Advertisement

Karnataka ಪರಿಷತ್‌: 17 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

11:04 PM Jun 24, 2024 | Team Udayavani |

ಬೆಂಗಳೂರು: ಶಿಕ್ಷಕರು, ಪದವೀಧರ ಕ್ಷೇತ್ರ ಹಾಗೂ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ 17 ಶಾಸಕರು ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಸಮ್ಮುಖದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಬೆಂಬಲಿಗರ ಜೈಕಾರ, ಶಿಳ್ಳೆ, ಚಪ್ಪಾಳೆಗಳ ನಡುವೆ ಹದಿನೇಳೂ ಜನರು ಪ್ರತಿಜ್ಞಾವಿಧಿ ಪಡೆದರು.

ಭಗವಂತನ ಹೆಸರಿನಲ್ಲಿ ಪ್ರಮಾಣ
ಆರಂಭದಲ್ಲಿ ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾದ ಸಚಿವ ಎನ್‌.ಎಸ್‌. ಬೋಸರಾಜು, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಐವನ್‌ ಡಿ’ಸೋಜಾ, ಜವರಾಯಿಗೌಡ, ಸಿ.ಟಿ. ರವಿ, ಎ. ವಸಂತ ಕುಮಾರ್‌ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಶಿಕ್ಷಕ ಮತ್ತು ಪದ ವೀಧರರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಡಾ| ಧನಂಜಯ್‌ ಸರ್ಜಿ, ರಾಮೋಜಿ ಗೌಡ, ಎಸ್‌.ಎಲ್‌. ಭೋಜೇಗೌಡ, ಕೆ. ವಿವೇಕಾನಂದ, ಡಿ.ಟಿ. ಶ್ರೀನಿವಾಸ್‌ ಅವರೂ ಭಗವಂತನ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದರು.

ತಮ್ಮಿಷ್ಟದ ಹೆಸರಿನಲ್ಲಿ ಪ್ರತಿಜ್ಞೆ: ಜಗದೇವ್‌ ಗುತ್ತೇ ದಾರ್‌ ಅವರು ಬುದ್ಧ, ಬಸವ ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣ ಮಾಡಿದರೆ, ಬಲ್ಕಿಶ್‌ ಬಾನು ಅವರು ಅಲ್ಲಾಹುವಿನ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದರು. ಡಾ.ಮಾರುತಿರಾವ್‌ ಮುಳೆ ಅವರು ಛತ್ರಪತಿ ಶಿವಾಜಿ ಮಹಾರಾಜ್‌, ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸಂವಿಧಾನ, ಎನ್‌.ರವಿಕುಮಾರ್‌- ಭಾರತ ಮಾತೆ ಹಾಗೂ ಡಾ.ಚಂದ್ರಶೇಖರ್‌ ಪಾಟೀಲ್‌ ಅವರು ವೀರಭದ್ರೇಶ್ವರ ಸ್ವಾಮಿ ಮೇಲೆ ಪ್ರತಿಜ್ಞೆ ಸ್ವೀಕರಿಸಿದರು.

ಬೆಂಬಲಿಗರ ಶಕ್ತಿ ಪ್ರದರ್ಶನ: ಅಭಿಮಾನಿಗಳು, ಬೆಂಬಲಿಗರಿಂದಲೇ ಕಿಕ್ಕಿರಿದಿದ್ದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಜಾಗ ಸಾಲುವುದಿಲ್ಲ ಎಂಬ ಕಾರಣಕ್ಕೆ ಹೊರಗೂ ಎರಡು ಎಲ್‌ಇಡಿ ಪರದೆ ಅಳವಡಿಸಿ, ಆಸನದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಬ್ಬ ಸದಸ್ಯರ ಹೆಸರನ್ನು ಕರೆದಾಗಲೂ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯ ಸದ್ದು ಮಾರ್ದನಿಸುತ್ತಿತ್ತು. ಅದರಲ್ಲೂ ಸಿ.ಟಿ. ರವಿ, ಡಾ| ಧನಂಜಯ್‌ ಸರ್ಜಿ ಅವರು ಹೆಸರು ಕರೆದಾಗಂತೂ ಶಿಳ್ಳೆ ಚಪ್ಪಾಳೆಗಳು ಭೋರ್ಗರೆದವಲ್ಲದೆ, ಜೈಶ್ರೀರಾಂ ಘೋಷಣೆಗಳೂ ಮೊಳಗಿದವು. ಅದೇ ರೀತಿ ಡಾ.ಮಾರುತಿರಾವ್‌ ಮುಳೆ ಅವರನ್ನು ಆಹ್ವಾನಿಸುತ್ತಿದ್ದಂತೆ ಶಿವಾಜಿ ಮಹಾರಾಜ್‌ ಕೀ ಜೈ ಎನ್ನುವ ಉದ್ಘೋಷ ಕೇಳಿಬಂತು.

