Advertisement

ಮಳೆಗಾಗಿ ಪರ್ಜನ್ಯ ಹೋಮ

10:11 AM Jun 07, 2019 | Team Udayavani |

ಮಂಗಳೂರು/ಉಡುಪಿ: ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟ ಪ್ರಮುಖ ದೇವಸ್ಥಾನಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ ಮತ್ತು ವಿಶೇಷ ಪೂಜೆ ಗುರುವಾರ ನಡೆಯಿತು.

Advertisement

ರಾಜ್ಯ ಸರಕಾರದ ನಿರ್ದೇಶದಂತೆ ದೇವಸ್ಥಾನಗಳಲ್ಲಿ ಈ ಪೂಜೆ ಹಮ್ಮಿಕೊಳ್ಳಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟ ಒಟ್ಟು 491 ಮತ್ತು ಉಡುಪಿ ಜಿಲ್ಲೆಯಲ್ಲಿ 802 ದೇವಸ್ಥಾನಗಳಿವೆ. ಈ ಪೈಕಿ ಬಹುತೇಕ ದೇವಸ್ಥಾನಗಳಲ್ಲಿ ಪರ್ಜನ್ಯ ಹೋಮ ನಡೆದಿದ್ದು, ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯೂ ಜರಗಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕೆ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ, ನೀಲಾವರ ಶ್ರೀ ಮಹಿಷಮರ್ದಿನಿ, ಕೋಟ ಶ್ರೀ ಅಮೃತೇಶ್ವರೀ, ಗುಡ್ಡಂಬಾಡಿ ಶ್ರೀ ಸುಬ್ರಹ್ಮಣ್ಯ, ಮಾರನಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ, ಹಿರಿಯಡಕ ಶ್ರೀ ವೀರಭದ್ರ, ಎಲ್ಲೂರು ಶ್ರೀ ವಿಶ್ವೇಶ್ವರ, ಕಾಪು ಲಕ್ಷ್ಮೀ ಜನಾರ್ದನ, ಅಂಬಲಪಾಡಿ ಮಹಾಕಾಳಿ, ಕಾರ್ಕಳ ಶ್ರೀಮಾರಿಯಮ್ಮ, ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಪೂಜೆ ನೆರವೇರಿತು.
ದೇಗುಲಗಳಲ್ಲಿ ಪ್ರಾತಃಕಾಲ ಐದು ಗಂಟೆಯಿಂದಲೇ ಪೂಜಾ ಕೈಕಂರ್ಯ ಆರಂಭಗೊಂಡಿದ್ದು, ಆಡಳಿತ ಮಂಡಳಿ ಸದಸ್ಯರು, ಭಕ್ತರು ಪಾಲ್ಗೊಂಡು
ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ರಾಜ್ಯದಲ್ಲಿ ಸಕಾಲದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಈ ಬಾರಿ ಭೀಕರ ಬರಗಾಲ ಸೃಷ್ಟಿಯಾಗಿದೆ. ಕುಡಿಯುವ ನೀರಿಗೆ ಎಲ್ಲೆಡೆಯೂ ಹಾಹಾಕಾರ ಉಂಟಾಗಿದೆ. ಮನುಷ್ಯರು ಮಾತ್ರವಲ್ಲದೆ, ಜಾನುವಾರುಗಳಿಗೂ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ರಾಜ್ಯವು ಎದುರಿಸುತ್ತಿರುವ ಸಂಕಷ್ಟದಿಂದ ಪಾರಾಗಲು ಆರ್ಥಿಕ ಸಾಮರ್ಥ್ಯವಿರುವ ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಜೂ. 6ರಂದು ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ನಡೆಸಬೇಕೆಂದು ಸರಕಾರ ಇಲಾಖೆಯಡಿ ಬರುವ ಎಲ್ಲ ದೇವಸ್ಥಾನಗಳಿಗೆ ಸುತ್ತೋಲೆ ಹೊರಡಿಸಿತ್ತು. ಅಲ್ಲದೆ ಇದಕ್ಕೆ ದೇವಸ್ಥಾನಗಳ ನಿಧಿಗಳಿಂದಲೇ 10,001 ರೂ.ಗಳಿಗೆ ಮೀರದಂತೆ ಖರ್ಚು ಮಾಡಲು ಸರಕಾರ ಸುತ್ತೋಲೆಯಲ್ಲಿ ತಿಳಿಸಿತ್ತು.

ಸರಕಾರಿ ಆದೇಶದನ್ವಯ ಹೋಮ
ಕುಕ್ಕೆ ದೇಗುಲದಲ್ಲಿ ಮಳೆಗಾಗಿ ಪ್ರಾರ್ಥಿಸಿ ಈಗಾಗಲೇ ಸೀಯಾಳಾಭಿಷೇಕ ನಡೆಸಲಾಗಿದೆ. ಅನಂತರ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಬಿದ್ದಿದೆ. ಸರಕಾರದ ಆದೇಶದನ್ವಯ ಮಳೆಗಾಗಿ ಪ್ರಾರ್ಥಿಸಿ ಗುರುವಾರ ಪರ್ಜನ್ಯ ಪೂಜೆ ನಡೆಸಲಾಗಿದೆ.
-ನಿತ್ಯಾನಂದ ಮುಂಡೋಡಿ,  ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಕುಕ್ಕೆ ಸುಬ್ರಹ್ಮಣ್ಯ

Advertisement

ಧಾರ್ಮಿಕ ದತ್ತಿ ಇಲಾಖೆಯ ಸೂಚನೆಯಂತೆ ವಿಶೇಷ ಪೂಜೆ ನಡೆಸಲಾಗಿದೆ.
ಹರೀಶ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಕೊಲ್ಲೂರು ದೇವಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next