Advertisement

ಕರುಳಿನ ಕುಡಿ ಉಳಿಸಿಕೊಳ್ಳಲು ಹೆತ್ತವರ ಪರದಾಟ

02:42 PM Apr 29, 2019 | Suhan S |

ಹಾನಗಲ್ಲ: ಒಂದೆಡೆ ಕಿತ್ತು ತಿನ್ನುವ ಬಡತನ. ಇನ್ನೊಂದಡೆ ಮಕ್ಕಳಿಗೆ ಕಾಡುವ ಅನಾರೋಗ್ಯದ ಮಧ್ಯೆ ಹೆತ್ತವರು ಕರುಳಿನ ಕುಡಿ ಉಳಿಕೊಳ್ಳಲು ಹೆಣಗುತ್ತಿರುವ ದಯನೀಯ ಪರಿಸ್ಥಿತಿ.

Advertisement

ಹೌದು, ಹಾನಗಲ್ಲ ತಾಲೂಕಿನ ಆಲದಕಟ್ಟಿ ಗ್ರಾಮದ ರವಿ ಲೋಕಪ್ಪ ತಳವಾರ ಎಂಬುವರ ಸ್ಥಿತಿಯಿದು.

ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಆಲದಕಟ್ಟಿ ಗ್ರಾಮದ ರವಿ ತಳವಾರ ಎಂಬ ದಂಪತಿಗೆ ಪ್ರವೀಣ (7) ಹಾಗೂ ರಕ್ಷಿತಾ (5) ಎಂಬ ಮಕ್ಕಳಿದ್ದಾರೆ. ಆದರೆ ಬಾಲ್ಯಾವಸ್ಥೆಯಿಂದಲೇ ಈ ಎರಡೂ ಮಕ್ಕಳು ಥಲಸ್ಸಿಮಿಯಾ  ರೋಗಕ್ಕೆ ತುತ್ತಾಗಿದ್ದಾರೆ. ರೋಗ ಬಾಧೆಯಿಂದ ಈ ಮಕ್ಕಳ ಶರೀರದಲ್ಲಿ ರಕ್ತ ಉತ್ಪಾದಿಸುವ ಶಕ್ತಿಯೇ ಇಲ್ಲದಂತಾಗಿದೆ. ಪ್ರತಿ 30 ದಿನಕ್ಕೊಮ್ಮೆ ಎರಡೂ ಮಕ್ಕಳಿಗೆ ಕಡ್ಡಾಯವಾಗಿ ರಕ್ತ ಹಾಕಲೇಬೇಕು.

ನಿಯಂತ್ರಣಕ್ಕೆ ಬರದ ಸ್ಥಿತಿ: ಹೀಗಿರುವಾಗ ಎರಡೂ ಮಕ್ಕಳ ಹುಟ್ಟಿನಿಂದಲೇ ಮಕ್ಕಳಿಗೆ ರಕ್ತ ಹಾಕುತ್ತಲೇ ತಂದೆ-ತಾಯಿ ಸುಸ್ತಾಗಿದ್ದು, ಇರುವ ಒಂದೂವರೆ ಎಕರೆ ಜಮೀನಿನಲ್ಲಿ ದುಡಿದು ಜೊತೆಗೆ ಕೂಲಿ-ನಾಲಿ ಮಾಡಿ ಮಕ್ಕಳ ಆರೋಗ್ಯಕ್ಕಾಗಿ ಬೆವರು ಸುರಿಸುತ್ತಿದ್ದರೂ ನಿಯಂತ್ರಣಕ್ಕೆ ಬರದ ಸ್ಥಿತಿಯಿಂದ ಇದೀಗ ಸಹಾಯಕ್ಕಾಗಿ ತಿರುಗಿ ನೋಡುತ್ತಿದ್ದಾರೆ.

ಆತಂಕದಲ್ಲಿ ಹೆತ್ತವರು: ಈಗಾಗಲೇ ಧಾರವಾಡದ ಎಸ್‌ಡಿಎಂ, ಹುಬ್ಬಳ್ಳಿಯ ಕಿಮ್ಸ್‌ ಸೇರಿದಂತೆ ದಾವಣಗೆರೆ ಹಾವೇರಿ ಮೊದಲಾದ ತಜ್ಞ ವೈದ್ಯರಲ್ಲಿ ಬೇಡಿಕೊಂಡಿದ್ದಾರೆ. ಆದರೆ ಆರೋಗ್ಯ ಮಾತ್ರ ಬದಲಾವಣೆಯಾಗಿಲ್ಲ. ಈ ರೋಗ ಸರಿಪಡಿಸಲು ಪ್ರತಿ ಮಗುವಿಗೆ 25 ಲಕ್ಷ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ. ಆದರೆ ಇದಕ್ಕೆ ನಿಖರ ಸಲಹೆ, ಸಹಾಯ ಯಾರಿಂದಲೂ ಲಭ್ಯವಾಗುತ್ತಿಲ್ಲ. ಹೀಗಾಗಿ ಆತಂಕದಲ್ಲಿರುವ ತಂದೆ-ತಾಯಿಯಲ್ಲಿ ಮಕ್ಕಳ ಆರೋಗ್ಯ ಏನಾಗುತ್ತದೆಯೋ ಎಂಬ ಕಾರ್ಮೋಡದಲ್ಲಿ ಕಾಲ ಕಳೆಯುತ್ತಿದ್ದಾರೆ.

Advertisement

 

ದೇಹದಲ್ಲಿ ರಕ್ತ ಉತ್ಪಾದಿಸುವ ಶಕ್ತಿಯೇ ಇಲ್ಲ

ಪ್ರತಿ•ತಿಂಗಳಿಗೆ ರಕ್ತ ಬದಲಾವಣೆ

ಸಹಾಯಕ್ಕೆ ಮೊರೆ

ಸಿಗದ ಅಂಗವಿಕಲ ಮಾಸಾಶನ

ಮಕ್ಕಳಿಗೆ ರಕ್ತ ಹುಡುಕುವುದೇ ನಿತ್ಯ ಕಾಯಕ

ವೈದ್ಯರಿಗೆ ಸವಾಲಾದ ಕಾಯಿಲೆ: ಈ ಕುರಿತು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಮೊರೆ ಹೋಗಿದ್ದಾರೆ. ಆದರೆ ಇನ್ನೂ ಸರಿಯಾದ ದಾರಿ ಸಿಕ್ಕಿಲ್ಲ. ಮಕ್ಕಳಿಗೆ ಅಂಗವಿಕಲತೆ ಎಂದು ಪರಿಗಣಿಸಿ ಅಂಗವಿಕಲ ಮಾಸಾಶನ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದರೆ ಇಂತಹ ಮಕ್ಕಳ ಅಂಗವಿಕಲತೆ ಯಾವ ಪ್ರಮಾಣದ ಅಂಗವಿಕಲತೆ ಎಂದು ಪರಿಗಣಿಸಬೇಕೆಂಬುದೇ ವೈದ್ಯರಿಗೆ ಸವಾಲಾಗಿದೆ.

ಈ ಮಕ್ಕಳಿಗೆ ಅಂಗವಿಕಲ ಕಾರ್ಡ್‌ ಇಲ್ಲದ ಕಾರಣ ಅಂಗವಿಕಲ ಮಾಸಾಶನವೂ ಇಲ್ಲದಾಗಿದೆ. ಹೀಗಾಗಿ ಈ ಮಕ್ಕಳಿಗೆ ಪ್ರತಿ 30 ದಿನಕ್ಕೊಮ್ಮೆ ಬಿ.ಪಾಸಿಟಿವ್‌ ರಕ್ತ ಹುಡುಕಿ ಕೊಡಿಸುವುದೇ ಪಾಲಕರಿಗೆ ನಿತ್ಯದ ಚಿಂತೆಯಾಗಿದೆ.

ರೋಗದಿಂದ ಮಕ್ಕಳನ್ನು ಮುಕ್ತಗೊಳಿಸಲು ಸಲಹೆ ಸಹಾಯ ಮಾಡಿ ಉಪಕರಿಸಬೇಕೆಂದು ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಆಲದಕಟ್ಟಿ ಗ್ರಾಮದ ರವಿ ಲೋಕಪ್ಪ ತಳವಾರ ಬೇಡಿಕೊಂಡಿದ್ದಾರೆ. ಇಂತಹ ರೋಗಕ್ಕೆ ಎಲ್ಲಿಯಾದರೂ ಸಮರ್ಪಕ ಆರೋಗ್ಯ ನೀಡುವ ವೈದ್ಯರಿದ್ದರೆ ಸಲಹೆ ನೀಡುವಂತೆ ಅವರು ವಿನಂತಿಸಿದ್ದಾರೆ. (ಮಾಹಿತಿಗೆ (ಮೊ.9740800839)

Advertisement

Udayavani is now on Telegram. Click here to join our channel and stay updated with the latest news.

Next