ಮೂಡುಬಿದಿರೆ: ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕೊರಗಿನಿಂದ ಹೆತ್ತವರನ್ನು ಕಾಡಿ ಬೇಡಿ ಅವರ ಮನವೊಲಿಸಿ ಕೊನೆಗೂ ಶೌಚಾಲಯ ಕಟ್ಟಿಸಿಕೊಳ್ಳುವಲ್ಲಿ ಶಿರ್ತಾಡಿ ಗ್ರಾ.ಪಂ.ನ ಮೂಡುಕೊಣಾಜೆಯ 8ರ
ಹರೆಯದ ಕಾವ್ಯಾ ಯಶಸ್ವಿಯಾಗಿದ್ದಾಳೆ.
ಕುದ್ರೆಲ್ ನಿವಾಸಿ ಶೀನ-ಲೀಲಾ ದಂಪತಿಯ ಇಬ್ಬರು ಮಕ್ಕಳಲ್ಲಿ ಕಾವ್ಯಾ ಕಿರಿಯವಳು. ಸರಕಾರಿ ಕಿ.ಪ್ರಾ. ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ. ಆರೋಗ್ಯ ಕಾರ್ಯಕರ್ತೆಯ ಸ್ವತ್ಛತೆಯ ಪಾಠದಿಂದ ಪ್ರೇರಿತಳಾದ ಕಾವ್ಯಾ ಶೌಚಾಲಯ ನಿರ್ಮಿಸಲು ಹೆತ್ತವರನ್ನು ಆಗ್ರಹಿಸಿದ್ದಳು. ಸೋಗೆ ಮಾಡಿನ ಸೂರಿನ ಮನೆಯನ್ನು ದುರಸ್ತಿ ಮಾಡಿದಾಗಲೇ 1.5 ಲಕ್ಷ ರೂ. ಸಾಲವಾಗಿತ್ತು. ಮತ್ತೆ ಶೌಚಾಲಯ ನಿರ್ಮಿಸಲು ಹೆತ್ತವರಲ್ಲಿ ಚಿಕ್ಕಾಸು ಇರಲಿಲ್ಲ. ಜತೆಗೆ ಹಕ್ಕುಪತ್ರ ಸಮಸ್ಯೆ ಹಾಗೇ ಇದೆ.
ಪಂಚಾಯತ್‌ನಲ್ಲಿ ಶೌಚಾಲಯ ನಿರ್ಮಿಸಲು ವಿನಂತಿ ಸಲ್ಲಿಸಿದಾಗ, ಮನೆ ಕಟ್ಟಿಸಿಕೊಂಡವರಿಗೆ ಶೌಚಾಲಯ ಕಟ್ಟಿಸಿಕೊಳ್ಳಲು ಆಗುವುದಿಲ್ಲವೇ? ಎಂಬ ಉತ್ತರ ಬಂದಿತ್ತು. ಕೊನೆಗೆ ಕಾವ್ಯಾಳ ಒತ್ತಾಯಕ್ಕೆ ಮಣಿದ ತಂದೆ-ತಾಯಿ ಚಿನ್ನ ಅಡವಿಟ್ಟು ಮೂವತ್ತು ಸಾವಿರ ರೂ. ವೆಚ್ಚದಲ್ಲಿ ಶೌಚಾಲಯ, ಸ್ನಾನದ ಕೊಠಡಿ ಕಟ್ಟಿಸಿದ್ದಾರೆ.
ಉದ್ಯೋಗ ಖಾತರಿ ಯೋಜನೆ ಮೂಲಕ ಅರ್ಹರು ಶೌಚಾಲಯ ಕಟ್ಟಿಸಿಕೊಳ್ಳುವ ಅವಕಾಶಕ್ಕಾಗಿ ಜಿ.ಪಂ.ಗೆ ಬರೆದಿದ್ದೇವೆ. ನಾನೇ ಖುದ್ದಾಗಿ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗಳಿಗೆ ಭೇಟಿ ನೀಡಿ ಶೌಚಾಲಯ ರಹಿತ 117 ಮನೆಗಳನ್ನು ಗುರುತಿಸಿ ವರದಿ ಸಲ್ಲಿಸಿರುವೆ. ಶೀನ-ಲೀಲಾ ಕುಟುಂಬಕ್ಕೆ ಶೌಚಾಲಯ ನಿರ್ಮಾಣಕ್ಕೆ ಪಂಚಾಯತ್ ಮೂಲಕ ಸೂಕ್ತ ಯೋಜನೆಯಿಲ್ಲ. ಬಯಲು ಶೌಚ ಮುಕ್ತ ಗ್ರಾಮ ನಮ್ಮದಾಗಬೇಕೆಂಬ ಆಸೆಯಿದೆ. ಹಾಗೆಂದು ಸುಳ್ಳು ಮಾಹಿತಿ ನೀಡಿ ಪ್ರಶಸ್ತಿ ಪ್ರಶಂಸೆ ಪಡೆಯುವ ಇರಾದೆ ಇಲ್ಲ.
ಲತಾ ಹೆಗ್ಡೆ, ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