ನವದೆಹಲಿ:ಕಳೆದ ಎರಡೂವರೆ ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 13 ವರ್ಷದ (ವಿಶೇಷ ಚೇತನ) ಮಗ ಕೊನೆಗೂ ಟೆಲಿವಿಷನ್ ಕಾರ್ಯಕ್ರಮವೊಂದರ ಮೂಲಕ ತಂದೆ, ತಾಯಿ ಮಡಿಲು ಸೇರಿದ ಅಪರೂಪದ ಘಟನೆ ನಡೆದಿದೆ.
ಬಾಲಕನ ತಂದೆ, ತಾಯಿ “ದೂರದರ್ಶನ್ ಕೋಲ್ಕತಾ”ದ ನ್ಯೂಸ್ ಬುಲೆಟಿನ್ ವೀಕ್ಷಿಸುತ್ತಿದ್ದಾಗ, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ವಿಕಲ ಚೇತನ ವ್ಯಕ್ತಿಗಳನ್ನೊಳಗೊಂಡ ನಿರಾಶ್ರಿತ ನಿಲಯದಲ್ಲಿ ಮಗ ಇರುವುದನ್ನು ಗಮನಿಸಿದ್ದರು ಎಂದು ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಕೂಡಲೇ ಬಾಲಕನ ತಂದೆ ಕಾರ್ತಿಕ್ ಶಾ ಪೊಲೀಸರನ್ನು ಸಂಪರ್ಕಿಸಿ, ತನ್ನ ಮಗ ಪತ್ತೆಯಾಗಿರುವುದಾಗಿ ವಿವರಿಸಿದ್ದ. ಪೊಲೀಸರು ದೂರದರ್ಶನ ಸುದ್ದಿ ವಿಭಾಗದ ಮುಖ್ಯಸ್ಥರ ಜತೆ ಸಂಪರ್ಕ ಸಾಧಿಸಿ ವಿಷಯ ತಿಳಿಸಿದ್ದರು.
ಬಾಲಕನ ತಂದೆ ತನಗೆ ಕರೆ ಮಾಡಿದ್ದರು. ಭಾನುವಾರ ನಾಕಾಶಿಪ್ರಾಕ್ಕೆ ಆಗಮಿಸಿ ಭೇಟಿ ಮಾಡಿದ್ದರು. ಬಹಳ ಸಮಯದ ನಂತರ ಮಗನನ್ನು ನೋಡಿದ ತಂದೆಯ ಕಣ್ಣಲ್ಲಿ ಆನಂದಬಾಷ್ಪ ಸುರಿದಿತ್ತು ಎಂದು ಮುನ್ಶಿ ವಿವರಿಸಿದ್ದಾರೆ. ಮಕ್ಕಳ ಹಕ್ಕುಗಳ ಸಮಿತಿಯ ಕಚೇರಿಯಲ್ಲಿ ನಿಯಮಾವಳಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಬಾಲಕನನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು ಎಂದು ಪಿಟಿಐ ವರದಿ ಮಾಡಿದೆ.
ರೇಷ್ಮೆಹುಳು ಸಾಕಾಣೆ ಇಲಾಖೆಯ ಉದ್ಯೋಗಿ ಮೋಸ್ಲೆಮ್ ಮುನ್ಶಿ ನಾಕಾಶಿಪ್ರಾ ಪ್ರದೇಶದಲ್ಲಿ ಈ ವಿಶೇಷ ಚೇತನರ ನಿಲಯ ನಡೆಸುತ್ತಿದ್ದರು. ಈ ಬಾಲಕನನ್ನು ಸುಮಾರು ಒಂದೂವರೆ ವರ್ಷದ ಹಿಂದೆ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ನಿರ್ಮಲ್ ಹೃದಯ್ ನಿಲಯಕ್ಕೆ ಕಳುಹಿಸಿಕೊಟ್ಟಿತ್ತು ಎಂದು ಮುನ್ಶಿ ತಿಳಿಸಿದ್ದರು.
2017ರ ಫೆಬ್ರುವರಿ 10ರಂದು ಉತ್ತರ ಕೋಲ್ಕತಾದ ಅಹ್ರಿಟೋಲಾ ನಿವಾಸದ ಸಮೀಪ ಈ ಬಾಲಕ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ತಂದೆ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದರು. ಬಳಿಕ ಕರೀಂಪುರ್ ನಲ್ಲಿ ನಾಡಿಯಾ ಜಿಲ್ಲಾಡಳಿತದ ಅಧಿಕಾರಿಗಳು ಈ ಬಾಲಕನನ್ನು ರಕ್ಷಿಸಿ ಮೊದಲು ಸರ್ಕಾರಿ ನಿಲಯದಲ್ಲಿ ಇರಿಸಿದ್ದರು.