Advertisement

ಆನ್‌ಲೈನ್‌ ಶಿಕ್ಷಣದಿಂದ ಹೆತ್ತವರು ಹೈರಾಣ

11:15 PM Jul 09, 2020 | Sriram |

ಮಹಾನಗರ: ಎಲ್‌ಕೆಜಿಯಿಂದ 10ನೇ ತರಗತಿವರೆಗಿನ ಆನ್‌ಲೈನ್‌ ತರಗತಿಗೆ ಸರಕಾರ ಅಸ್ತು ಎಂದ ಬೆನ್ನಲ್ಲೇ ಹೆತ್ತವರಿಗೆ ಹೊಸ ತಲೆನೋವು ಶುರುವಾಗಿದೆ. ಏಕೆಂದರೆ ಕೋವಿಡ್‌ ತಂದಿಟ್ಟ ಆರ್ಥಿಕ ಸಮಸ್ಯೆಯಿಂದ ಹೈರಾಣಾಗಿದ್ದವರು ಇದೀಗ ಇಲ್ಲದ ಹಣವನ್ನು ಹೊಂದಿಸಿಕೊಂಡು ಆನ್‌ಲೈನ್‌ ತರಗತಿಗೆಂದೇ ಪ್ರತ್ಯೇಕ ಮೊಬೈಲ್‌, ಲ್ಯಾಪ್‌ಟಾಪ್‌ ಖರೀದಿಸ ಬೇಕಾಗಿ ಬಂದಿದೆ.

Advertisement

ಕೋವಿಡ್‌ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್‌ ಆದ ಪರಿಣಾಮ ಹಲವರು ಕೆಲಸ ಕಳೆದುಕೊಂಡಿದ್ದಾರೆ. ಹಲವು ಕಂಪೆನಿಗಳು ಉದ್ಯೋಗಿಗಳ ಸಂಬಳದಲ್ಲಿ ಕಡಿತ ಮಾಡಿದ್ದರೆ, ಇನ್ನು ಕೆಲವರಿಗೆ ರಜೆ ನೀಡಿ ಸಂಬಳವನ್ನೇ ಕೊಟ್ಟಿಲ್ಲ. ವರ್ಕ್‌ ಫ್ರಂ ಹೋಂ ಇರುವ ಉದ್ಯೋಗಿಗಳಿಗೆ ಅರ್ಧ ಸಂಬಳವನ್ನು ಮಾತ್ರ ನೀಡಲಾಗುತ್ತಿದೆ. ಹೀಗಿರುವಾಗ, ತಿಂಗಳ ಖರ್ಚು ಸಮತೂಗಿಸಲು ಸಂಬಳವನ್ನೇ ಆಶ್ರಯಿಸಿರುವ ಬಹುತೇಕ ಹೆತ್ತವರು ಇದೀಗ ಆನ್‌ಲೈನ್‌ ತರಗತಿಯಿಂದಾಗಿ ಹೈರಾಣಾಗಿದ್ದಾರೆ.

ಎಲ್‌ಕೆಜಿಯಿಂದಲೇ ಆನ್‌ಲೈನ್‌ ತರಗತಿಗಳು ಮಂಗಳೂರು ಸಹಿತ ಹಲವು ಕಡೆಗಳಲ್ಲಿ ಈಗಾಗಲೇ ಆರಂಭವಾಗಿವೆ. ಮನೆಯಲ್ಲೇ ಇರುವ ಹೆತ್ತವರು ತಮ್ಮ ಮೊಬೈಲ್‌, ಲ್ಯಾಪ್‌ಟಾಪ್‌ ಅನ್ನೇ ಮಕ್ಕಳಿಗೆ ನೀಡಿದರೆ, ಹೆತ್ತವರಿಬ್ಬರೂ ಉದ್ಯೋಗದಲ್ಲಿರುವ ಮನೆಗಳಲ್ಲಿ ಮಕ್ಕಳ ಆನ್‌ಲೈನ್‌ ತರಗತಿಗೆಂದೇ ಹೊಸ ಮೊಬೈಲ್‌, ಲ್ಯಾಪ್‌ಟಾಪ್‌ ಖರೀದಿಸಬೇಕಾಗಿ ಬಂದಿದೆ. ಲಾಕ್‌ಡೌನ್‌ನಿಂದ ಅರ್ಧ ಸಂಬಳಕ್ಕೆ ದುಡಿಯುತ್ತಿರುವ ಬಹುತೇಕ ಹೆತ್ತವರಿಗೆ ಇದು ಇನ್ನಷ್ಟು ಸಮಸ್ಯೆ ತಂದೊಡ್ಡಿದೆ.

