Advertisement

PARIVALA GUTTA: ಪಾರಿವಾಳ ಗುಟ್ಟಕ್ಕೆ ಬೇಕಿದೆ ಕಾಯಕಲ್ಪ

10:41 AM Dec 11, 2023 | Team Udayavani |

ದೇವನಹಳ್ಳಿ: ಶತಮಾನಗಳಿಂದ ತಾಲೂಕಿನ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ಪಟ್ಟಣದ ಪಾರಿವಾಳ ಗುಟ್ಟದಲ್ಲಿನ ಆಂಜನೇಯಸ್ವಾಮಿ ದೇವಾಲಯ 67ನೇ ವರ್ಷದ ಕಡಲೇಕಾಯಿ ಪರಿಷೆಗೆ ಸಜ್ಜಾಗಿದೆ. ಆದರೆ, ಇಂದಿಗೂ ಸೂಕ್ತ ಕಾಯಕಲ್ಪವಿಲ್ಲದೇ ಸೊರಗಿದೆ.

Advertisement

ಇತಿಹಾಸ: ಪಾರಿವಾಳ ಗುಟ್ಟದ ಜಾಗದ ವಿಸ್ತರಣೆ 44.05 ಎಕರೆ. ತಪೋಜ್ಞಾನಿಗಳ ಸಮಾಧಿಗಳೂ ಇಲ್ಲಿವೆ. ಎಂತಹ ಬರಗಾದಲ್ಲೂ ಚಿಕ್ಕ ದೊಣ್ಣೆಯಲ್ಲಿ ಸದಾ ನೀರು ತುಂಬಿರುತ್ತದೆ. ಈ ನೀರನ್ನು ಆಂಜನೇಯಸ್ವಾಮಿ ವಿಗ್ರಹ, ಗವಿ ವೀರಭದ್ರಸ್ವಾಮಿ ವಿಗ್ರಹ, ಬೀರಲಿಂಗೇಶ್ವರ ಸ್ವಾಮಿ, ಗಣಪತಿ ಸ್ವಾಮಿ ಪೂಜಾ ಕೈಂಕರ್ಯಕ್ಕೆ ಬಳಸಲಾಗುತ್ತದೆ. ಆದರೆ, ದೇವಾಲಯದ ಶುಚಿತ್ವಕ್ಕೂ ಇದೇ ನೀರು ಬಳಕೆ ಆಗುತ್ತಿದೆ.

ಪ್ರಾಕೃತಿಕ ತಾಣ: ನಗರಕ್ಕೂ ಪಾರಿವಾಳ ಗುಟ್ಟಕ್ಕೂ ಅವಿನಾಭಾವ ಸಂಬಂಧವಿದೆ. ಹತ್ತಾರು ವರ್ಷಗಳಿಂದ ವಾಯು ವಿಹಾರಿಗಳಿಗೆ ಅಚ್ಚು ಮೆಚ್ಚಿನ ತಾಣವಾಗಿದ್ದು ನಗರದಿಂದ ಕೇವಲ 02 ಕಿ.ಮೀ. ದೂರದಲ್ಲಿದೆ. ಅಲ್ಲದೇ, ಪ್ರಾಕೃತಿಕವಾಗಿಯೂ ಗಮನ ಸೆಳೆಯುತ್ತಿದೆ.

ವಿಸ್ಮಯ: ಪ್ರಕೃತಿಯ ಮಡಿಲಿನಲ್ಲಿನ ಈ ಗುಟ್ಟದಲ್ಲಿ ವಿವಿಧ ರೀತಿಯ ವಿಸ್ಮಯಕಾರಿ ಕಲ್ಲು ಬಂಡೆಗಳಿವೆ. ರಾಷ್ಟ್ರೀಯ ಹೆದ್ದಾರಿ 07 ರ ಬೈಪಾಸ್‌ ರಸ್ತೆಗೆ ಹೊಂದಿಕೊಂಡಿರುವ ಈ ಗುಟ್ಟ ಮಂಡೂಕದಂತೆ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಗುಟ್ಟದ ಪಶ್ಚಿಮದಿಂದ ಆಮೆ ತೆವಳುತ್ತಿರುವಂತೆ ನೋಡುಗರಿಗೆ ಭಾಸವಾಗುತ್ತದೆ. ಉತ್ತರದಿಂದ ನೋಡಿದಾಗ ಉದ್ಬವ ಶಿವಲಿಂಗ ದಂತೆ ಕಾಣುವುದು. ಹತ್ತಿರ ನೋಡಿದಾಗ ಆಂಜನೇಯಸ್ವಾಮಿ ದರ್ಶನವಾಗುವುದು.

