Advertisement

Paris Olympics;17 ದಿನಗಳ ಕ್ರೀಡಾಹಬ್ಬಕ್ಕೆ ತೆರೆ: ಮುಂದಿನ ನಿಲ್ದಾಣ ಲಾಸ್‌ ಏಂಜಲೀಸ್‌

11:21 PM Aug 11, 2024 | Team Udayavani |

ಪ್ಯಾರಿಸ್‌: ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಆಯೋಜನೆಗೊಂಡಿದ್ದ 33ನೇ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ರವಿವಾರ ರಾತ್ರಿ ತೆರೆ ಬಿದ್ದಿದೆ. ಹಲವು ಹೊಸತುಗಳ ಜತೆಗೆ ವಿವಾದಕ್ಕೂ ಕಾರಣವಾದ ಒಲಿಂಪಿಕ್ಸ್‌ ಕ್ರೀಡಾಜಾತ್ರೆ ಮತ್ತೂಮ್ಮೆ ಜಾಗತಿಕ ಕ್ರೀಡಾಪ್ರೇಮಿಗಳನ್ನು ರಂಜಿಸಿದೆ. ಇಷ್ಟು ವರ್ಷಗಳ ಒಲಿಂಪಿಕ್ಸ್‌ಗೆ ಹೋಲಿಸಿದರೆ ಹೆಚ್ಚು ಮಂದಿ ವೀಕ್ಷಕರನ್ನು ಪ್ಯಾರಿಸ್‌ ಒಲಿಂಪಿಕ್ಸ್‌ ಸೆಳೆದಿತ್ತು.

Advertisement

17 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ 10,500 ಮಂದಿ ಆ್ಯತ್ಲೀಟ್‌ಗಳು ಭಾಗಿಯಾಗಿದ್ದರು. ಅಮೆರಿಕ 40 ಚಿನ್ನ ಸೇರಿದಂತೆ 126 ಪದಕಗಳೊಂದಿಗೆ ಚಾಂಪಿಯನ್‌ ಎನಿಸಿಕೊಂಡಿತು. ಚೀನ ಕೂಡ 40 ಚಿನ್ನ ಜಯಿಸಿತು. ಒಟ್ಟು 91 ಪದಕಗಳೊಂದಿಗೆ ದ್ವಿತೀಯ ಸ್ಥಾನಿಯಾಯಿತು. 1 ಬೆಳ್ಳಿ, 5 ಕಂಚು ಸೇರಿದಂತೆ 6 ಪದಕಗಳನ್ನು ಗೆದ್ದ ಭಾರತ 71ನೇ ಸ್ಥಾನದಲ್ಲಿ ಅಭಿಯಾನವನ್ನು ಅಂತ್ಯಗೊಳಿಸಿತು.

ಬ್ರೇಕಿಂಗ್‌, ಕಯಾಕ್‌ ಕ್ರಾಸ್‌ಗೆ ಅವಕಾಶ
ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬ್ರೇಕಿಂಗ್‌ ಅಥವಾ ಬ್ರೇಕ್‌ ಡ್ಯಾನ್ಸ್‌ ಅನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿತ್ತು. ಪುರುಷರ ವಿಭಾಗದಲ್ಲಿ ಕೆನಡಾ ಚಾಂಪಿಯನ್‌ ಆಯಿತು. ಫ್ರಾನ್ಸ್‌ ಬೆಳ್ಳಿ, ಅಮೆರಿಕ ಕಂಚು ಜಯಿಸಿತು. ಮಹಿಳಾ ವಿಭಾಗದಲ್ಲಿ ಜಪಾನ್‌, ಲಿಥುವೇನಿಯಾ ಮೊದಲೆರಡು ಸ್ಥಾನ ಪಡೆದುಕೊಂಡರೆ, ಚೀನ 3ನೇ ಸ್ಥಾನ ಪಡೆದುಕೊಂಡಿತು. ಉಳಿದಂತೆ ಕಳೆದ ಒಲಿಂಪಿಕ್ಸ್‌ ನಲ್ಲಿ ಸೇರ್ಪಡೆ ಮಾಡಲಾಗಿದ್ದ ಸರ್ಫಿಂಗ್‌, ಸ್ಕೇಟ್‌ ಬೋರ್ಡಿಂಗ್‌ ಮತ್ತು ಕ್ಲೈಂಬಿಂಗ್‌ಗಳನ್ನು ಮುಂದುವರಿಸಲಾಯಿತು.