ಕರೆ ಸ್ವೀಕರಿಸಲೂ ಸಮಸ್ಯೆ
ಇರುವ ಮೊಬೈಲ್‌ ಅನ್ನು ಮಕ್ಕಳ ಆನ್‌ಲೈನ್‌ ತರಗತಿಗೆ ನೀಡಿದರೆ, ತರಗತಿ ಮುಗಿಯುವವರೆಗೂ ಮೊಬೈಲ್‌ ಮಕ್ಕಳ ಕೈಯಲ್ಲಿರಬೇಕು. ವರ್ಕ್‌ ಫ್ರಂ ಹೋಂ ಮಾಡುವ ಹೆತ್ತವರಿಗೆ ಕಚೇರಿ ಕರೆ ಸ್ವೀಕರಿಸುವುದು, ಕಚೇರಿಯ ಆನ್‌ಲೈನ್‌ ಮೀಟಿಂಗ್‌ಗಳಿಗೆ ಹಾಜರಾಗುವುದು, ಇತರ ಪ್ರಮುಖ ಕರೆಗಳನ್ನು ಸ್ವೀಕರಿಸಲು ಅಗತ್ಯವಾಗಿ ಮೊಬೈಲ್‌ ಬೇಕಾಗುತ್ತದೆ. ಹೀಗಿರುವಾಗ ಮನೆಯಲ್ಲೇ ಇದ್ದರೂ ಮಕ್ಕಳಿಗೆ ತಮ್ಮ ಮೊಬೈಲ್‌ ನೀಡಲು ಸಮಸ್ಯೆಯಾಗುತ್ತದೆ. ಇಂತಹ ಹೆತ್ತವರೂ ಮಕ್ಕಳ ಭವಿಷ್ಯದ ಚಿಂತೆಯಿಂದ ಅನಿವಾರ್ಯವಾಗಿ ಹೊಸ ಮೊಬೈಲ್‌ ಖರೀದಿಸಬೇಕಾಗಿ ಬಂದಿದೆ. ನನಗೂ ಇದೇ ಅನುಭವವಾಗಿದೆ ಎನ್ನುತ್ತಾರೆ ಕೆಪಿಟಿಯ ಸಂದೀಪ್‌.

ತಡರಾತ್ರಿವರೆಗೂ ಅಧ್ಯಯನ ಗೋಳು
ಆನ್‌ಲೈನ್‌ ತರಗತಿ ಶುರುವಾದಂದಿನಿಂದ ಶಿಕ್ಷಕರಿಗೆ ತಡರಾತ್ರಿವರೆಗೂ ಅಧ್ಯಯನ ನಡೆಸಬೇಕಾದ ಹೊಸ ತಲೆನೋವು ಶುರುವಾಗಿದೆ. ಆನ್‌ಲೈನ್‌ ಶಿಕ್ಷಣವೆಂಬುದು ಶಿಕ್ಷಕರಿಗೂ ಹೊಸತು. ಮಕ್ಕಳ ಮನಸ್ಸಿಗೆ ತಲುಪುವಂತೆ ಬೋಧನ ಕ್ರಮವನ್ನು ಬದಲಿಸಿಕೊಳ್ಳಬೇಕು. ಇದಕ್ಕೆಲ್ಲ ಅಧ್ಯಯನ ಅಗತ್ಯ. ಈ ನಡುವೆ ಖಾಸಗಿ ಶಾಲೆಗಳ ಶಿಕ್ಷಕರಿಗೆ ಅರ್ಧ ಸಂಬಳ ನೀಡಲಾಗುತ್ತಿದ್ದರೂ ಆನ್‌ಲೈನ್‌ ತರಗತಿ ಹೆಸರಿನಲ್ಲಿ ಕೆಲಸದ ಅವಧಿ ಹೆಚ್ಚಳವಾಗಿದೆ.

