Advertisement

ಪಾರ್ಕಿಂಗ್‌- ನೋ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ಜಿಲ್ಲಾಧಿಕಾರಿ ಸೂಚನೆ

11:29 PM Sep 21, 2019 | Team Udayavani |

ಉಡುಪಿ: ಉಡುಪಿ, ಮಣಿಪಾಲದಲ್ಲಿ ಪಾರ್ಕಿಂಗ್‌ ಮತ್ತು ಸಂಚಾರ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪಾರ್ಕಿಂಗ್‌ ಮತ್ತು ನೋ ಪಾರ್ಕಿಂಗ್‌ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್‌ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಹಲವೆಡೆ ರಸ್ತೆ ಬದಿಯಲ್ಲಿ ವಾಹನಗಳ ಪಾರ್ಕಿಂಗ್‌ನಿಂದಾಗಿ ಪಾದಚಾರಿಗಳಿಗೆ ಮತ್ತು ಇತರ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶ ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಈ ಕುರಿತು ಉಡುಪಿ ನಗರ ವ್ಯಾಪ್ತಿಯಲ್ಲಿಯ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್‌ ನಿಷೇಧಿಸಲು ಅಧಿಸೂಚನೆ ಹೊರಡಿಸಬೇಕಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾಹನಗಳನ್ನು ನಿಲ್ಲಿಸಲು ಸ್ಥಳವನ್ನು ಗುರುತಿಸಬೇಕು. ಸಾಧ್ಯವಾದಲ್ಲಿ ಬಹು ಹಂತದ ಪಾರ್ಕಿಂಗ್‌ ಕಟ್ಟಡವನ್ನು ನಿರ್ಮಿಸಬೇಕು ಈ ಬಗ್ಗೆ ನಗರಸಭೆ, ಆರ್‌.ಟಿ.ಒ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಅವರು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ ಅಪ‌ಘಾತಗಳು ಸಂಭವಿಸುತ್ತಿರುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಸುರಕ್ಷತ ಕ್ರಮಗಳನ್ನು ಕೈಗೊಂಡು ಅಪ‌ಘಾತ ಪ್ರಮಾಣ ಕಡಿಮೆ ಆಗುವಂತೆ ಕ್ರಮ ಕೈಗೊಳ್ಳಲು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಧಿಕೃತವಾಗಿ ರಸ್ತೆ ಭಾಜಕವನ್ನು ತುಂಡರಿಸಿ ವಾಹನ ತಿರುಗುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಮುಚ್ಚಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹದಿನೆಂಟು ವರ್ಷಕ್ಕಿಂತ ಕೆಳಗಿನ ಮಕ್ಕಳು ರಸ್ತೆ ಸುರಕ್ಷತೆ ಕಾನೂನುಗಳನ್ನು ಮೀರಿ ಶಾಲೆಗಳಿಗೆ ವಾಹನಗಳನ್ನು ಚಲಾಯಿಸುವಂತಹ ಘಟನೆಗಳು ಕಂಡುಬಂದಿದ್ದು, ಇಂತಹ ಪ್ರಕರಣಗಳು ಪತ್ತೆಯಾದಲ್ಲಿ ವಿದ್ಯಾರ್ಥಿಯು ಕಲಿಯುವ ವಿದ್ಯಾಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಸಲು ಜಂಕ್ಷನ್‌ಗಳನ್ನು ಗುರುತಿಸಲಾಗಿದೆ. ಪಾಕಿಂìಗ್‌ ವ್ಯವಸ್ಥೆಗಾಗಿ ಸ್ಥಳ ಗುರುತಿಸುವ ಕೆಲಸವನ್ನು ಸರ್ವೆ ಮೂಲಕ ನಡೆಸಲಾಗಿದೆ ಎಂದರು.

Advertisement

ನಿಗದಿತ ಶಾಲೆಗಳಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮ
ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ಈ ತನಕ 20 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆಗಳ ಸಹಭಾಗಿತ್ವದೊಂದಿಗೆ ನಿಗದಿತ ಶಾಲೆಗಳಲ್ಲಿ ತಿಂಗಳಲ್ಲಿ ಒಂದು ದಿನ ಶಾಲಾ ಮಕ್ಕಳಿಂದಲೇ ಈ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಸಭೆ ತೀರ್ಮಾನಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಡಾ| ಆನಂದ್‌ ಕಲೋಳಿಕರ್‌, ಆರ್‌.ಟಿ.ಒ ಅಧಿಕಾರಿಗಳು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ದಾರಿದೀಪ ಅಳವಡಿಕೆಗೆ ಸೂಚನೆ
ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳಲ್ಲಿ ದಾರಿದೀಪಗಳು ಇಲ್ಲದಿರುವುದರಿಂದ ರಾತ್ರಿ ವೇಳೆ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆಗಳಾಗುತ್ತಿದ್ದು, ಕೂಡಲೇ ದಾರಿದೀಪ ಅಳವಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಪೌರಾಡಳಿತಕ್ಕೆ ಸೂಚಿಸಿದ ಜಿಲ್ಲಾಧಿಕಾರಿಗಳು ಉಡುಪಿ-ಹೆಬ್ರಿ-ಕಾರ್ಕಳ ರಸ್ತೆ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹೊಂಡಗುಂಡಿಗಳನ್ನು ಆದ್ಯತೆಯ ಮೇರೆಗೆ ಮುಚ್ಚುವಂತೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಆದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next