Advertisement

Paris Olympics Wrestler: ಹುಟ್ಟೂರು ಬಲಾಲಿಯಲ್ಲಿ ವಿನೇಶ್‌ ಫೋಗಾಟ್‌ಗೆ ಸಮ್ಮಾನ

11:31 PM Aug 18, 2024 | Team Udayavani |

ಬಲಾಲಿ (ಹರಿಯಾಣ): ಶನಿವಾರ ಪ್ಯಾರಿಸ್‌ನಿಂದ ಭಾರತಕ್ಕೆ ಬಂದ ಕುಸ್ತಿಪಟು ವಿನೇಶ್‌ ಫೋಗಾಟ್‌ ತಡರಾತ್ರಿ ತಮ್ಮೂರು ಬಲಾಲಿಗೆ ತೆರಳಿದ್ದಾರೆ. ದಿಲ್ಲಿಯಿಂದ ಬಲಾಲಿಗೆ ಸತತ 12 ಗಂಟೆಗಳ ಸಂಚಾರ ಮಾಡಿ, ಅಲ್ಲಲ್ಲಿ ಸಮ್ಮಾನ ಸ್ವೀಕರಿಸಿ ಮುಂದುವರಿದ ಅವರು ಮಧ್ಯರಾತ್ರಿಯ ಹೊತ್ತಿಗೆ ಊರನ್ನು ಸೇರಿಕೊಂಡರು. ಆ ಹೊತ್ತಿನಲ್ಲೂ ಎಚ್ಚರವಿದ್ದ ಗ್ರಾಮಸ್ಥರು ಆತ್ಮೀಯ ಸ್ವಾಗತ ನೀಡಿದರು.

Advertisement

ಪ್ಯಾರಿಸ್‌ ಒಲಿಂಪಿಕ್ಸ್‌ನ 50 ಕೆಜಿ ಕುಸ್ತಿಯಲ್ಲಿ ಫೈನಲ್‌ ತಲುಪಿದ್ದ ವಿನೇಶ್‌ ಫೋಗಾಟ್‌, ಅಲ್ಲಿ ಕೇವಲ 100 ಗ್ರಾಮ್‌ ತೂಕ ಜಾಸ್ತಿಯಿದೆ ಎಂದು ಅನರ್ಹಗೊಂಡಿದ್ದರು. ಅದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಫೈನಲ್‌ಗೇರಿದ್ದರೂ ಯಾವುದೇ ಪದಕವಿಲ್ಲದೇ ಹೋಗಿದ್ದರಿಂದ ಅವರು ತೀರಾ ಹತಾಶೆಗೊಂಡಿದ್ದರು.
ಗ್ರಾಮಸ್ಥರೆಲ್ಲ ಒಗ್ಗೂಡಿ ವಿನೇಶ್‌ಗೆ ಹಣ ನೀಡಿದರು. ಊರಿನ ವಾಚ್‌ಮನ್‌ ಒಬ್ಬರು ನೀಡಿದ 100 ರೂ., ಇನ್ನೊಬ್ಬರು ನೀಡಿದ 21,000 ರೂ. ಈ ಮೊತ್ತವನ್ನೆಲ್ಲ ಸೇರಿಸಿ ಒಂದು ಮೊತ್ತವನ್ನು ವಿನೇಶ್‌ಗೆ ಅರ್ಪಿಸಿದ್ದಾರೆ. ಇದು ವಿನೇಶ್‌ರನ್ನು ಭಾವುಕರನ್ನಾಗಿಸಿದೆ.

ಬಂಗಾರದ ಪದಕ ಹಾಕಿದ ಗ್ರಾಮಸ್ಥರು
ತಡರಾತ್ರಿವರೆಗೆ ಕಾದಿದ್ದ ಬಲಾಲಿ ಗ್ರಾಮಸ್ಥರು ವಿನೇಶ್‌ಗೆ ಬಂಗಾರದ ಪದಕವನ್ನು ಹಾಕಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಬಂಗಾರ, ಬೆಳ್ಳಿಯ ಪದಕ ತಪ್ಪಿಸಿಕೊಂಡ ನೋವಲ್ಲಿರುವ ವಿನೇಶ್‌ಗೆ ಗ್ರಾಮಸ್ಥರು ಈ ಮೂಲಕ ಸಾಂತ್ವನ ಹೇಳಿದ್ದಾರೆ.

