Advertisement
ಮಣಿಪಾಲ ಎಂಐಟಿಯ ಡೆಪ್ಯುಟಿ ಇಂಜಿನಿಯರ್ ಆರ್.ಮನೋಹರ್ ಅವರು ಮನೆಯಲ್ಲೇ 25 ವರ್ಷಗಳಿಂದ ಪಿವಿಸಿ ಪೈಪ್‌ಗ್ಳು ಮತ್ತು ದೇಶೀಯ ಮಸೂರಗಳನ್ನು ಬಳಸಿ ತಯಾರಿಸುತ್ತಿರುವ ದೂರದರ್ಶಕವನ್ನು ಸುಧಾರಿತ ರೂಪದಲ್ಲಿ ಆವಿಷ್ಕರಿಸಿದ್ದು, ಇದು ಸೇನೆಯ ಗಮನ ಸೆಳೆದಿದೆ.
ಸೈನಿಕರು ಸಾಮಾನ್ಯವಾಗಿ ಬೈನಾಕ್ಯುಲರ್ ಮತ್ತು ನ್ಪೋಟಿಂಗ್ ಸ್ಕೋಪ್‌ನಂತಹ ಉಪಕರಣ ಗಳನ್ನು ಬಳಸುತ್ತಾರೆ. ಇದಕ್ಕಿಂತ ಉತ್ತಮ ಫಲಿತಾಂಶ ಈ ದೂರದರ್ಶಕ ದಲ್ಲಿ ದೊರೆಯುತ್ತದೆ. ಕಡಿಮೆ ಭಾರದ, ಸಿಂಗಲ್ ಟ್ಯೂಬ್‌ನ, ಕಡಿಮೆ ಗಾತ್ರದ ಮತ್ತು ಹೆಚ್ಚು ಸಾಮರ್ಥ್ಯದಿಂದ ಕಾರ್ಯನಿರ್ವಹಿಸಬಲ್ಲ ದೂರದರ್ಶಕಗಳಿಗೆ ಸೇನೆಯಿಂದ ಬೇಡಿಕೆ. ನಮ್ಮ ದೂರದರ್ಶಕಗಳಲ್ಲಿ ಸಿಂಗಲ್ ಟ್ಯೂಬ್‌ನಲ್ಲಿ ಎಲ್ಲ ಮಸೂರಗಳನ್ನು ಹೊಸ, ಸಂಶೋಧಿತ ತಂತ್ರಜ್ಞಾನದಲ್ಲಿ ಜೋಡಿಸಲಾಗಿರುತ್ತದೆ. ಮಸೂರಗಳ ಅಂತರವನ್ನು ಬದಲಾಯಿಸುವ ವ್ಯವಸ್ಥೆ ಅಳವಡಿಸಲಾಗುತ್ತದೆ. ಇದು ದೂರದರ್ಶಕದ ಗಾತ್ರ ಹೆಚ್ಚಿಸದೆ ಸಾಮರ್ಥ್ಯ ಹೆಚ್ಚಳಕ್ಕೆ ನೆರವಾಗುತ್ತದೆ. ಚೀನಾ, ಅಮೆರಿಕ ದೂರದರ್ಶಕಗಳು ದುಬಾರಿ. ನಿಖರತೆ ಬಗ್ಗೆ ಸಮಾಧಾನವಿಲ್ಲ. ಪೇಟೆಂಟ್ ಬಳಿಕ ಸೇನೆಯಿಂದ ಮೆಚ್ಚುಗೆ ಸಿಕ್ಕಿದ್ದು ಸಂತಸ ತಂದಿದೆ ಎನ್ನುತ್ತಾರೆ ಮನೋಹರ್.
Related Articles
ಮನೋಹರ್ ಅವರು ದೂರದರ್ಶಕದಲ್ಲಿ ಈಗಾಗಲೇ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸೂಪರ್ ಮೂನ್, ರೆಡ್ ಸೂಪರ್‌ಮೂನ್, ಚಂದ್ರಗ್ರಹಣ ಅಲ್ಲದೆ ಮಂಗಳ, ಗುರು, ಬುಧ ಮತ್ತು ಶನಿ ಗ್ರಹಗಳನ್ನು ತೋರಿಸಿದ್ದಾರೆ. ಪ್ರತಿ ರವಿವಾರ ಸಂಜೆ 5ರಿಂದ ರಾತ್ರಿ 9 ಗಂಟೆಯವರೆಗೆ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರಿಗೆ ಮಲ್ಪೆಯ ಸೌಂದರ್ಯ, ಬೋಟುಗಳು, ಸೈಂಟ್‌ಮೇರೀಸ್ ಸೊಬಗನ್ನು ತೋರಿಸುತ್ತಾರೆ. “ಇದರಲ್ಲಿ ಸೂರ್ಯಗ್ರಹಣವನ್ನು ಕೂಡ ನೋಡಬಹುದು. ಮಕ್ಕಳಿಗಾಗಿ ಇದರ ಕಾರ್ಯಾಗಾರ, ತರಬೇತಿ ನಡೆಸುವ ಇಚ್ಛೆ ಇದೆ. ಸರಕಾರದಿಂದ ಸೂಕ್ತ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದೇನೆ’ ಎನ್ನುತ್ತಾರೆ ಮನೋಹರ್.
Advertisement
2 ಪೇಟೆಂಟ್ “ಎ ಮಲ್ಟಿ ಲೆನ್ಸ್ ಸಿಸ್ಟಮ್ ಫಾರ್ ಎ ಮೈಕ್ರೋ ಸ್ಕೋಪ್ ಆ್ಯಂಡ್ ಎ ಕಂಪೊನೆಂಟ್ ಆಫ್ ಎ ಟೆಲಿಸ್ಕೋಪ್’ಗೆ 2009ರಂದು ಭಾರತ ಸರಕಾರದಿಂದ ಪೇಟೆಂಟ್ ಪಡೆದುಕೊಂಡಿದ್ದಾರೆ. ಅಲ್ಲದೆ ಮಾರ್ಕಿಂಗ್ ಗೇಜ್‌ಗಾಗಿ 2015ರ ಜುಲೈನಲ್ಲಿ ಯುಎಸ್‌ಎಯಿಂದ ಪೇಟೆಂಟ್ ಹಕ್ಕು ಪಡೆದುಕೊಂಡಿದ್ದಾರೆ. ಈಗ ದೂರದರ್ಶಕಗಳಿಗೆ ಹೊಸದಿಲ್ಲಿಯಲ್ಲಿ ಸಿದ್ಧವಾಗಿ ದೊರೆಯುವ ಲೆನ್ಸ್‌ಗಳನ್ನು ಹಾಗೂ ಗಾಗಲ್ಸ್‌ಗೆ ಸಿಂಗಾಪುರದ ಉಪಕರಣಗಳನ್ನು ಬಳಕೆ ಮಾಡುತ್ತಿದ್ದಾರೆ. ಈಗಾಗಲೇ ಎರಡು ದೂರದರ್ಶಕಗಳನ್ನು ಸೈನ್ಯಾಧಿಕಾರಿಗಳು ಪಡೆದುಕೊಂಡಿದ್ದಾರೆ. ಸೈನಿಕರ ಗಾಗಲ್ಸ್‌ಗೂ ಬೇಡಿಕೆ
ನಾವು ಸಿದ್ಧಪಡಿಸುತ್ತಿರುವ ಸೈನಿಕರು ಹೆಲ್ಮೆಟ್‌ಗೆ ಹಾಕುವ ಗಾಗಲ್ಸ್ (ಕಪ್ಪು ಕನ್ನಡಕ) ಕೂಡ ರಾತ್ರಿ-ಹಗಲು ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಥರ್ಮಲ್ ಇಮೇಜ್‌ಗೂ (ತಿಳಿಹಸುರು) ಬೇಡಿಕೆ ಇದೆ. ಇವು ಕತ್ತಲು, ಧೂಳು, ಮಂಜಿನ ಸಂದರ್ಭವೂ ಸ್ಪಷ್ಟವಾಗಿ ನೋಡಲು ನೆರವಾಗುತ್ತವೆ. ಇವುಗಳ ಸಾಮರ್ಥ್ಯ 25 ಮೀಟರ್ ಮತ್ತು 200-500 ಮೀಟರ್ ಅಂತರ ಇರುತ್ತದೆ. ಹಾಗಾಗಿ ಸೇನೆ ಗಾಗಲ್ಸ್‌ಗೆ ಬೇಡಿಕೆ ಇಟ್ಟಿದ್ದಾರೆ ಎನ್ನುತ್ತಾರೆ, ಮನೋಹರ್ ಅವರ ಪುತ್ರ, ಎಂಜಿನಿಯರಿಂಗ್ ವಿದ್ಯಾರ್ಥಿ ಶ್ರೀಕಾಂತ್ ಎಂ. ಅವರು. ದೂರದರ್ಶಕದಲ್ಲಿ ಏನು ವಿಶೇಷ?