ಘನತೆಗೆ ಕುಂದು ತಂದ ವಿವಾದಗಳು
ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ ಪ್ಯಾರಿಸ್‌ ಒಲಿಂಪಿಕ್ಸ್‌ ಹಲವು ವಿವಾದಗಳಿಗೂ ಕಾರಣವಾಯಿತು. ವಿನೇಶ್‌ ಫೋಗಾಟ್‌ ಅನರ್ಹತೆಯಿಂದ ಹಿಡಿದು ಪುರುಷ ಬಾಕ್ಸರನ್ನು ಮಹಿಳಾ ವಿಭಾಗದಲ್ಲಿ ಆಡಿಸಲಾಗಿದೆ ಎಂಬಲ್ಲಿಗೆ ಈ ವಿವಾದ ಹಬ್ಬಿತ್ತು. 100 ಗ್ರಾಂ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ವಿನೇಶ್‌ ಫೋಗಾಟ್‌ ಅವರನ್ನು ಅನರ್ಹಗೊಳಿಸಲಾಯಿತು. ಅಲ್ಜೀರಿಯಾದ ಬಾಕ್ಸರ್‌ ಇಮೇನ್‌ ಖಲೀಫ್ ಪುರುಷ ಎಂದು ವಿವಾದ ಸೃಷ್ಟಿಯಾಗಿತ್ತು. ಕೊಕೇನ್‌ ಖರೀದಿಸಿದ ಕಾರಣಕ್ಕೆ ಆಸ್ಟ್ರೇಲಿಯದ ಹಾಕಿ ಆಟಗಾರರನ್ನು ಬಂಧಿಸಲಾಗಿತ್ತು. ಹೀಗೆ ಹಲವು ವಿವಾದಗಳು ಒಲಿಂಪಿಕ್ಸ್‌ ವೇಳೆ ಕಾಣಿಸಿಕೊಂಡವು.

2028: ಲಾಸ್‌ ಏಂಜಲೀಸ್‌
34ನೇ ಒಲಿಂಪಿಕ್ಸ್‌ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿದೆ. 2024 ಮತ್ತು 2028ರ ಒಲಿಂಪಿಕ್ಸ್‌ಗಳಿಗೆ ಲಾಸ್‌ ಏಂಜಲೀಸ್‌ ಬಿಡ್‌ ಸಲ್ಲಿಸಿತ್ತು. ಆದರೆ 2024ರ ಒಲಿಂಪಿಕ್ಸ್‌ ಆತಿಥ್ಯ ಪ್ಯಾರಿಸ್‌ಗೆ ಲಭಿಸಿತು. 2028ರ ಒಲಿಂಪಿಕ್ಸ್‌ನಲ್ಲಿ 35 ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ ಎನ್ನಲಾಗಿದೆ. ಪ್ರಸ್ತುತ ಒಲಿಂಪಿಕ್ಸ್‌ನಲ್ಲಿ 32 ಕ್ರೀಡೆಗಳಿವೆ.

