಯನ ತಂಡ