“ಪಾರ್ಕ್ ಮ್ಯೂಸಿಕ್’ ಎಂಬ ಆಕರ್ಷಕ ಹೆಸರಿನೊಂದಿಗೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದತ್ತ ಜನರ ಗಮನ, ಆಸಕ್ತಿಗಳನ್ನು ಸೆಳೆಯುವ ಒಂದು ಪ್ರಯತ್ನ ಮಂಗಳೂರಿನ ಮಣ್ಣಗುಡ್ಡೆ ಗಾಂಧಿ ಪಾರ್ಕ್‌ನಲ್ಲಿ ನಡೆಯುತ್ತಿದೆ.
ಹಲವು ವರ್ಷಗಳಿಂದ ಈ ಪಾರ್ಕ್‌ನಲ್ಲಿ ಹೆಸರಾಂತ ಹಿಂದೂಸ್ಥಾನಿ ಕಲಾವಿದರ ಸಂಗೀತ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿವೆ. ಪಾರ್ಕ್ ಸಂಗೀತಕ್ಕೆ ಸೂಕ್ತ ಪ್ರದೇಶ ಎಂಬ ಕಲ್ಪನೆಯೊಂದಿಗೆ ಸ್ವತಃ ಸಂಗೀತ ಕಲಾವಿದೆಯಾಗಿರುವ ಕವಿತಾ ಶಣೈ ಬಸ್ತಿ ಇವರ ಮುಂದಾಳುತ್ವದಲ್ಲಿ ಹತ್ತಾರು ಸಮಾನಾಸಕ್ತ ಮಹಿಳೆಯರ ಕೂಡುವಿಕೆಯಿಂದ ಗಾಂಧಿ ಪಾರ್ಕ್‌ನಲ್ಲಿ ಸಂಗೀತ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತಿವೆ.
ಆಸಕ್ತರು ಆಮಂತ್ರಿತರಾಗಿ ಕಾರ್ಯಕ್ರಮಗಳಿಗೆ ಬರುವುದು ಮಾತ್ರವಲ್ಲದೆ ಪಾರ್ಕ್‌ಗೆ ಇತರ ಉದ್ದೇಶಗಳಿಂದ ಬರುವ ಸಾರ್ವಜನಿಕ ಬಂಧುಗಳ ಕಿವಿಗಳಿಗೆ ತಮ್ಮ ವಾಯು ವಿಹಾರ, ವಾಕಿಂಗ್, ಹಾಗೂ ಮಕ್ಕಳ ಆಟಗಳ ಜೊತೆಯಲಿ ಹಿತವಾದ ಸುಮಧುರ ಸಂಗೀತ ಕೇಳಲು ಸಿಕ್ಕಿ, ಕ್ರಮೇಣ ಇಂಥಾ ಕಾರ್ಯಕ್ರಮಗಳತ್ತ ಅವರು ಆಕರ್ಷಿತರಾಗಿ, ಒಳ್ಳೆಯ ಶ್ರೋತೃಗಳಾಗಿ ಮಾರ್ಪಟ್ಟಾಗ ಈ ಪಾರ್ಕ್ ಮ್ಯೂಸಿಕ್‌ನ ಎರಡನೆಯ ಉದ್ದೇಶ ನೆರವೇರಿದಂತಾಗುತ್ತದೆ.
