ದೊಡ್ಡಬಳ್ಳಾಪುರ: ಮಕ್ಕಳಿಗೆ ಹಣ, ಆಸ್ತಿ ನೀಡುವುದಕ್ಕಿಂತ ಉತ್ತಮ ಶಿಕ್ಷಣ ನೀಡಿದರೆ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ದಶಕಗಳ ಹಿಂದೆ ಹೋಲಿಸಿದರೆ ಈಗ ಉತ್ತಮ ಶಿಕ್ಷಣ ಪಡೆಯಲು ವಿಪುಲ ಅವಕಾಶಗಳಿವೆ ಎಂದು ಶಾಸಕ ಟಿ. ವೆಂಕಟರಮಣಯ್ಯ ತಿಳಿಸಿದರು.
ನಗರದ ಬೋಧಿವೃಕ್ಷ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟಿನ ಮಾಳವ ಸಂಜೆ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ “ಬೆಳಕು’-2020-21ರ ಪದವಿ ಪ್ರದಾನ ಸಮಾರಂಭ ಸಮಾರಂಭ ಉದ್ಘಾ ಟಿಸಿ ಮಾತನಾಡಿದ ಅವರು, ಶಿಕ್ಷಣ ಕೇವಲ ಜ್ಞಾನ ಕ್ಕಷ್ಟೇ ಸೀಮಿತವಾಗಬಾರದು. ಜೀವನ ಮೌಲ್ಯ ರೂಢಿಸುವಂತಾಗಬೇಕು.ಉನ್ನತ ಜ್ಞಾನ ಸಂಪಾದಿಸಿದ ವಿದ್ಯಾವಂತರು ದೇಶದ ಪ್ರಗತಿ ಬಗ್ಗೆ ಆಸಕ್ತಿ ತೋರಿಸಬೇಕು ಎಂದರು.
ಕಾಲೇಜು ಉದ್ಘಾಟನೆ: ನನ್ನ ಅಧಿಕಾರ ಅವಧಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿ ವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದೇನೆ. ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಮಾಡಲಾಗಿದೆ. ಹೊಸ ಸರ್ಕಾರಿ ಐಟಿಐ ಕಾಲೇಜು ಉದ್ಘಾಟನೆಗೊಳ್ಳಲಿದೆ. ಭಾರತರತ್ನ ವಸತಿ ಶಾಲೆ ಪ್ರಾರಂಭಿಸಲಾಗಿದೆ ಎಂದರು.
ಹಿಂದುಳಿದವರು ಮತ್ತು ದಲಿತರು, ಬಡವರು ಈ ಶಾಲೆ ಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಅನುಕೂಲಕರವಾಗಿದೆ. ಇದರಿಂದ ಶೈಕ್ಷಣಿಕವಾಗಿ ದುಬಾರಿ ವೆಚ್ಚ ಕೊಟ್ಟು ಓದಿಸುವುದನ್ನು ತಪ್ಪಿಸಲಾಗಿದೆ. ಮುಂದೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ನರ್ಸಿಂಗ್ ಕಾಲೇಜು ತರುವ ಗುರಿ ಇದೆ ಎಂದು ತಿಳಿಸಿದರು.
ಶಿಕ್ಷಣ ಪ್ರತಿಯೊಬ್ಬರಿಗೂ ಸಿಗಲಿ: ಟ್ರಸ್ಟಿನ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ಸಮಾನ ಮನಸ್ಕರು ಸೇರಿ ಟ್ರಸ್ಟಿನ ವತಿಯಿಂದ ಉದ್ಯೋಗಕ್ಕೆ ಹೋಗುವವರಿಗೆ ಮಾಳವ ಸಂಜೆ ಕಾಲೇಜು ಪ್ರಾರಂಭ ಮಾಡಲಾಯಿತು. ನಮ್ಮ ಸಂಜೆ ಕಾಲೇಜಿ ನ ಬಿ.ಎಸ್. ನಂದೀಶ್ ವಿದ್ಯಾರ್ಥಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸಂಯೋಜ ನೆಗೊಂಡಿ ರುವ 272 ಕಾಲೇಜುಗಳಲ್ಲಿ ಕಲಾವಿಭಾಗದಿಂದ ಪ್ರಥಮ ರ್‍ಯಾಂಕ್ ಪಡೆದು ಉತ್ತೀರ್ಣನಾಗಿ ನಮ್ಮ ಸಂಜೆ ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಶಿಕ್ಷಣ ಪ್ರತಿಯೊಬ್ಬರಿಗೂ ಸಿಗಬೇಕೆಂಬುದೇ ನಮ್ಮ ಉದ್ದೇಶವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಪ್ರೊ. ಚಂದ್ರಪ್ಪ ಮಾತನಾಡಿ, ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ವಿದ್ಯಾವಂತರು ಸಮಾಜ ಘಾತಕರಾಗಿ ಬೆಳೆಯಬಾರದು ಎಂದರು. ಬಿ.ಎಸ್. ನಂದೀಶ್ ಮಾತನಾಡಿ, ಪಠ್ಯಕ್ಕೆ ಪೂರಕವಾದ ವಿಷಯ ತಿಳಿದುಕೊಂಡು ಚೆನ್ನಾಗಿ ಅಭ್ಯಾಸ ಮಾಡಿದೆ. ಶಿಕ್ಷಕರು ಮತ್ತು ಇತರೆ ಸಂಪನ್ಮೂಲ ವ್ಯಕ್ತಿ ನನಗೆ ತುಂಬಾ ನೆರವು ನೀಡಿದರು ಎಂದರು.
ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಪ್ರಮಾಣ ಪತ್ರ ನೀಡಲಾಯಿತು. ಪ್ರಾಧ್ಯಾಪಕ ಡಾ.ಸದಾಶಿವ ರಾಮಚಂದ್ರಗೌಡ, ವಿ.ಜಿ. ಬಾಲ ಕೃಷ್ಣ, ಡಿ.ತಿಮ್ಮರಾಯಪ್ಪ, ಪದ್ಮ ರಾಮ ಕೃಷ್ಣ, ಎಂ.ರಾಜೇಶ್, ಕಾಲೇಜಿನ ಪ್ರಾಂಶುಪಾಲ ಮಂಜುಳಾ, ಬಿ.ಎನ್. ನರಸಿಂಹಮೂರ್ತಿ, ಈಶ್ವರಾಚಾರ್, ಎಪಿಎಂಸಿ ಅಧ್ಯಕ್ಷ ಸಿದ್ದರಾಮಯ್ಯ, ತಾಪಂ ಮಾಜಿ ಅಧ್ಯಕ್ಷ ಶಶಿಧರ್ ಇದ್ದರು.