ಈ ದೂರದರ್ಶಕಗಳು ಮಾರುಕಟ್ಟೆಯಲ್ಲಿ ಸದ್ಯ ದೊರೆಯುವ ದೇಶೀಯ, ವಿದೇಶೀಯ ದೂರದರ್ಶಕಗಳಿಗಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ರಾತ್ರಿ-ಹಗಲೂ ಉಪಯೋಗಿಸಬಹುದು. 1 ಅಡಿ, 2.5 ಅಡಿ, ಮತ್ತು 8 ಅಡಿ ಉದ್ದದ ದೂರದರ್ಶಕ ಮಾದರಿಗಲಿವೆ. ಎಲ್ಲದರಲ್ಲೂ 9 ಮಸೂರಗಳನ್ನು (ಲೆನ್ಸ್) ಬಳಸಲಾಗುತ್ತದೆ. ಮುಂಭಾಗದಲ್ಲಿ 4 ಮತ್ತು ಹಿಂಭಾಗ (ನೋಡುವ ಜಾಗ)ದಲ್ಲಿ 5 ಮಸೂರಗಳಿರುತ್ತವೆ. ಮಾರುಕಟ್ಟೆಗಳಲ್ಲಿ ಲಭ್ಯವಿರುವ ದೂರದರ್ಶಕಗಳು ಚಿತ್ರಗಳನ್ನು ತಲೆಕೆಳಗಾಗಿಯೇ ತೋರಿಸುತ್ತವೆ. ಆದರೆ ಇವುಗಳು ನೇರವಾಗಿ ತೋರಿಸುತ್ತವೆ. ಇದಕ್ಕಾಗಿಯೇ ನಾಲ್ಕು ಲೆನ್ಸ್‌ಗಳನ್ನು ಹೆಚ್ಚುವರಿಯಾಗಿ ಜೋಡಿಸಲಾಗುತ್ತದೆ. ಇವುಗಳನ್ನು ಸೂಕ್ಷ್ಮದರ್ಶಕವಾಗಿಯೂ ಬಳಸಬಹುದು. 8 ಡಿಗ್ರಿ ಕೋನದಲ್ಲಿ ಚಿತ್ರ, ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ. ಸದ್ಯ ಸೇನೆ 2.5 ಅಡಿ ಉದ್ದದ ದೂರದರ್ಶಕವನ್ನು ಮೆಚ್ಚಿಕೊಂಡಿದ್ದು ಪುಣೆಯಲ್ಲಿ ಪ್ರ್ಯಾತ್ಯಿಕ್ಷಿಕೆಗೆ ಆಹ್ವಾನ ನೀಡಿದೆ ಎಂದು ಮನೋಹರ್ ಹೆಮ್ಮೆಯಿಂದ ಹೇಳುತ್ತಾರೆ. ಬೋಟ್ ಪತ್ತೆ ನೆರವಿಗೆ ಸಿದ್ಧ
“ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಬೋಟ್‌ನ ಪತ್ತೆಗೆ ನನ್ನ ದೂರದರ್ಶಕಗಳ ನೆರವು ಬೇಕಿದ್ದರೆ ನೌಕಾದಳ ಅಥವಾ ಕೋಸ್ಟ್‌ಗಾರ್ಡ್‌ನವರ ಜತೆಗೆ ಸಮುದ್ರಕ್ಕೆ ತೆರಳಲು ಸಿದ್ಧನಿದ್ದೇನೆ. 20 ಕಿ.ಮೀ. ದೂರಕ್ಕೆ ಯಾವುದಾದರೂ ವಸ್ತುಗಳು ಅಸ್ಪಷ್ಟವಾಗಿ ಕಂಡರೆ ಅದನ್ನು ನಿಖರವಾಗಿ ಈ ದೂರದರ್ಶಕಗಳಿಂದ ಗುರುತಿಸಬಹುದು’ ಎನ್ನುತ್ತಾರೆ ಮನೋಹರ್. ಚೀನಾ, ಅಮೆರಿಕ ದೂರದರ್ಶಕಗಳು ದುಬಾರಿ. ನಿಖರತೆ ಬಗ್ಗೆ ಸಮಾಧಾನವಿಲ್ಲ. ಪೇಟೆಂಟ್ ಬಳಿಕ ಸೇನೆಯಿಂದ ಮೆಚ್ಚುಗೆ ಸಿಕ್ಕಿದ್ದು ಸಂತಸ ತಂದಿದೆ.
-ಮನೋಹರ್.
– ಸಂತೋಷ್ ಬೊಳ್ಳೆಟ್ಟು