Advertisement

Paris Olympics: ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಅಮನ್‌ ಸೆಹ್ರಾವತ್!‌

01:28 PM Aug 10, 2024 | Team Udayavani |

ಪ್ಯಾರಿಸ್:‌ ಕೆಲವೇ ದಿನಗಳ ಹಿಂದೆ ಮಹಿಳಾ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕೇವಲ 100 ಗ್ರಾಮ್‌ ಹೆಚ್ಚಿದ್ದ ಕಾರಣ ಫೈನಲ್‌ ಪಂದ್ಯದಿಂದ ಭಾರತದ ವಿನೀಶ್‌ ಪೋಗಾಟ್‌ (Vinesh Phogat) ಅವರು ಹೊರಬಿದ್ದಿರುವ ಆಘಾತದಿಂದ ಭಾರತೀಯರು ಇನ್ನೂ ಹೊರಬಂದಿಲ್ಲ. ಇಂತಹುದೇ ಘಟನೆಯೊಂದು ಮರುಕಳಿಸುವುದು ಸ್ವಲ್ಪದರಲ್ಲಿ ತಪ್ಪಿದೆ.

Advertisement

ಹೌದು, ಶುಕ್ರವಾರ (ಆ.09) ರಾತ್ರಿ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಭಾರತದ ಯುವ ಪಟು ಅಮನ್‌ ಸೆಹ್ರಾವತ್‌ (Aman Sehrawat) ಕೂಡಾ ಇಂತಹದ್ದೇ ಕಾರಣದಿಂದ ಅನರ್ಹರಾಗುವ ಸಾಧ್ಯತೆಯಿತ್ತು. ಆದರೆ ಸಕಾಲದ ಕಠಿಣ ಪರಿಶ್ರಮ ಮತ್ತು ಅದೃಷ್ಟದ ಬಲದಿಂದ ಅಮನ್‌ ಪಂದ್ಯವಾಡಿ ಗೆದ್ದರು.

57 ಕೆಜಿ ವಿಭಾಗದಲ್ಲಿ ಆಡಿದ್ದ ಅಮನ್‌ ಸೆಹ್ರಾವತ್‌ ಸೆಮಿ ಫೈನಲ್‌ ಪ್ರವೇಶಿಸಿದ್ದರು. ಆದರೆ ಸೆಮಿ ಪಂದ್ಯದಲ್ಲಿ ಜಪಾನ್‌ ಆಟಗಾರನೆದುರು ಸೋತು ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು. ಆದರೆ ಸೆಮಿ ಫೈನಲ್‌ ಪಂದ್ಯದ ಬಳಿಕ ಅಮನ್‌ ಅವರ ದೇಹತೂಕ 61.5 ಕೆಜಿಗೆ ಏರಿಕೆಯಾಗಿತ್ತು.

ಆದರೆ ಮುಂದಿನ ದೇಹ ತೂಕ ಪರೀಕ್ಷೆಗೆ ಮೊದಲು ಅಂದರೆ 10 ಗಂಟೆಯ ಅವಧಿಯೊಳಗೆ ಕಠಿಣ ಶ್ರಮದಿಂದ ಅಮನ್‌ ದೇಹತೂಕವನ್ನು 61.5 ಕೆಜಿಯಿಂದ 57 ತಂದು  ಅಂದರೆ 4.6 ಕೆಜಿ ಇಳಿಸಿಕೊಂಡು ಪಂದ್ಯಕ್ಕೆ ಅರ್ಹತೆ ಪಡೆದಿರುವ ವಿಚಾರ ಇದೀಗ ಬಯಲಾಗಿದೆ.

Advertisement

ಕೇವಲ 21 ವರ್ಷ ವಯಸ್ಸಿನ ಅಮನ್ ತನ್ನ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ರೀ ಹಿಗುಚಿ ವಿರುದ್ಧ ಸಂಜೆ 6:30 ರ ಸುಮಾರಿಗೆ ಸೋತ ನಂತರ ಅವರ ದೇಹ ತೂಕ ಏರಿಕೆಯಾಗಿರುವುದು ಕಂಡು ಬಂದಿತ್ತು. ಹೆಚ್ಚಿನ ಸಮಯಾವಕಾಶವಿಲ್ಲದೆ, ಅಮನ್ ಮತ್ತು ಅವರ ತರಬೇತುದಾರರು ತೂಕದ ಅಗತ್ಯವನ್ನು ಪೂರೈಸಲು ತೀವ್ರವಾದ ಪ್ರಯತ್ನವನ್ನು ಪ್ರಾರಂಭಿಸಿದರು.

