Advertisement

ಪ್ಯಾರಿಸ್‌ ಒಪ್ಪಂದ: ಟ್ರಂಪ್‌ ನಿರ್ಗಮನ ವಿಷಾದಕರ

03:07 PM Jun 03, 2017 | |

ದೋಷಾರೋಪಣೆ ಮಾಡುವಾಗ ಟ್ರಂಪ್‌ ಹಸಿರುಮನೆ ಅನಿಲ ವಿಸರ್ಜನೆಯಲ್ಲಿ ಅಮೆರಿಕ ಜಗತ್ತಿನಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎನ್ನುವುದನ್ನು ಮರೆತಿದ್ದಾರೆ. 

Advertisement

ಪ್ಯಾರಿಸ್‌ ಹವಾಮಾನ ಬದಲಾವಣೆ ಒಪ್ಪಂದದಿಂದ ಹಿಂದೆಗೆದು ಕೊಂಡಿರುವ ಅಮೆರಿಕದ ನಿರ್ಧಾರ ಜಗತ್ತಿನಾದ್ಯಂತ ಅಚ್ಚರಿ ಹುಟ್ಟಿಸಿದೆ. ದೃಢ ಮತ್ತು ಕ್ಷಿಪ್ರ ನಿರ್ಧಾರಗಳಿಗೆ ಖ್ಯಾತರೂ ಕುಖ್ಯಾತರೂ ಆಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹವಾಮಾನ ಬದಲಾವಣೆ ಶೃಂಗ ದಲ್ಲಿ ಮಾಡಿದ ಸುಮಾರು ಅರ್ಧತಾಸಿನ ಭಾಷಣದ ಸಂದರ್ಭದಲ್ಲಿ ಹಿಂದುಮುಂದು ಯೋಚಿಸದೆ ಈ ನಿರ್ಧಾರ ಘೋಷಿಸಿದ್ದಾರೆ. ತನ್ನ ಅಮೆರಿಕ ಫ‌ರ್ಸ್ಡ್ ನೀತಿಗನುಗುಣವಾಗಿ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಪ್ಯಾರಿಸ್‌ ಹವಾಮಾನ ಒಪ್ಪಂದಿಂದ ಅಮೆರಿಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಅವರು ಹಿಂದಿನಿಂದಲೂ ನಂಬಿಕೊಂಡು ಬಂದಿದ್ದಾರೆ. ಈ ಒಪ್ಪಂದ ಎಂದಲ್ಲ, ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿರುವ ಎಲ್ಲ ಅಂತಾರಾಷ್ಟ್ರೀಯ ಒಪ್ಪಂದ, ಒಡಂಬಡಿಕೆಗಳ ಕುರಿತು ಟ್ರಂಪ್‌ಗೆ ಅಸಮಾಧಾನವಿದೆ. ಅಧ್ಯಕ್ಷರಾಗಿ ತನ್ನ ದೇಶದ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ಅವರಿಗಿದೆ. ಪ್ಯಾರಿಸ್‌ ಹವಾಮಾನ ಬದಲಾವಣೆ ಒಪ್ಪಂದವನ್ನೂ ಅವರು ಈ ದೃಷ್ಟಿಯಿಂದಲೇ ನೋಡಿರುವುದ ರಿಂದ ಅವರ ಮಟ್ಟಿಗೆ ಈ ನಿರ್ಧಾರ ಸರಿ. 

ಅಮೆರಿಕ, ಪ್ಯಾರಿಸ್‌ ಒಪ್ಪಂದದಿಂದ ಹಿಂದೆಗೆಯಲು ಭಾರತ ಮತ್ತು ಚೀನ ಕಾರಣ ಎಂದು ಭಾಷಣದಲ್ಲಿ ಟ್ರಂಪ್‌ ಕಿಡಿ ಕಾರಿದ್ದಾರೆ. ಭಾರತ ಮತ್ತು ಚೀನದಿಂದ ಅತಿ ಹೆಚ್ಚು ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಆದರೆ ಒಪ್ಪಂದದಡಿಯಲ್ಲಿ ಮಾಲಿನ್ಯವನ್ನು ಕಡಿಮೆಗೊಳಿಸಲು ಭಾರತ ವಿಶೇಷ ಪ್ರಯತ್ನವನ್ನು ಮಾಡುತ್ತಿಲ್ಲ. ತಾನು ಮಾಡುತ್ತಿರುವ ಅಲ್ಪ ಪ್ರಯತ್ನಗಳಿಗೆ ಪ್ರತಿಯಾಗಿ ಭಾರತ ಭಾರೀ ಮೊತ್ತದ ನೆರವನ್ನು ಯಾಚಿಸುತ್ತಿದೆ ಎನ್ನುವುದು ಟ್ರಂಪ್‌ ಅಸಮಾಧಾನಕ್ಕೆ ಕಾರಣ. ಅತಿ ಹೆಚ್ಚು ಜನಸಂಖ್ಯೆಯ ಹೊಂದಿರುವ ಎರಡು ದೇಶಗಳಲ್ಲಿ ಮಾಲಿನ್ಯ ಮಟ್ಟ ಹೆಚ್ಚಿರುವುದು ಸಹಜ. ಎರಡೂ ದೇಶಗಳು ಇತ್ತೀಚೆಗಿನ ದಶಕಗಳಲ್ಲಿ ಭಾರೀ ಕೈಗಾರೀಕರಣಗೊಂಡಿವೆ. 

