ಪ್ಯಾರಿಸ್: ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ (Paris Olympics) ನ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಗ್ರೂಪ್ ಎಲ್ ಪಂದ್ಯದಲ್ಲಿ ಗ್ವಾಟೆಮಾಲಾದ ಕೆವಿನ್ ಕಾರ್ಡನ್ ವಿರುದ್ಧ ಭಾರತದ ಷಟ್ಲರ್ ಲಕ್ಷ್ಯ ಸೇನ್ (Lakshya Sen) ಅವರು ಗೆಲುವು ಸಾಧಿಸಿದರೂ, ಆ ಫಲಿತಾಂಶವನ್ನು ಒಲಿಂಪಿಕ್ಸ್ ಸಂಸ್ಥೆ ಅಳಿಸಿ ಹಾಕಿದೆ.
ಎಡ ಮೊಣಕೈ ಗಾಯದ ಕಾರಣ ಗ್ವಾಟೆಮಾಲಾದ ಕೆವಿನ್ ಕಾರ್ಡನ್ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣದಿಂದ ಅವರ ವಿರುದ್ದದ ಲಕ್ಷ್ಯ ಸೇನ್ ಗೆಲುವನ್ನು ಅಳಿಸಲಾಗಿದೆ.
ಒಲಂಪಿಕ್ಸ್ ಡಾಟ್ ಕಾಮ್ ಪ್ರಕಾರ, ಕಾರ್ಡನ್ ತನ್ನ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ನಿಂದ ಹಿಂದೆ ಸರಿದಿದ್ದು, ಇದಕ್ಕಾಗಿ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಮತ್ತು ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ವಿರುದ್ಧ ಮುಂಬರುವ ಎಲ್ ಗುಂಪಿನ ಪಂದ್ಯಗಳನ್ನು ಆಡಲಾಗುವುದಿಲ್ಲ. ಗುಂಪು ಹಂತದ ಆಟಕ್ಕಾಗಿ ಬಿಡಬ್ಲ್ಯೂಎಫ್ ಸಾಮಾನ್ಯ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ, ಲಕ್ಷ್ಯ ಸೇನ್ ಮತ್ತು ಕೆವಿನ್ ಕಾರ್ಡನ್ ನಡುವಿನ ಪಂದ್ಯದ ಫಲಿತಾಂಶವನ್ನು ಅಳಿಸಲಾಗಿದೆ.
ಎಲ್ ಗುಂಪಿನಲ್ಲಿ ಉಳಿದಿರುವ ಎರಡು ಪಂದ್ಯಗಳ ಫಲಿತಾಂಶಗಳ ಆಧಾರದ ಮೇಲೆ ಭಾರತೀಯ ಷಟ್ಲರ್ ಶ್ರೇಯಾಂಕವನ್ನು ಪಡೆಯುತ್ತಾರೆ. ಈತನ್ಮಧ್ಯೆ, ಲಕ್ಷ್ಯ ಸೇನ್ ಈಗ ಸೋಮವಾರ ಸಂಜೆ (ಜುಲೈ 29) ರಂದು ಜೂಲಿಯನ್ ಕರಾಗ್ಗಿ ಅವರನ್ನು ಎದುರಿಸಲಿದ್ದಾರೆ.
ಚಿರಾಗ್- ರಾಂಕಿರೆಡ್ಡಿ ಪಂದ್ಯ ರದ್ದು
ಭಾರತದ ಬ್ಯಾಡ್ಮಿಂಟನ್ ಡಬಲ್ಸ್ ತಾರೆಯರಾದ ಚಿರಾಗ್ ಶೆಟ್ಟಿ – ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರ ಎರಡನೇ ಪಂದ್ಯ ರದ್ದಾಗಿದೆ. ಜರ್ಮನಿಯ ಮಾರ್ವಿನ್ ಸೀಡೆಲ್ ಮತ್ತು ಮಾರ್ಕ್ ಲ್ಯಾಮ್ಸ್‌ಫಸ್ ವಿರುದ್ಧದ ಅವರು ಎರಡನೇ ಗುಂಪಿನ ಸಿ ಪಂದ್ಯವನ್ನು ಆಡಬೇಕಿತ್ತು.
ಆದರೆ ಮಾರ್ಕ್ ಮೊಣಕಾಲಿನ ಗಾಯದ ಕಾರಣದಿಂದ ಈ ಪಂದ್ಯ ರದ್ದುಗೊಳಿಸಲಾಗಿದೆ. ಹೀಗಾಗಿ ಭಾರತೀಯ ಜೋಡಿ ಮೂರನೇ ಪಂದ್ಯವನ್ನು ಗೆಲ್ಲಲೇಬೇಕಿದೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ಹೇಳಿಕೆಯ ಪ್ರಕಾರ, ಮಾರ್ಕ್ ಲ್ಯಾಮ್ಸ್‌ಫಸ್ ಅವರು ಮೊಣಕಾಲಿನ ಗಾಯದಿಂದಾಗಿ ಒಲಿಂಪಿಕ್ ಗೇಮ್ಸ್ ಪ್ಯಾರಿಸ್ 2024 ಬ್ಯಾಡ್ಮಿಂಟನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.