Advertisement
ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಿಂದ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಕರು ಉದ್ಯೋಗಕ್ಕೆ ಬೇರೆ ಊರುಗಳಿಗೆ ತೆರಳಿ ವಾಪಸ್ಸಾಗುವುದಿದೆ. ಆದರೆ, ಪ್ರಯಾಣಿಕರು ತಾವು ತಂದ ಬೈಕ್, ಸ್ಕೂಟರ್‌ಗಳನ್ನು ನಿಲ್ದಾಣದಲ್ಲಿ ನಿಲ್ಲಿಸಲು ಸ್ಥಳವಿಲ್ಲದೇ ಸಮಸ್ಯೆ ಎದುರಿಸುವಂತಾಗಿದೆ.
Related Articles
Advertisement
ಕಿರಿದಾದ ಬಸ್ ನಿಲ್ದಾಣ: ಮೈಸೂರು ಗ್ರಾಮಾಂತರ ಸಾರಿಗೆ ಬಸ್ ನಿಲ್ದಾಣದಲ್ಲಿ ಜನ ಹಾಗೂ ಬಸ್‌ಗಳ ದಟ್ಟಣೆ ದಿನೇ ದಿನೆ ಹೆಚ್ಚಾಗುತ್ತಿದ್ದು, ನಿಲ್ದಾಣದಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಪ್ರತಿನಿತ್ಯ ರಾಜ್ಯ, ಹೊರರಾಜ್ಯ ಬಸ್‌ಗಳು ಸೇರಿದಂತೆ 2450ಕ್ಕೂ ಹೆಚ್ಚು ಬಸ್‌ಗಳು ಓಡಾಡುತ್ತವೆ. ಆದರೆ, ಈಗಿರುವ ಸ್ಥಳಾವಕಾಶದಲ್ಲಿ ಇಷ್ಟು ಪ್ರಮಾಣದ ಬಸ್‌ಗಳು ಓಡಾಡುವುದು ಸಾಹಸದ ಕೆಲಸವಾಗಿದೆ. ಇದರಿಂದ ಟ್ರಾಫಿಕ್ ಜಾಮ್ ಸೇರಿದಂತೆ ಇತರೆ ಸಮಸ್ಯೆಗಳನ್ನು ಪ್ರಯಾಣಿಕರು ಹಾಗೂ ಬಸ್ ಚಾಲಕರು ಎದುರಿಸುವಂತಾಗಿದೆ.
ನಿಲುಗಡೆಗೆ ಜಾಗವಿಲ್ಲ: ಕಳೆದ 3-4 ತಿಂಗಳಿಂದ ಮೈಸೂರು ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆಯ¨ªೆ ದೊಡ್ಡ ಸಮಸ್ಯೆಯಾಗಿ ಪ್ರಯಾಣಿಕರಿಗೆ ಕಾಡುತ್ತಿದೆ. ಶೇ.40 ರಷ್ಟು ಪಾರ್ಕಿಂಗ್ ಪ್ರದೇಶವನ್ನು ಬಸ್ ನಿಲ್ದಾಣದಲ್ಲಿರುವ ಶಾಪಿಂಗ್ ಮಾಲ್‌ನ ಗ್ರಾಹಕರಿಗೆ ಮೀಸಲಿರಿಸಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಬೆಳಗ್ಗೆ 8 ಗಂಟೆಯಾಗುವಷ್ಟರಲ್ಲೇ ಬಸ್ ನಿಲ್ದಾಣದಲ್ಲಿರುವ ಪಾರ್ಕಿಂಗ್ ಸ್ಥಳ ಭರ್ತಿಯಾಗುತ್ತಿದ್ದು, ದೂರದ ಸ್ಥಳಗಳಿಗೆ ತೆರಳುವ ನೌಕರರು ಹಾಗೂ ಪ್ರಯಾಣಿಕರಿಗೆ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ಬೇರೆ ಊರುಗಳಿಗೆ ಅನಿವಾರ್ಯವಾಗಿ ತೆರಳಬೇಕಾದವರು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಮತ್ತೆ ವಾಪಸ್ ಬಸ್ ನಿಲ್ದಾಣಕ್ಕೆ ಬಂದು ಬಸ್‌ನಲ್ಲಿ ತೆರಳುವ ಪರಿಸ್ಥಿತಿ ಎದುರಾಗಿದೆ.