ಆದರೆ ಭಾರತ ಮತ್ತು ಚೀನದ ಮೇಲೆ ದೋಷಾರೋಪಣೆ ಮಾಡುವಾಗ ಟ್ರಂಪ್‌ ಹಸಿರುಮನೆ ಅನಿಲ ವಿಸರ್ಜನೆಯಲ್ಲಿ ಅಮೆರಿಕ ಜಗತ್ತಿನಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎನ್ನುವುದನ್ನು ಮರೆತಿದ್ದಾರೆ. ಅತಿ ಹೆಚ್ಚು ಪಳೆಯುಳಿಕೆ ಇಂಧನವನ್ನು ಆಮದು ಮಾಡುವ ಮತ್ತು ಬಳಸುವ ದೇಶ ಅಮೆರಿಕ. ದಿಲ್ಲಿ, ಮುಂಬಯಿ, ಬೀಜಿಂಗ್‌ ಅಥವಾ ತೃತೀಯ ರಾಷ್ಟ್ರಗಳ ಅನ್ಯ ಯಾವುದೇ ನಗರಗಳಂತೆ ಅಮೆರಿಕದ ನಗರಗಳು ಮಲಿನವಾಗಿಲ್ಲ ಎಂಬಂತೆ ಕಾಣಿಸಿದರೂ ಪ್ರಕೃತಿಗೆ ವಿಷಕಾರಿ ಅನಿಲವನ್ನು ಸೇರಿಸುವಲ್ಲಿ ಅಮೆರಿಕದ ಪಾಲೂ ಸಾಕಷ್ಟಿದೆ.  ಪ್ಯಾರಿಸ್‌ ಹವಾಮಾನ ಬದಲಾವಣೆ ಒಪ್ಪಂದ ಏರ್ಪಟ್ಟಿರುವುದು 2005ರಲ್ಲಿ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರೇ ಮುಂಚೂಣಿಯಲ್ಲಿ ನಿಂತು 195 ದೇಶಗಳ ಮನವೊಲಿಸಿ ಈ ಒಪ್ಪಂದದಲ್ಲಿ ಸಹಭಾಗಿಯಾಗುವಂತೆ ಮಾಡಿದ್ದಾರೆ. ಶ್ರೀಮಂತ, ಬಡವ ಎಂಬ ಬೇಧವಿಲ್ಲದೆ ಎಲ್ಲ ದೇಶಗಳು ಪಳೆಯುಳಿಕೆ ಇಂಧನಗಳಿಂದ ಉಂಟಾಗುವ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ಬದ್ಧರಾಗಿರುವ ಒಪ್ಪಂದವಿದು. ಪಳೆಯುಳಿಕೆ ಇಂಧನದ ಜತೆಗೆ ಕಲ್ಲಿದ್ದಲು ಬಳಕೆಗೂ ಕಡಿವಾಣ ಹಾಕುವ ಅಂಶ ಒಪ್ಪಂದದಲ್ಲಿದೆ.

ಅಮೆರಿಕವೇ ಪ್ಯಾರಿಸ್‌ ಒಪ್ಪಂದದ ಮಹಾಪೋಷಕ ದೇಶವಾಗಿತ್ತು. 100 ಶತಕೋಟಿ ಡಾಲರ್‌ನಲ್ಲಿ ಅಮೆರಿಕದ ಪಾಲು ದೊಡ್ಡದಿತ್ತು. ಇದೀಗ ಅಮೆರಿಕ ಒಪ್ಪಂದದಿಂದ ಹಿಂದೆ ಸರಿದಿರುವುದರಿಂದ ಸಂಪನ್ಮೂಲದ ಕೊರತೆ ಉಂಟಾಗುವ ಆತಂಕ ತಲೆದೋರಿದೆ. ಇನ್ನು ಭಾರತಕ್ಕೆ ಸಂಬಂಧಿಸಿದಂತೆ ಟ್ರಂಪ್‌ ಮಾಡಿದ ದೂಷಣೆ ಯಿಂದಾಗಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಹೆಚ್ಚಿನ ಪರಿಣಾಮವೇನೂ ಆಗದು. ಹಾಗೆ ನೋಡಿದರೆ ಬೇರೆ ಯಾವುದೇ ದೇಶಕ್ಕಿಂತ ಹೆಚ್ಚಿನ ಪರಿಸರ ಕಾಳಜಿಯನ್ನು ಭಾರತ ಹೊಂದಿದೆ. 

Advertisement

ಪಳೆಯುಳಿಕೆ ಇಂಧನ ಬಳಕೆಯನ್ನು ಕಡಿಮೆಗೊಳಿಸಲು ದೊಡ್ಡ ಮಟ್ಟದ ಆಂದೋಲನವೇ ನಡೆಯುತ್ತಿದೆ. ನವೀಕರಿಸಬಹುದಾದ ಇಂಧನ ಮೂಲಗಳ ಅನ್ವೇಷಣೆ, ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ನೀಡುತ್ತಿರುವ ಉತ್ತೇಜನಗಳೆಲ್ಲ ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳೇ. ಇನ್ನೆರಡು ದಶಕಗಳಲ್ಲಿ ಸೌರ ವಿದ್ಯುತ್‌ ಬಲದಿಂದ ಓಡುವ ಕಾರುಗಳನ್ನು ಮಾತ್ರ ಹೊಂದುವ ಗುರಿ ಇಟ್ಟುಕೊಂಡಿರುವುದು ಕೂಡ ಮಾಲಿನ್ಯವನ್ನು ಭಾರತ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದಕ್ಕೊಂದು ಉದಾಹರಣೆ. ಅಮೆರಿಕ ಏನೇ ಅಂದರೂ ಭಾರತ ತನ್ನ ಪರಿಸರ ಕಾಳಜಿಯನ್ನು ಮರೆತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next