ಪ್ಯಾರಿಸ್: 2024ನೇ ಸಾಲಿನ ಒಲಿಂಪಿಕ್ಸ್‌ಗೆ ಶುಕ್ರವಾರ ಅಧಿಕೃತ ಚಾಲನೆ ದೊರಕಲಿದ್ದರೂ ಭಾರತದ ಅಭಿಯಾನ ಗುರುವಾರವೇ ಆರಂಭವಾಗಲಿದೆ. ಆರ್ಚರಿಯ ವೈಯಕ್ತಿಕ ರ್‍ಯಾಂಕಿಂಗ್‌ನ ಸ್ಪರ್ಧೆಗಳು ಗುರುವಾರ ಆರಂಭವಾಗಲಿದ್ದು, ಭಾರತದ 6 ಮಂದಿ ಬಿಲ್ಲಾಳುಗಳು ಸ್ಪರ್ಧಿಸುತ್ತಿದ್ದಾರೆ.
ಆರ್ಚರಿ ಭಾರತದ ನೆಚ್ಚಿನ ಕ್ರೀಡೆಗಳಲ್ಲೊಂದು. ಆದರೆ 1988ರಲ್ಲಿ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಯನ್ನು ಆಯೋಜಿಸಿದ ಬಳಿಕ ಭಾರತಕ್ಕೆ ಇನ್ನೂ ಪದಕಕ್ಕೆ ಗುರಿ ಇರಿಸಲಾಗಲಿಲ್ಲ. 2000ದ ಸಿಡ್ನಿ ಕೂಟಕ್ಕೆ ಅರ್ಹತೆಯೇ ಲಭಿಸಿರಲಿಲ್ಲ. ಉಳಿದಂತೆ ಪ್ರತೀ ಸಲವೂ ಪದಕದ ನಿರೀಕ್ಷೆ ಗರಿಗೆದರುತ್ತದೆಯೇ ಹೊರತು ಯಶಸ್ಸು ಮಾತ್ರ ಮರೀಚಿಕೆಯೇ ಆಗುಳಿದಿದೆ. ಎಲ್ಲೂ ಕ್ವಾರ್ಟರ್ ಫೈನಲ್‌ನಾಚೆ ದಾಟಿಲ್ಲ. ಪ್ಯಾರಿಸ್‌ನಲ್ಲಾದರೂ ಪದಕಕ್ಕೆ ಮುತ್ತಿಡಬೇಕಿದೆ.
6 ಸದಸ್ಯರ ತಂಡ: 2012ರ ಲಂಡನ್ ಕೂಟದ ಬಳಿಕ ಭಾರತ ಮೊದಲ ಬಾರಿಗೆ ಪೂರ್ತಿ 6 ಸದಸ್ಯರ ತಂಡವನ್ನು ಒಲಿಂಪಿಕ್ಸ್‌ಗೆ ರವಾನಿಸಿದೆ. ವನಿತೆಯರ ವಿಭಾಗದಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್; ಪುರುಷರ ವಿಭಾಗದಲ್ಲಿ ಬಿ.ಧೀರಜ್, ತುರುಣ್‌ದೀಪ್ ರಾಯ್, ಪ್ರವೀಣ್ ಜಾಧವ್ ಸ್ಪರ್ಧೆಗೆ ಇಳಿಯಲಿದ್ದಾರೆ. ಇವರೆಲ್ಲರೂ ರ್‍ಯಾಂಕಿಂಗ್ ಅರ್ಹತೆಯ ಮೇಲೆ ಆಯ್ಕೆಯಾದ ಕಾರಣ ಎಲ್ಲ 5 ವಿಭಾಗಗಳಲ್ಲೂ ಸ್ಪರ್ಧಿಸಬಹುದಾಗಿದೆ.
72 ಬಾಣಗಳ ಗುರಿ: ಹಿರಿಯರಾದ ತುರುಣ್ ದೀಪ್ ರಾಯ್ ಮತ್ತು ದೀಪಿಕಾ ಕುಮಾರಿ ಅವರಿಗೆ ಇದು 4ನೇ ಒಲಿಂಪಿಕ್ಸ್. ಅರ್ಹತಾ ಸುತ್ತಿನಲ್ಲಿ 53 ದೇಶಗಳ 128 ಆರ್ಚರ್ ಸ್ಪರ್ಧಿಸಲಿದ್ದಾರೆ. ಒಬ್ಬೊಬ್ಬರಿಗೆ ತಲಾ 72 ಬಾಣಗಳ ಗುರಿ ಲಭಿಸಲಿದೆ. ಇಲ್ಲಿ ಟಾಪ್-10 ಸ್ಥಾನ ಸಂಪಾದಿಸಿದರೆ ನಾಕೌಟ್ ಸ್ಪರ್ಧೆ ಸುಲಭವಾಗಲಿದೆ.
ಪುರುಷರ ಮೇಲೆ ಭರವಸೆ: ಈ ಬಾರಿ ಭಾರತದ ಪುರುಷರ ವಿಭಾಗದ ಮೇಲೆ ಭಾರೀ ಭರವಸೆ ಇರಿಸಲಾಗಿದೆ. ಕಳೆದ ಶಾಂಘೈ ವಿಶ್ವಕಪ್ ನಲ್ಲಿ ಫೇವರಿಟ್ ಕೊರಿಯಾವನ್ನು ಬುಡಮೇಲು ಮಾಡಿ ಚಾಂಪಿಯನ್ ಆಗಿತ್ತು. ವನಿತಾ ವಿಭಾಗದಲ್ಲಿ ದೀಪಿಕಾ ಕುಮಾರಿ ಬೆಳ್ಳಿ ಪದಕ ಜಯಿಸಿದ್ದರು.