Advertisement

ಮಕ್ಕಳ ಸ್ಮಾರ್ಟ್‌ ಫೋನ್ ಚಟ ತಪ್ಪಿಸಲು ಹೆತ್ತವರಿಂದ ಲಂಚ!

10:22 AM Aug 13, 2019 | Hari Prasad |

ಲಂಡನ್: ಯಾವುದೋ ಕೆಲಸ ಮಾಡಿಕೊಡಲು ಲಂಚ ಕೊಡುವುದು ಗೊತ್ತೇ ಇದೆ. ಲಂಚದ ಸಮಸ್ಯೆ ವಿಶ್ವಾದ್ಯಂತ ಹಬ್ಬಿರುವುದೂ ಹೌದು. ಆದರೆ ಇಲ್ಲೊಂದು ವಿಶೇಷವಿದೆ. ಇಲ್ಲಿ ಲಂಚ ಕೊಡುವುದು ಯಾವುದೇ ಕೆಲಸ ಮಾಡುವುದಕ್ಕಲ್ಲ, ಅಧಿಕಾರಿಗಳಿಗೂ ಅಲ್ಲ. ಬದಲಿಗೆ ಹೆತ್ತವರು ಮಕ್ಕಳಿಗೇ ಲಂಚ ಕೊಡುತ್ತಿದ್ದಾರೆ. ಇಷ್ಟಕ್ಕೂ ಲಂಚ ಕೊಡುವುದು ಸ್ಮಾರ್ಟ್ ಫೋನ್ ಆದಷ್ಟೂ ಕಡಿಮೆ ಬಳಸಲಿ ಎಂಬ ಉದ್ದೇಶದಿಂದ!

Advertisement

ಲಂಡನ್‌ನಲ್ಲಿ ಹೆಲಿಕ್‌ಸ್‌ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಅಲ್ಲಿನ ಶೇ.23ಕ್ಕೂ ಹೆಚ್ಚು ಹೆತ್ತವರು ಮಕ್ಕಳು ಸ್ಮಾರ್ಟ್ ಫೋನ್ ಮುಟ್ಟದಿರಲಿ (ಸ್ವಿಚ್ ಆಫ್) ಮಾಡಲು ಹಣ ಕೊಡುತ್ತಾರಂತೆ. ಹೀಗೆ ಹಣ ಕೊಡುವುದರಿಂದ ಮಕ್ಕಳು ಬೇರೆಲ್ಲಾದರೂ ತಿರುಗಾಟಕ್ಕೆ, ಆಟ ಆಡೋದಕ್ಕೆ ಹೋಗುತ್ತಾರೆ ಎನ್ನುವುದು ಅವರ ಲೆಕ್ಕಾಚಾರ. ಅಲ್ಲದೆ ಮಕ್ಕಳು ಸ್ಮಾರ್ಟ್ ಫೋನ್ ಬಿಟ್ಟು ಬೆಡ್‌ ರೂಂನಲ್ಲಿ ಆಟ, ಮನೆ ಶುಚಿಗೊಳಿಸುವುದು, ನೀರು ಹಾಯಿಸುವುದು ಇತ್ಯಾದಿ ಕೆಲಸಗಳಲ್ಲಿ ಭಾಗಿಯಾಗಲಿ ಎಂದು ಹೆತ್ತವರು ಬಯಸುತ್ತಾರಂತೆ.

ಹೀಗೆ ಹೆತ್ತವರು ಕೊಟ್ಟ ಹಣದಲ್ಲಿ ಏನು ಮಾಡುತ್ತೀರಿ ಎಂದು ಮಕ್ಕಳನ್ನು ಕೇಳಿದಾಗ, ಅವರಲ್ಲಿ ಕೆಲವರು ನಾವು ಫೋನ್ ಆ್ಯಪ್‌ಗಳಿಗೆ, ಟೀವಿ ವೀಡಿಯೋಗಳಿಗೆ, ಸಂಗೀತ ಕೇಳಲು ಖರ್ಚು ಮಾಡುತ್ತೇವೆ ಎಂದು ಅಚ್ಚರಿಯ ಉತ್ತರ ನೀಡಿದ್ದಾರೆ. ಶೇ.40ರಷ್ಟು ಮಂದಿ ಹೆತ್ತವರು ಕೊಟ್ಟ ಹಣದಲ್ಲಿ ಸಿಹಿ ಖರೀದಿಸುತ್ತೇವೆ ಎಂದು ಹೇಳಿದರೆ, ಶೇ.31ರಷ್ಟು ಮಂದಿ ವಿವಿಧ ಆಟಗಳಿಗೆ, ಶೇ.30ರಷ್ಟು ಮಂದಿ ಆಟಿಕೆಗಳಿಗೆ ಖರ್ಚು ಮಾಡುತ್ತೇವೆ ಎಂದು ಹೇಳಿದ್ದಾರಂತೆ. ಸಮಾಧಾನಕರ ಸಂಗತಿಯೆಂದರೆ ಶೇ.70ರಷ್ಟು ಮಂದಿ ನಾವು ಹುಂಡಿಯಲ್ಲಿ ಹಣ ಜೋಪಾನವಾಗಿಡುವುದೂ ಇದೆ ಎಂದು ಹೇಳಿದ್ದಾರಂತೆ!

Advertisement

Udayavani is now on Telegram. Click here to join our channel and stay updated with the latest news.

Next