ಮಂಗಳೂರು ನಗರ ನಗರ ಅಭಿವೃದ್ಧಿ ಹೊಂದುತ್ತಿದ್ದಂತೆ ಹೆಚ್ಚೆಚ್ಚು ಜನ ಇಲ್ಲಿ ಉದ್ಯೋಗ, ಶಿಕ್ಷಣ ಮತ್ತಿತರ ಕಾರಣಗಳಿಗಾಗಿ ಬರುತ್ತಿದ್ದಾರೆ. ಹಾಗಾಗಿ ರಸ್ತೆಗಳಲ್ಲಿ ವಾಹನ ದಟ್ಟಣೆಯೂ ಅಧಿಕವಾಗುತ್ತಿದೆ. ಇದರಿಂದ ಟ್ರಾಫಿಕ್ ಜಾಂ, ನಿರಂತರ ಬ್ಲಾಕ್, ಪಾದಾಚಾರಿಗಳಿಗೂ ನಡೆದಾಡಲು ಕಷ್ಟವಾಗುವಂತಹ ಸ್ಥಿತಿ ಎದುರಾಗಿದೆ.
ಈ ಎಲ್ಲ ಸಮಸ್ಯೆಗಳ ನಡುವೆ ಬೃಹದಾಕಾರವಾಗಿ ಕಾಡುವ ಸಮಸ್ಯೆಯೆಂದರೆ ರಸ್ತೆಯಲ್ಲೇ ವಾಹನಗಳನ್ನು ಪಾರ್ಕ್ ಮಾಡುವುದು. ಟ್ರಾಫಿಕ್ ಪೊಲೀಸರು ಇರುವ ರಸ್ತೆಗಳಲ್ಲಿ ಈ ಕಿರಿ ಕಿರಿ ಇಲ್ಲವಾದರೂ, ಪೊಲೀಸರು ಇಲ್ಲದೆಡೆ ರಸ್ತೆಯಲ್ಲೇ ವಾಹನಗಳನ್ನು ಪಾರ್ಕ್ ಮಾಡಿ ಇಡಲಾಗುತ್ತದೆ. ಇದರಿಂದ ಆ ರಸ್ತೆಯಾಗಿ ಸಂಚರಿಸುವ ಇತರ ವಾಹನಗಳಿಗೆ ಸೈಡ್ ಕೊಡುವುದು, ಸರಾಗವಾಗಿ ಹೋಗುವುದಕ್ಕೆ ತೀರಾ ಸಮಸ್ಯೆ ಉಂಟಾಗುತ್ತದೆ. ರಸ್ತೆ ಕಿರಿದಾಗಿದ್ದರಂತೂ ಸಮಸ್ಯೆ ಹೇಳ ತೀರದು.
ವಾಹನಗಳನ್ನು ಪಾರ್ಕ್ ಮಾಡಿದ ಕಡೆ ಸಂಚರಿಸುತ್ತಿರುವ ವಾಹನವನ್ನು ಬಲಗಡೆಗೆ ತಿರುಗಿಸುವ ವೇಳೆ ಹಿಂದಿನಿಂದ ಅತಿ ವೇಗದಲ್ಲಿ ಬರುವ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳಾಗುವ ಸಂಭವವೂ ಇದೆ. ಈ ಬಗ್ಗೆ ಪೊಲೀಸ್ ಫೋನ್ ಇನ್, ಮಾಧ್ಯಮಗಳಲ್ಲಿ ಜನ ಸಾಮಾನ್ಯರು ನಿರಂತರವಾಗಿ ಪೊಲೀಸರ ಗಮನ ಸೆಳೆಯುತ್ತಿದ್ದರೂ ಯಾವುದೇ ಕ್ರಮಗಳಾಗುತ್ತಿಲ್ಲ. ಒಂದೆರಡು ಬಾರಿ ಹೀಗೆ ರಸ್ತೆಗಳಲ್ಲೇ ಪಾರ್ಕ್ ಮಾಡಲಾದ ವಾಹನಗಳ ಚಕ್ರವನ್ನು ಲಾಕ್ ಮಾಡಿಡುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದರಾದರೂ, ಅನಂತರದ ದಿನಗಳಲ್ಲಿ ಇದು ನಡೆಯುತ್ತಿಲ್ಲ. ಇದರಿಂದ ವಾಹನಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡುವುದು ನಿರಾತಂಕವಾಗಿ ನಡೆಯುತ್ತಿದೆ. ಹೆಚ್ಚಾಗಿ ಕಾರುಗಳನ್ನು ಹೀಗೆ ಪಾರ್ಕ್ ಮಾಡಲಾಗುತ್ತಿದೆ. ಪೊಲೀಸರು ಇನ್ನು ಮುಂದಾದರೂ ಈ ಬಗ್ಗೆ ಕ್ರಮ ವಹಿಸಿ ರಸ್ತೆಯನ್ನು ಸಂಚಾರಕ್ಕಷ್ಟೇ ಸೀಮಿತಗೊಳಿಸುವಂತಾಗಬೇಕು.
ನಗರದ ಬಿಜೈ ರಸ್ತೆ, ಕೆಪಿಟಿ, ನವಭಾರತ್ ಸರ್ಕಲ್‌ನಿಂದ ಪಿವಿಎಸ್ ಸರ್ಕಲ್‌ನವರೆಗೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ರಸ್ತೆಯಲ್ಲಿಯೇ ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ.
ಧನ್ಯಾ ಬಾಳೆಕಜೆ