Advertisement

ಮೈಕ್‌ ಗೊಂದಲ: ಪ್ರಮಾಣ ವಚನ ಸ್ವೀಕಾರಕ್ಕೆಂದು ವೇದಿಕೆಯ ಮಧ್ಯಭಾಗದಲ್ಲಿ ಆಳೆತ್ತರದ ಮೈಕ್‌ನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅದನ್ನು ಸದಸ್ಯರು ಗಮನಿ ಸಿದ್ದು ಕಡಿಮೆ. ಪೋಡಿಯಂ ಮುಂದೆ ನಿಂತು ಸದಸ್ಯರ ಹೆಸರು ಕರೆಯುತ್ತಿದ್ದ ಮೈಕ್‌ ಮುಂದೆಯೇ ಎಲ್ಲರೂ ಗೌಪ್ಯತಾ ವಿಧಿ ವಾಚನಕ್ಕೆ ಮುಂದಾಗುತ್ತಿ ದ್ದರು. ವೇದಿಕೆ ಮಧ್ಯದಲ್ಲಿದ್ದ ಮೈಕ್‌ ತೋರಿಸಿ, ಅಲ್ಲೇ ವಾಚನ ಮಾಡುವಂತೆ ಪರಿಷತ್‌ ಸಿಬ್ಬಂದಿ ಹಾಗೂ ಅಧಿಕಾರಿಗಳು ತಿಳಿಸಿ ಹೇಳುವಂತಾಗಿತ್ತು. ಮೈಕ್‌ ಗೊಂದಲದಿಂದ ಹೈರಾಣಾದ ಜವರಾಯಿಗೌಡ, ಪ್ರತಿಜ್ಞಾವಿಧಿ ಓದಿ ಮುಗಿಸಿದ ನಂತರ ಅದರ ಪ್ರತಿಯನ್ನು ಯಾರಿಗೆ ಕೊಡಬೇಕೆಂದು ಅತ್ತಿತ್ತ ನೋಡಿದರು. ಅದನ್ನು ಪಡೆದ ಸಿಬ್ಬಂದಿ, ಅವರ ಕೈಗೆ ಪುನಃ ಎರಡು ಕಡತ ಕೊಟ್ಟಿದ್ದರಿಂದ ಅವರು ಮತ್ತಷ್ಟು ಗೊಂದಲಕ್ಕೊಳಗಾಗಿ ಎರಡಕ್ಕೂ ಸಹಿ ಮಾಡಬೇಕಾ ಎಂದು ಮೈಕ್‌ನಲ್ಲೇ ಕೇಳಿದರು.

ಕನ್ನಡದ ಶಾಲು ಧರಿಸಿ ಗಮನ ಸೆಳೆದ ಕೋಟ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕನ್ನಡ ಭಾಷೆಯಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭ ಅವರು ಹಳದಿ ಮತ್ತು ಕೆಂಪು ಬಣ್ಣದ ಶಾಲು ಧರಿಸಿದ್ದರು.

ಬೆನ್ನು ತಟ್ಟಿ, ಕಿವಿ ಹಿಂಡಿದ ಸಿಎಂ
ಪ್ರತಿಜ್ಞಾವಿಧಿ ಸ್ವೀಕರಿಸಿದ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಪತಿ ಹೊರಟ್ಟಿ, ಸಚಿವ ಎಚ್‌.ಕೆ. ಪಾಟೀಲ್‌ ಹೂಗುತ್ಛ ನೀಡಿ ಅಭಿನಂದಿಸಿದರು. ಸಭಾಪತಿ ಹೊರಟ್ಟಿ ಅವರು ಸಂವಿಧಾನದ ಪುಸ್ತಕ, ಸಭೆಯ ನಡಾವಳಿ ಕೈಪಿಡಿ, ಕಾರ್ಯ-ಕಲಾಪಗಳ ನಿಯಮಾವಳಿ ಹೊತ್ತಗೆಯುಳ್ಳ ಸೂಟ್‌ಕೇಸನ್ನು ವಿತರಿಸಿದರು. ಕಾಲಿಗೆರಗಿ ನಮಸ್ಕರಿಸಿದ ಸದಸ್ಯರಿಗೆ ಸಿಎಂ ಬೆನ್ನು ತಟ್ಟಿ ಆಶೀರ್ವದಿಸಿದರು. ಪುತ್ರ ಯತೀಂದ್ರ ಕೂಡ ಕಾಲಿಗೆರಗಿದರು. ಸಿ.ಟಿ. ರವಿ ಅವರಿಗೆ ಸಿಎಂ ಆತ್ಮೀಯವಾಗಿ ಕಿವಿ ಹಿಂಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next