Advertisement

ಪರೇಶ್‌ ಸಾವಿನ ಶೀಘ್ರ ತನಿಖೆಗೆ ಆಗ್ರಹ

05:36 PM Jul 06, 2018 | Team Udayavani |

ಹೊನ್ನಾವರ: ಕೇಂದ್ರದ ಮೋದಿ ಸರಕಾರದ ಅಧೀನದಲ್ಲಿರುವ ಸಿಬಿಐಗೆ ಪರೇಶ್‌ ಮೇಸ್ತನ ಸಾವಿನ ತನಿಖೆಯ ಜವಾಬ್ದಾರಿ ನೀಡಿದಲ್ಲಿ ಕೇವಲ 7 ದಿನಗಳಲ್ಲಿ ನ್ಯಾಯ ಕೊಡಿಸುವುದಾಗಿ ಮುಗ್ಧ ಜನರಿಗೆ ಪ್ರಚೋದನೆ ನೀಡಿದ್ದ ಬಿಜೆಪಿ ಮುಖಂಡರು 7ತಿಂಗಳಾದರೂ ತನಿಖೆಯ ಬಗ್ಗೆ ಸೊಲ್ಲೇತ್ತದಿರುವುದನ್ನು ಖಂಡಿಸಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಮೂರು ಹಂತದಲ್ಲಿ ಹೋರಾಟ ನಡೆಸಲಿದೆ ಎಂದು ಅಧ್ಯಕ್ಷ ಜಗದೀಪ ತೆಂಗೇರಿ ತಿಳಿಸಿದ್ದಾರೆ.

Advertisement

ಅವರು ನಗರದ ಸೊಶಿಯಲ್‌ ಕ್ಲಬ್‌ ಸಭಾಭವನದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಮಾತನಾಡಿದರು. ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರು ಜು.10 ರಂದು ಮುಂಜಾನೆ 10ಕ್ಕೆ ಪಪಂ ಆವರಣದಲ್ಲಿರುವ ಮಹಾತ್ಮಾಗಾಂಧಿ ಪುತ್ಥಳಿಕೆಗೆ ಮಾಲಾರ್ಪಣೆ ಮಾಡಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡು ಶೀಘ್ರ ತನಿಖೆಗೆ ಒತ್ತಾಯಿಸಲಾಗುವುದು. 15 ದಿನಗಳೊಳಗೆ ತನಿಖೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳು ನೀಡದಿದ್ದಲ್ಲಿ ಎರಡನೇ ಹಂತವಾಗಿ ಹೊನ್ನಾವರ ಬಂದ್‌ ಆಚರಿಸಿ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು. ಅದಕ್ಕೂ ಮಣಿಯದಿದ್ದಲ್ಲಿ ಕಾರವಾರ ಚಲೋ ಹಮ್ಮಿಕೊಂಡು ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ತೆಂಗೇರಿ ತಿಳಿಸಿದ್ದಾರೆ.

ಮಾಜಿ ಶಾಸಕಿ ಶಾರದಾ ಶೆಟ್ಟಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿನಾಕಾರಣ, ಅನಗತ್ಯವಾಗಿ ಕೋಮುವಾದಿಗಳು ನನ್ನ ವಿರುದ್ಧ ಅಪಪ್ರಚಾರ ನಡೆಸಿ ನನ್ನ ಸೋಲಿಗೆ ಕಾರಣರಾದರು ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಬಗ್ಗೆ ಹಗಲು-ರಾತ್ರಿ ಪರಿಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಮಾಜಿ ಸಚಿವ ಆರ್‌.ಎನ್‌. ನಾಯ್ಕ, ಅಲ್ಪಸಂಖ್ಯಾತ ಕಾಂಗ್ರೆಸ್‌ ಘಟಕದ ಹುಸೇನ ಖಾದ್ರಿ ಮಾತನಾಡಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ತಾರಾ ಗೌಡ, ಹೊನ್ನಾವರ ಪಪಂ ಅಧ್ಯಕ್ಷೆ ರಾಜಶ್ರೀ ನಾಯ್ಕ, ಕಾಂಗ್ರೆಸ್‌ ಕಾರ್ಮಿಕ ಸಂಘಟನೆಯ ಆಗ್ನೇಲ್‌ ಡಯಾಸ್‌, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಮಾಜಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮನಾಥ ನಾಯ್ಕ, ಕರ್ಕಿ ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಾಮೋದರ್‌ ನಾಯ್ಕ ಸ್ವಾಗತಿಸಿದರು. ಲಂಬೋದರ ನಾಯ್ಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next