ಅಮನ್‌ ಅವರ ಕೋಚ್‌ ಗಳಾದ ಜಗ್ಮಂದರ್‌ ಸಿಂಗ್‌ ಮತ್ತು ವೀರೆಂದರ್‌ ದಹಿಯಾ ಸೇರಿ ಅಮನ್‌ ಅವರ ತೂಕ ಇಳಿಕೆ ಕಸರತ್ತು ನಡೆಸಿದ್ದಾರೆ. 1.5 ಗಂಟೆಯ ಮ್ಯಾಟ್ ಸೆಶನ್‌ ನಡೆಸಿದ ಬಳಿಕ, ಒಂದು ಗಂಟೆ ಬಿಸಿ ನೀರ ಸ್ನಾನದ ಮೊರೆ ಹೋಗಿದ್ದಾರೆ. ಬೆವರು ಹರಿದ ಕಾರಣ ತೂಕ ಇಳಿಕೆಗೆ ಪ್ರಯೋಜನವಾಗಿದೆ.

ರಾತ್ರಿ 12.30ರ ಸುಮಾರಿಗೆ ಜಿಮ್‌ ಗೆ ತೆರಳಿ ತ್ರೆಡ್‌ ಮಿಲ್‌ ಮೇಲೆ ಒಂದು ಗಂಟೆ ನಿರಂತರವಾಗಿ ಅಮನ್‌ ಓಡಿದ್ದಾರೆ. ಅರ್ಧ ಗಂಟೆಯ ವಿರಾಮ ಪಡೆದು ಬಳಿಕ ಮಸಾಜ್‌ ಮತ್ತು ಜಾಗಿಂಗ್‌ ಮಾಡಿದ್ದಾರೆ. ಇದರ ಬಳಿಕ ತಲಾ 15 ನಿಮಿಷದಂತೆ ಐದು ಸೆಟ್‌ ಗಳ ರನ್ನಿಂಗ್‌ ಸೆಶನ್‌ ಮಾಡಿಸಿದ್ದಾರೆ. ಹೀಗಾಗಿ ಮುಂಜಾನೆ 4.30ರ ಸುಮಾರಿಗೆ ಅಮನ್‌ ದೇಹತೂಕ 56.9 ಕೆಜಿಗೆ ಬಂದಿಳಿದಿತ್ತು.

ಈ ತೀವ್ರವಾದ ಚಟುವಟಿಕೆಗಳ ಉದ್ದಕ್ಕೂ, ಅಮಾನ್‌ಗೆ ಸ್ವಲ್ಪ ಕಾಫಿ ಜೊತೆಗೆ ನಿಂಬೆ ಮತ್ತು ಜೇನುತುಪ್ಪದೊಂದಿಗೆ ಉಗುರು ಬೆಚ್ಚಗಿನ ನೀರನ್ನು ನೀಡಲಾಯಿತು. ತೂಕದ ಕಡಿತವನ್ನು ಪೂರ್ಣಗೊಳಿಸಿದ ನಂತರ, ಅಮನ್ ನಿದ್ರೆ ಮಾಡಲಿಲ್ಲ, ತೂಕ ಪರೀಕ್ಷೆಯ ತನಕ ಎಚ್ಚರದಿಂದಲೇ ಇದ್ದರು.

ಆಗಾಗ ತೂಕ ಪರೀಕ್ಷೆ ಮಾಡಲಾಗುತ್ತಿತ್ತು. ಅಮನ್‌ ಒಂಚೂರು ನಿದ್ರೆ ಮಾಡಲಿಲ್ಲ. ಬೆಳಗಿನ ವೇಳೆ ಅವರು ಕುಸ್ತಿ ವಿಡಿಯೋಗಳನ್ನು ನೋಡುತ್ತಿದ್ದರು ಎಂದು ಕೋಚ್‌ ದಹಿಯಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next