ನಿವೃತ್ತಿ ಬಗ್ಗೆ ಈಗಲೇ ಏನೂ ಹೇಳಲ್ಲ
50 ಕೆಜಿ ಫೈನಲ್‌ನಲ್ಲಿ ಅನರ್ಹಗೊಂಡಿದ್ದ ವಿನೇಶ್‌ ಉದ್ವೇಗಕ್ಕೊಳಗಾಗಿ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಇತ್ತೀಚೆಗೆ ಟ್ವೀಟರ್‌ ಹೇಳಿಕೆಯಲ್ಲಿ ನಿವೃತ್ತಿಯಿಂದ ಹೊರಬರುವ ಸುಳಿವು ನೀಡಿದ್ದರು. ಬಲಾಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ್ತೆ ನಿವೃತ್ತಿಯಿಂದ ಹೊರಬರ್ತಾರಾ ಎಂಬ ಕುತೂಹಲ ಮೂಡಿಸಿದ್ದಾರೆ.

“ಈ ಒಲಿಂಪಿಕ್‌ ಪದಕ ದೊಡ್ಡ ಗಾಯ ಮಾಡಿದೆ. ಅದು ಗುಣವಾಗಲು ಎಷ್ಟು ಸಮಯ ಬೇಕೋ ಗೊತ್ತಿಲ್ಲ. ಮತ್ತೆ ಕುಸ್ತಿಯಲ್ಲಿ ಸ್ಪರ್ಧಿಸುತ್ತೇನಾ, ಇಲ್ಲವಾ ಅಂತಲೂ ಗೊತ್ತಿಲ್ಲ. ಈಗಂತೂ ಆ ಬಗ್ಗೆ ಏನನ್ನೂ ಹೇಳಲಾರೆ. ಆದರೆ ನನ್ನ ಗ್ರಾಮಸ್ಥರು ನೀಡಿದ ಧೈರ್ಯ ನೋಡಿದಾಗ ಮತ್ತೆ ಕುಸ್ತಿಗೆ ಮರಳಿದರೂ ಮರಳಬಹುದು’ ಎಂದು ವಿನೇಶ್‌ ಹೇಳಿದ್ದಾರೆ. ಈ ಹೇಳಿಕೆ ಕುತೂಹಲ ಮೂಡಿಸಿದೆ.

Advertisement

ಮಹಾವೀರ್‌ರನ್ನು ಮರೆತ ವಿನೇಶ್‌: ವಿವಾದ
ಇತ್ತೀಚೆಗೆ ಟ್ವೀಟ್‌ ಮಾಡಿದ್ದ ವಿನೇಶ್‌ ತಮಗೆ ತರಬೇತಿ ನೀಡಿದ್ದ ತಮ್ಮ ಚಿಕ್ಕಪ್ಪ ಮಹಾವೀರ್‌ ಫೋಗಾಟ್‌ ಬಗ್ಗೆ ಏನನ್ನೂ ಹೇಳಿರಲಿಲ್ಲ. ಇದು ಮಹಾವೀರ್‌ ಮಕ್ಕಳಾದ ಗೀತಾ, ಬಬಿತಾ ಫೋಗಾಟ್‌ಗೆ ಬೇಸರ ಮೂಡಿಸಿದೆ. ವಂಚನೆ ವಂಚನೆಯನ್ನೇ ಪಡೆಯುತ್ತದೆ, ಇವತ್ತಲ್ಲ ನಾಳೆ ಎಂದು ಗೀತಾ ಫೋಗಾಟ್‌ ಹೇಳಿದ್ದರೆ, ಅವರ ಪತಿ ಪವನ್‌ ಸರೋಹ “ನೀವು ಮಹಾವೀರ್‌ರನ್ನು ಮರೆತ್ತಿದ್ದೀರಾ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next