ಪಾರ್ಕಿಂಗ್ ವ್ಯವಸ್ಥೆ: 10 ಗಂಟೆಗೆ ಕೆಲಸಕ್ಕೆ ತೆರಳಲು ಬೆಳಗ್ಗೆ 6 ಗಂಟೆಗೆ ಬಸ್‌ಗೆ ಹೋಗಲು ಬರುತ್ತಿದ್ದ ಪ್ರಯಾಣಿಕರು, ಈಗ ಒಂದು ಗಂಟೆ ಮುಂಚಿತವಾಗಿಯೇ ಬಸ್ ನಿಲ್ದಾಣಕ್ಕೆ ಬಂದು ಪಾರ್ಕಿಂಗ್‌ನಲ್ಲಿ ತಮ್ಮ ವಾಹನ ನಿಲ್ಲಿಸುವಂತಾಗಿದೆ. ಹೀಗಾಗಿ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಬೈಕ್ ತರುತ್ತಿಲ್ಲ: ಮೈಸೂರಿನ ಕುವೆಂಪು ನಗರದ ನಿವಾಸಿ ವಸಂತರಾಜು ತಲಕಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದು, ನಿತ್ಯ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ತೆರಳುತ್ತಿದ್ದರು. ಆದರೆ, ಇದೀಗ ಕಳೆದ 3 ತಿಂಗಳಿಂದ ತಮ್ಮ ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.
ಸ್ನೇಹಿತನ ಬಳಿ ಬಸ್ ನಿಲ್ದಾಣಕ್ಕೆ ಡ್ರಾಪ್ ಪಡೆಯುತ್ತಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ಬರಲು ಕೂಡ ನಿಲ್ದಾಣದಲ್ಲಿ ಸ್ನೇಹಿತನಿಗಾಗಿ ಕಾಯುವಂತಾಗಿದೆ. ಇದು ಕೇವಲ ವಸಂತ್‌ರಾಜು ಒಬ್ಬರ ಸ್ಥಿತಿಯಲ್ಲ. ನಿತ್ಯ ಮೈಸೂರಿನಿಂದ ಬೆಂಗಳೂರು, ಹಾಸನ, ಚಾಮರಾಜನಗರ, ಮಡಿಕೇರಿ, ತಿ.ನರಸೀಪುರ ಸೇರಿದಂತೆ ವಿವಿಧೆಡೆ ತೆರಳುವ ನೂರಾರು ಅಧಿಕಾರಿಗಳು, ನೌಕರರ ಮತ್ತು ಪ್ರಯಾಣಿಕರ ಸಮಸ್ಯೆಯಾಗಿದೆ.
ಕೆಲವು ಸಂದರ್ಭದಲ್ಲಿ ಸಮಸ್ಯೆಯಾಗುತ್ತದೆ. ಆದರೆ, ಬಸ್ ನಿಲ್ದಾಣದಲ್ಲಿ ಇರುವುದು ಕಡಿಮೆ ಸ್ಥಳ. ಇಲ್ಲಿ ಬೇರೆ ಯಾವುದೇ ಖಾಲಿ ಜಾಗವಿಲ್ಲ. ಬೆಂಗಳೂರು ಪ್ಲಾಟ್‌ಫಾರಂನ್ನು ಬೇರೆಡೆ ಸ್ಥಳಾಂತರ ಮಾಡಲು ಚಿಂತಿಸಲಾಗಿದೆ. ಸರಕಾರಿ ಜಾಗ ಸಿಕ್ಕರೆ ಸ್ಥಳಾಂತರ ಮಾಡುತ್ತೇವೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಾಹನ ದಟ್ಟಣೆಯನ್ನೂ ಕಡಿಮೆ ಮಾಡಬಹುದಾಗಿದೆ.-ಅಶೋಕ್ ಕುಮಾರ್, ಡೀಸಿ ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗ. * ಸತೀಶ್ ದೇಪುರ