ಪ್ಯಾರಿಸ್: ಕೊನೆಗೂ ರೊಮೇನಿಯಾದ ಸಿಮೋನಾ ಹಾಲೆಪ್ ಅವರ ಗ್ರ್ಯಾನ್‌ಸ್ಲಾಮ್ ಕನಸು ನನಸಾಗಿದೆ. ಅವರೀಗ ಫ್ರೆಂಚ್ ಓಪನ್ ಚಾಂಪಿಯನ್!
ಶನಿವಾರ ನಡೆದ ವನಿತಾ ಸಿಂಗಲ್ಸ್ ಜಿದ್ದಾಜಿದ್ದಿ ಸೆಣಸಾಟದಲ್ಲಿ ಅಮೆರಿಕದ ಸ್ಲೋನ್ ಸ್ಟೀಫನ್ಸ್ ವಿರುದ್ಧ ಮೊದಲ ಸೆಟ್ ಕಳೆದುಕೊಂಡೂ ತಿರುಗೇಟು ನೀಡುವಲ್ಲಿ ಯಶಸ್ವಿಯಾದ ವಿಶ್ವದ ನಂಬರ್ ವನ್ ಆಟಗಾರ್ತಿ ಸಿಮೋನಾ ಹಾಲೆಪ್ 3-6, 6-4, 6-1ರಿಂದ ಗೆದ್ದು ತಮ್ಮ ಟೆನಿಸ್ ಬಾಳ್ವೆಯ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟರು.
ಇಲ್ಲಿ ಯಾರೇ ಗೆದ್ದರೂ ಪ್ಯಾರಿಸ್ ಟೆನಿಸ್ ನೂತನ ರಾಣಿಯೊಬ್ಬಳನ್ನು ಕಾಣಲಿತ್ತು. ಕಳೆದ ವರ್ಷವಷ್ಟೇ ಯುಎಸ್ ಓಪನ್ ಪ್ರಶಸ್ತಿ ಗೆದ್ದು ಮೆರೆದಿದ್ದ ಸ್ಲೋನ್ ಸ್ಟಿಫàನ್ಸ್ ಮೊದಲ ಸೆಟ್ ವಶಪಡಿಸಿಕೊಂಡಾಗ ಈ ಸಲವೂ ಹಾಲೆಪ್ ಅದೃಷ್ಟ ನೆಟ್ಟಗಿಲ್ಲ ಎಂದೇ ಭಾವಿಸಲಾಗಿತ್ತು. ಕಾರಣ, ಈವರೆಗಿನ ಎರಡೂ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಹಾಲೆಪ್ ಎಡವಿದ್ದರು. ಕೊನೆಗೂ ಮೂರನೇ ಪ್ರಯತ್ನದಲ್ಲಿ ತಮ್ಮ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಬರವನ್ನು ನೀಗಿಸಿಕೊಂಡೇ ಬಿಟ್ಟರು.
ಮೊದಲ ಸೆಟ್ ಕಳೆದುಕೊಂಡ ಬಳಿಕ ಹಾಲೆಪ್ ತಿರುಗಿ ಬಿದ್ದ ರೀತಿ ನಿಜಕ್ಕೂ ಅಮೋಘ. ಹಾಲೆಪ್ ಹಂತ ಹಂತವಾಗಿ ಪ್ರಬಲರಾಗುತ್ತ ಹೋದರೆ, ಸ್ಟೀಫನ್ಸ್ ಕುಸಿಯುತ್ತಲೇ ಬಂದರು. ನಿರ್ಣಾಯಕ ಸೆಟ್‌ನಲ್ಲಂತೂ ಸ್ಟೀಫನ್ಸ್ ಸಂಪೂರ್ಣ ಶರಣಾದಂತೆ ಕಂಡುಬಂದರು.
“ಯಾವ ಕಾರಣಕ್ಕೂ ಕಳೆದ ವರ್ಷದ ತಪ್ಪುಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕೆಂದು ನಾನು ನಿರ್ಧರಿಸಿದ್ದೆ. ಅದೃಷ್ಟವಶಾತ್ ಇದರಲ್ಲಿ ಯಶಸ್ವಿಯಾದೆ’ ಎಂದು ಸಿಮೋನಾ ಹಾಲೆಪ್ ಪ್ರತಿಕ್ರಿಯಿಸಿದರು. ಕಳೆದ ವರ್ಷದ ಪ್ಯಾರಿಸ್ ಕದನದಲ್ಲಿ ಅವರು ಜೆಲೆನಾ ಒಸ್ಟಾಪೆಂಕೊ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದರು.