Advertisement

52ನೆಯ ವರ್ಷದ ಸಂಭ್ರಮದಲ್ಲಿ ಪರ್ಕಳ ಗಣೇಶೋತ್ಸವ

06:31 PM Aug 29, 2019 | Sriram |

ವಿಶೇಷ ವರದಿಉಡುಪಿ: ಉಡುಪಿ ಜಿಲ್ಲೆಯಲ್ಲಿ ಎರಡನೆಯ ಅತಿ ಹಿರಿಯ ಗಣೇಶೋತ್ಸವ ಪೆಂಡಾಲುಗಳಲ್ಲಿ ಒಂದು ಪರ್ಕಳದ ಸಾರ್ವಜನಿಕ ಗಣೇಶೋತ್ಸವ. ಇದೀಗ 52ನೆಯ ವರ್ಷದ ಗಣೇಶೋತ್ಸವ ನಡೆಯುತ್ತಿದೆ.

Advertisement

1968ರಲ್ಲಿ ನಾರಾಯಣ ಶೆಟ್ಟಿಗಾರ್‌ ಅವರು ಸಮಾನ ಮನಸ್ಕ ಯುವಕರೊಂದಿಗೆ ಸೇರಿ ಗಣೇಶೋತ್ಸವವನ್ನು ಆರಂಭಿಸಿದರು. ಕೆಲವು ವರ್ಷಗಳ ಬಳಿಕ ಪರ್ಕಳ ಜೋಯಿಸರೆಂದು ಹೆಸರಾದ ಗುರುರಾಜ ಆಚಾರ್ಯರು ನೇತೃತ್ವ ವಹಿಸಿದರು. ಇವರ ನಿಧನದ ಅನಂತರ ಗುರುರಾಜ ಆಚಾರ್ಯರ ಪುತ್ರ ಶ್ರೀನಿವಾಸ ಉಪಾಧ್ಯಾಯ ಅಧ್ಯಕ್ಷರಾದರು. ಆರಂಭದ ವರ್ಷಗಳಲ್ಲಿ ಸಮಿತಿ ಎಂದಿರಲಿಲ್ಲ. ಎಲ್ಲರೂ ಜತೆಯಾಗಿ ಉತ್ಸವವನ್ನು ಆಚರಿಸುತ್ತಿದ್ದರು.

1990ರ ದಶಕದಲ್ಲಿ ಶ್ರೀನಿವಾಸ ಉಪಾಧ್ಯಾಯರ ಕಾಲದಲ್ಲಿ ಪರ್ಕಳದಲ್ಲಿ 15 ಸೆಂಟ್ಸ್‌ ಜಾಗ ಸರಕಾರದಿಂದ ಸಮಿತಿ ಹೆಸರಿಗೆ ಮಂಜೂರು ಆಯಿತು. ಮತ್ತೆ ಐದು ಸೆಂಟ್ಸ್‌ ಜಾಗವನ್ನು 1997ರಲ್ಲಿ ದಯಾನಂದ ಶೆಣೈ ದಾನವಾಗಿ ನೀಡಿದರು. ಇದೇ ಸ್ಥಳದಲ್ಲಿ 2004ರ ಎ. 11ರಂದು ವಿಘ್ನೇಶ್ವರ ಸಭಾಭವನ ದಿಲೀಪ್‌ರಾಜ್‌ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಂಡಿತು. 600 ಆಸನಗಳ ಈ ಸಭಾಂಗಣ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವವರಿಗೆ ಕಡಿಮೆ ದರದಲ್ಲಿ ಉಪಯೋಗವಾಗುತ್ತಿದೆ.

ಆರಂಭದಲ್ಲಿ ಗಣೇಶೋತ್ಸವ ಬೇಳಂಜೆ ವಿಟuಲ ಹೆಗ್ಡೆಯವರ ಕಟ್ಟಡದಲ್ಲಿ (ಅನಂತರ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಆರಂಭವಾಯಿತು), ಅನಂತರ ಗಾಂಧಿ ಮೈದಾನದಲ್ಲಿ, ಗ್ರಾ.ಪಂ. ಕಚೇರಿಯಲ್ಲಿ ಹೀಗೆ ವಿವಿಧೆಡೆ ಆಚರಣೆಯಾಯಿತು. 2004ರಲ್ಲಿ ಸಭಾಭವನ ಉದ್ಘಾಟನೆಗೊಂಡ ಬಳಿಕ ಸಭಾಭವನದಲ್ಲಿ ನಡೆಯುತ್ತಿದೆ. 2017ರಲ್ಲಿ ಮಹೇಶ್‌ ಠಾಕೂರ್‌ ಅವರ ಅಧ್ಯಕ್ಷತೆ, ದಿನಕರ ಶೆಟ್ಟಿ ಹೆರ್ಗ ಅವರ ಪ್ರಧಾನ ಕಾರ್ಯದರ್ಶಿತ್ವದಲ್ಲಿ ಸುವರ್ಣ ಮಹೋತ್ಸವ ನಡೆಯಿತು. ಪ್ರಸ್ತುತ ಶ್ರೀನಿವಾಸ ಉಪಾಧ್ಯಾಯರು ಗೌರವಾಧ್ಯಕ್ಷರಾಗಿ, ಸಚ್ಚಿದಾನಂದ ನಾಯಕ್‌ ಪರ್ಕಳ ಅಧ್ಯಕ್ಷರಾಗಿ, ಅಪ್ಪು ಕರ್ಕೇರ ಅವರು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭ ದಿಂದ ಎರಡು ದಿನಗಳ ಕಾಲ ನಡೆಯುತ್ತಿದ್ದ ಉತ್ಸವ 2017ರಲ್ಲಿ 9 ದಿನಗಳ ಸುವರ್ಣ ಮಹೋತ್ಸವ, ಬಳಿಕ ಮೂರು ದಿನಗಳ ಉತ್ಸವ ನಡೆಯುತ್ತಿದೆ.

ಕಳೆದ ಹತ್ತು ವರ್ಷಗಳಿಂದ ದೇವರಾಜ ನಾಯಕ್‌ ಸಣ್ಣಕ್ಕಿಬೆಟ್ಟು ಅವರು ಗಣೇಶನ ವಿಗ್ರಹವನ್ನು ನಿರ್ಮಿಸುತ್ತಿದ್ದಾರೆ. ಇದಕ್ಕೂ ಹಿಂದೆ ಮಣಿಪಾಲದ ಜಯ ವರ್ಮರು ವಿಗ್ರಹ ತಯಾರಿಸಿ ಕೊಡುತ್ತಿದ್ದರು. ಆರಂಭದ ಕಾಲದಲ್ಲಿ ಕೋಟದಲ್ಲಿ ವಿಗ್ರಹ ಮಾಡಿ ತರಿಸಿಕೊಳ್ಳಲಾಗುತ್ತಿತ್ತು.

Advertisement

ತಿಲಕ್‌ ಮರಿಮಗನ ಹಾರೈಕೆ
ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದ ಬಾಲಗಂಗಾಧರ ತಿಲಕ್‌ ಅವರ ಮರಿಮಗ ದೀಪಕ್‌ ಜೆ. ತಿಲಕ್‌ ಅವರು 2017ರ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದರು.

2008ರಿಂದ ಉತ್ಸವದ ಕೊನೆಯ ದಿನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next