Advertisement

ಸಾಲಕ್ಕೆ ಹೆತ್ತವರ ಮೊರೆ
ಪ್ರತಿ ತಿಂಗಳು ದುಡಿದ ಹಣ ಮನೆ ಬಾಡಿಗೆ, ವಿವಿಧ ಬಿಲ್‌ಗ‌ಳು, ಸಾಲಗಳ ಕಂತು ಕಟ್ಟಲು ಸಾಕಾಗುವುದಿಲ್ಲ. ಇದೀಗ ಅರ್ಧ ಸಂಬಳಕ್ಕೆ ದುಡಿಯುತ್ತಿರುವ ಹಲವುಹೆತ್ತವರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಅಂತಹದ್ದರಲ್ಲಿ ಇಬ್ಬರು ಮಕ್ಕಳ ಆನ್‌ಲೈನ್‌ ತರಗತಿಗಾಗಿ ಎರಡು ಮೊಬೈಲ್‌ಗ‌ಳನ್ನು ಹೊಸದಾಗಿ ಖರೀದಿಸಬೇಕಾಗಿದೆ. ಮೊಬೈಲ್‌ ಖರೀದಿಸಲು ಬೇರೆ ದಾರಿ ಕಾಣದೆ ಸಾಲ ಮಾಡಬೇಕಾದ ಪರಿಸ್ಥಿತಿ ಕೆಲವು ಹೆತ್ತವರಿಗೆ ಬಂದೊದಗಿದೆ. ನಗರದ ಕೆಲವು ಬ್ಯಾಂಕ್‌, ಸೊಸೈಟಿಗಳಲ್ಲಿ ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕೆ ಮೊಬೈಲ್‌ ಕೊಡಿಸಲು ಮತ್ತು ಹಣಕಾಸಿನ ಸಮಸ್ಯೆ ನಿವಾರಿಸಲೆಂದೇ ಹೆತ್ತವರು ತಮ್ಮ ಚಿನ್ನಾಭರಣವನ್ನು ಅಡವಿಡುತ್ತಿದ್ದಾರೆ. ಹೆತ್ತವರು ಸೊಸೈಟಿಗೆ ಬಂದಾಗ ಈ ಕಷ್ಟವನ್ನು ಹೇಳಿಕೊಳ್ಳುತ್ತಾರೆ ಎಂದು ಸೊಸೈಟಿಯೊಂದರ ಸಿಬಂದಿ ಹೇಳುತ್ತಾರೆ.

 ಹೆತ್ತವರಿಗೆ ಅನಗತ್ಯ ಒತ್ತಡ
ಆನ್‌ಲೈನ್‌ ಶಿಕ್ಷಣದಿಂದ ಮಕ್ಕಳು ಕಲಿಯುವಂತದ್ದೇನಿಲ್ಲ. ತರಗತಿ ಶಿಕ್ಷಣದಿಂದಲೇ ಚಿಕ್ಕ ಮಕ್ಕಳಿಗೆ ಹೆಚ್ಚು ಅರ್ಥವಾಗುವುದು. ಆದರೂ ಆನ್‌ಲೈನ್‌ ಶಿಕ್ಷಣ ಎಂಬುದಾಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಜತೆಗೆ ಹೆತ್ತವರಿಗೂ ಹೆಚ್ಚು ಒತ್ತಡ ನೀಡುತ್ತಿವೆ. ಮಕ್ಕಳ ಶಿಕ್ಷಣಕ್ಕೋಸ್ಕರ ಪ್ರತ್ಯೇಕವಾಗಿ ಮೊಬೈಲ್‌ ಖರೀದಿಸಬೇಕಾಗಿ ಬಂದಿದೆ.
-ಬಿಂದು ಕೊಂಚಾಡಿ, ಹೆತ್ತವರು

 ಋಣಾತ್ಮಕ ಪರಿಣಾಮ
ಆನ್‌ಲೈನ್‌ ಶಿಕ್ಷಣ ಕೇವಲ ಮಾಹಿತಿಯ ವರ್ಗಾವಣೆ ಮತ್ತು ಪಠ್ಯವನ್ನು ಹಾಗೆಯೇ ಮಕ್ಕಳಿಗೆ ತಲುಪಿಸುವಷ್ಟು ಮಾತ್ರ ಕೆಲಸ ನಿರ್ವಹಿಸಬಹುದೇ ವಿನಾ ಕ್ರಿಯಾತ್ಮಕ, ಸೃಜನಶೀಲ ಕಲಿಕೆಗೆ, ಕಲಿಸುವಿಕೆಗೆ ಅನುವು ಮಾಡಿಕೊಡುವುದಿಲ್ಲ. ಮಕ್ಕಳನ್ನು ಸಾಮಾಜಿಕ ಮಾಧ್ಯಮ ವ್ಯಸನಿಗಳನ್ನಾಗಿ ಮಾಡಲು ಹೆಬ್ಟಾಗಿಲನ್ನೇ ತೆರೆದು ಇಟ್ಟಿದೆ. ವಯಸ್ಸು, ಸಾಮರ್ಥ್ಯಕ್ಕನುಗುಣವಾದ ಕಲಿಕೆಗಿಂತ ಹೊರತಾದ ಕಲಿಕಾ ಪ್ರಕ್ರಿಯೆ ಇದಾಗಿರುವ ಕಾರಣ ಋಣಾತ್ಮಕ ಪರಿಣಾಮಗಳೇ ಹೆಚ್ಚಿವೆ. ಮನೆಯಿಂದ ಹೊರಹೋಗಲಾಗದ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಅವಲಂಬಿತವಾಗದೆ ಇತರ ವಿಚಾರಗಳನ್ನು ಕಲಿಸುವುದೇ (ತಂದೆ, ತಾಯಿ) ಉತ್ತಮ.
 -ವಾರಿಜಾಕ್ಷಿ, ಶಿಕ್ಷಕಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next