Advertisement

ಕೊನೆಯದಾಗಿ ಸ್ಪರ್ಧೆ ಮುಗಿಸಿ ಹೃದಯ ಗೆದ್ದ ಭೂತಾನ್‌ ಆ್ಯತ್ಲೀಟ್‌

ಪದಕ ಗೆಲ್ಲದೇ ಹೋದರೂ ಕೆಲವು ಕ್ರೀಡಾಪಟುಗಳು ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಇಂಥವರಲ್ಲೊಬ್ಬರು ಭೂತಾನ್‌ನ ಮ್ಯಾರಥಾನ್‌ ಓಟಗಾರ್ತಿ ಕಿಂಝಾಂಗ್‌ ಲ್ಹಾಮೊ. ಇವರು ರವಿವಾರದ ವನಿತಾ ಮ್ಯಾರಥಾನ್‌ ಸ್ಪರ್ಧೆಯನ್ನು ಕಟ್ಟಕಡೆಯ ಹಾಗೂ 80ನೇ ಸ್ಥಾನದೊಂದಿಗೆ ಮುಗಿಸಿದರು. ಇದಕ್ಕೆ ತಗುಲಿದ ಅವಧಿ 3 ಗಂಟೆ, 52 ನಿಮಿಷ, 59 ಸೆಕೆಂಡ್ಸ್‌.

ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಮ್ಯಾರಥಾನ್‌ ಓಟಗಾರರು ಸ್ಪರ್ಧೆಯನ್ನು ಅರ್ಧದಲ್ಲೇ ಮುಗಿಸುತ್ತಾರೆ. ಇನ್ನು ಓಡುವುದು ವ್ಯರ್ಥ ಎಂಬ ತೀರ್ಮಾನಿಸುವ ಜತೆಗೆ ಸುಸ್ತು ಹಾಗೂ ಕಾಲಿನ ಸೆಳೆತವೂ ಓಟಕ್ಕೆ ಅಡ್ಡಿಯಾಗುತ್ತದೆ. ಆದರೆ 26 ವರ್ಷದ ಕಿಂಝಾಂಗ್‌ ಲ್ಹಾಮೊ ಮಾತ್ರ ಇದ್ಯಾವುದನ್ನೂ ಲೆಕ್ಕಿಸದೆ ಓಡುತ್ತ ಹೋದರು. ಅಂದಹಾಗೆ ಇದು ಅವರ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆ ಆಗಿತ್ತು.

ಕೊನೆಯ ಕೆಲವು ಕಿ.ಮೀ. ಓಟ ಬಾಕಿ ಇರುವಾಗ ಸಾರ್ವಜನಿಕರು ಇವರೊಂದಿಗೆ ಹೆಜ್ಜೆ ಹಾಕಿ ಹುರಿದುಂಬಿಸಿದರು. ಇನ್ನು ಕೆಲವರು ಸೈಕಲ್‌ಗ‌ಳಲ್ಲಿ ಜತೆಯಾಗಿ ಸಾಗಿದರು.

26 ವರ್ಷದ ಲ್ಹಾಮೊ ಉದ್ಘಾಟನ ಸಮಾರಂಭದಲ್ಲಿ ಭೂತಾನ್‌ ಧ್ವಜಧಾರಿಯಾಗಿದ್ದರು. ಅಲ್ಟ್ರಾ ಮ್ಯಾರಥಾನ್‌ ಸ್ಪೆಷಲಿಸ್ಟ್‌ ಆಗಿರುವ ಇವರು, 2022ರ ಸ್ನೋಮ್ಯಾನ್‌ ರೇಸ್‌ನಲ್ಲಿ ದ್ವಿತೀಯ ಸ್ಥಾನಿಯಾಗಿದ್ದರು. ಹಿಮಾಲಯ ಪರ್ವತ ಶ್ರೇಣಿಯ ಅತ್ಯಂತ ಕಡಿದಾದ, 203 ಕಿ.ಮೀ. ಮಾರ್ಗದಲ್ಲಿ ಸಾಗಿದ ರೇಸ್‌ ಇದಾಗಿತ್ತು. ಪ್ರಸ್ತುತ ಲ್ಹಾಮೊ ಭೂತಾನ್‌ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇನೆ ಸೇರಿದ ಬಳಿಕವೇ ಇವರು ಓಡಲಾರಂಭಿಸಿದ್ದು!

Advertisement

Udayavani is now on Telegram. Click here to join our channel and stay updated with the latest news.

Next