ಅಭಿವೃದ್ಧಿ ಕಾರ್ಯ ನಡೆಯಬೇಕಾದ್ದೇನು?:

  • ಈ ದೇವಾಲಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ಹೆಚ್ಚುವರಿ ಸರ್ಕಾರಿ ಜಾಗವನ್ನು ಭವಿಷ್ಯದ ದೃಷ್ಟಿಯಿಂದ ಕಾಯ್ದಿರಿಸಬೇಕಾಗಿದೆ. ಜನಪ್ರತಿನಿಧಿಗಳು ಆಸಕ್ತಿ ವಹಿಸದ ಪರಿಣಾಮ 99ವರ್ಷಕ್ಕೆ ಖಾಸಗಿ ವ್ಯಕ್ತಿಗಳು ಜಾಗವನ್ನು ಗುತ್ತಿಗೆ ಪಡೆಯುವಂತೆ ಆಗಿರುವುದು ಶೋಚನೀಯ.
  • ಪರಿಸರ ಪ್ರೇಮಿಗಳ ನೆರವಿನಿಂದ ಈ ಗುಟ್ಟದಲ್ಲಿ 40ಕ್ಕೂ ಹೆಚ್ಚಿನ ವಿವಿಧ ರೀತಿಯ ಆರ್ಯುವೇಧ ಔಷಧ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ಅಲ್ಲದೇ, ಬೇಸಿಗೆಯಲ್ಲಿ ಮರಗಳು ಬೆಂಕಿಗೆ ಸುಟ್ಟುಹೋಗುವುದನ್ನು ತಡೆಯಲಾಗಿದೆ. ಆದರೂ, ಈ ಕುರಿತು ಕಾಳಜಿ ವಹಿಸಬೇಕಿದೆ.
  • ನಂದಿಬೆಟ್ಟ ಮತ್ತು ಚಿಕ್ಕಬಳ್ಳಾಪುರ ಸಮೀಪದಲ್ಲಿ ನಿರ್ಮಾಣವಾಗಿರುವ ಈಶ -ಫೌಂಡೇಶನ್‌ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಂತೆಯೇ ಪ್ರವಾಸೋದ್ಯಮ ಇಲಾಖೆ ಮತ್ತು ಮುಜರಾಯಿ ಇಲಾಖೆ ವತಿಯಿಂದ ಪಾರಿವಾಳ ಗುಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ.
  • ಬೆಳಗ್ಗೆ ಮತ್ತು ಸಂಜೆ ವೇಳೆ ದೇವನಹಳ್ಳಿ ಪಟ್ಟಣದ ನಾಗರಿಕರು ವಾಕಿಂಗ್‌ ಮಾಡಲು ಟ್ರ್ಯಾಕ್‌ ನಿರ್ಮಾಣ ಮಾಡಿದರೆ ಮತ್ತಷ್ಟು ಅನುಕೂಲವಾಗಲಿದೆ. ಒಂದೂವರೆ ಎಕರೆ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಭವನ ನಿರ್ಮಾಣಕ್ಕೆ ಮಂಜೂರಾತಿ ಆಗುತ್ತಿದೆ. ಇನ್ನಾದರೂ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕಿದೆ.
Advertisement

ಹಿರಿಯರು ಕಳೆದ 67 ವರ್ಷಗಳಿಂದ ಕಡಲೇ ಕಾಯಿ ಪರಿಷೆ ನಡೆಸಿಕೊಂಡು ಬಂದಿದ್ದಾರೆ. ಧಾರ್ಮಿಕ ಕೇಂದ್ರದ ಜತೆಗೆ ಚಾರಣಕ್ಕೂ ಉತ್ತಮ ತಾಣ. ಆಯು ರ್ವೇದ ಸಸಿಗಳನ್ನು ಬೆಳೆಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಭವಿಷ್ಯದ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಉತ್ತಮ ತಾಣವನ್ನಾಗಿ ನಿರ್ಮಿಸಬೇಕಿದೆ. ಶಿವನಾಪುರ ಎಸ್‌.ಸಿ.ರಮೇಶ್‌, ಸಾವಯವ ಕೃಷಿಕ

ಪಾರಿವಾಳ ಗುಡ್ಡದ ಸರ್ವೆ ನಂಬರ್‌ 2,3,4,9 ಜಾಗವನ್ನು ಕಡಲೆಕಾಯಿ ಪರಿಷೆಗೆ ಮೀಸಲಿಡ ಬೇಕು. 14.9 ಎಕರೆ ಜಾಗವಿದ್ದು 1.20 ಎಕರೆ ಕಲಾಭವನಕ್ಕೆ ನೀಡುತ್ತಿದ್ದಾರೆ. ಇನ್ನುಳಿದ ಜಾಗವನ್ನು ಕಡಲೆಕಾಯಿ ಪರಿಷೆಗೆ ಮೀಸಲಿಡಬೇಕು. ಈ ಮೂಲಕ ಪ್ರವಾಸಿ ತಾಣವನ್ನಾಗಿಸಬೇಕು. ಸಿ.ಮುನಿರಾಜು ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರು

ಕಡಲೆಕಾಯಿ ಪರಿಷೆಗೆ ಎರಡೂವರೆ ಯಿಂದ 3 ಎಕರೆವರೆಗೆ ಜಾಗ ಮೀಸಲಿಡಲು ಉಪವಿಭಾಗಾಧಿ ಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಯೊಂದಿಗೆ ಚರ್ಚಿಸಿ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸುತ್ತೇನೆ. ● ಶಿವರಾಜ್‌, ದೇವನಹಳ್ಳಿ ತಹಶೀಲ್ದಾರ್‌

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next