ಇತ್ತೀಚೆಗೆ ಇಲ್ಲಿ ಪಟಿಯಾಲ ಘರಾಣದ ಮಹೋನ್ನತ ಕಲಾವಿದ ಕಲ್ಕತ್ತಾದ ಪಂಡಿತ್ ಅಜಯ್ ಚಕ್ರವರ್ತಿ ಇವರ ಶಿಷ್ಯರಾದ ಕನ್ನಡಿಗ ಗುರುದತ್ ಅಗ್ರಹಾರ ಕೃಷ್ಣಮೂರ್ತಿ ಇವರ ಸಂಗೀತ ಕಾರ್ಯಕ್ರಮ ನಡೆಯಿತು. ಸಂಜೆಯ ವಾಕಿಂಗ್ ಹಾಗೂ ಆಟದ ಸಮಯ ಮುಗಿಯುತ್ತಿದ್ದಂತೆ ಆರಂಭವಾದ ಸಂಗೀತ ಕಛೇರಿಯಲ್ಲಿ ಗುರುದತ್ ಅವರು ಬಾಗೇಶ್ರೀ ರಾಗದಲ್ಲಿ ವಿಲಂಬಿತ್ ಏಕ್ ತಾಳದ ಬಂಧಿಶ್ ಹಾಗೂ ಮಧ್ಯಲಯ ತೀನ್ ತಾಳದ ಬಂಧಿಶ್ ಅಲ್ಲದೆ ಧೃತ್ ಝಪ್ ತಾಳದ ತಮ್ಮ ಘರಾಣದ ಸುಪ್ರಸಿದ್ಧ ತರಾನವನ್ನು ಮನಮೋಹಕವಾಗಿ ಪ್ರಸ್ತುತ ಪಡಿಸಿದರು. ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್ ಸಾಹೇಬರು ಅನುಸರಿಸುತ್ತಿದ್ದ ಒಂದು ವಿಶೇಷ ಪದ್ಧತಿಯನ್ನು ಗುರುದತ್ ತಮ್ಮ ಗಾಯನದಲ್ಲಿ ಅಳವಡಿಸಿಕೊಂಡಿದ್ದರು. ಏಕ್ ತಾಳದಲ್ಲಿ ಅತಿ ವಿಲಂಬಿತ್ ಲಯದಲ್ಲಿ ಹಾಡಿದರೂ ತಬಲಾ ಲಯವನ್ನು ದುಪ್ಪಟ್ಟು ಇಡಿಸಿಕೊಂಡಿದ್ದರು. ಅಂದರೆ ತಬಲಾದಲ್ಲಿ ಕೊಡಲಾಗುತ್ತಿದ್ದ ವಿಲಂಬಿತ್ ಏಕ್ ತಾಳದ ಸರೀ ಅರ್ಧದ ಲಯದಲ್ಲಿ ಗಾಯನ ಪ್ರಸ್ತುತಿಪಡಿಸಿದರು.ದೇಸ್ ರಾಗದಲ್ಲಿ ಮಧ್ಯಲಯ ರೂಪಕ್ ತಾಳದ ಖ್ಯಾಲ್ ಹಾಗೂ ಧೃತ್ ತೀನ್ ತಾಳದ ಒಂದು ಅನಾಗತ್ ಚೀಸ್ ಪ್ರಸ್ತುತಪಡಿಸಿದರು.
ಒಂದು ಅಭಂಗ್ ಹಾಗೂ ಭೈರವಿಯಲ್ಲಿ ತಮ್ಮ ಘರಾಣದಲ್ಲಿ ಪ್ರಸಿದ್ಧವಾದ ಆಯೇನ ಬಾಲಮ್ ಠುಮ್ರಿಯನ್ನು ಹಾಡಿ ಕಾರ್ಯಕ್ರಮವನ್ನು ಕೊನೆಗೊಳಿಸಿದರು. ಶಶಿಕಿರಣ್ ಮಣಿಪಾಲ ಸಂವಾದಿನಿಯಲ್ಲೂ, ಭಾರವಿ ದೇರಾಜೆ ತಬಲಾದಲ್ಲೂ , ಸತೀಶ್ ಕಾಮತ್ ತಾನ್ಪುರಾ ಹಾಗೂ ಮಂಜೀರದಲ್ಲಿ ಉತ್ತಮವಾಗಿ ಸಾಥ್ ಸಂಗತ್ ನೀಡಿದರು.
– ಸ್ಮಿತಾ ಶೆಣೈ