Advertisement
ರಾಜೇಶನ ಏಳನೇ ತರಗತಿ ಪರೀಕ್ಷೆ ಫಲಿತಾಂಶ ಬಂದ ತಕ್ಷಣವೇ ಪಾಲಕರು ಗಡಿಬಿಡಿ ಬಿದ್ದರು. ಶಿರಸಿಯ ಪೇಟೆಗೆ ಹೋದವರು ಶಾಲೆಗೂ ಹೋಗಿ “ನನ್ ಮಗನಿಗೆ ಇಲ್ಲೇ ಸೀಟು ಬೇಕು’ ಎಂದು ಹೇಳಿ ಬಂದರು. ಅರ್ಜಿ ಕೊಡಲು ಆರಂಭಿಸಿದಾಗಂತೂ ಸರತಿ ಸಾಲಿನಲ್ಲಿ ಇತರೆ ಪಾಲಕರ ಜೊತೆ ಕ್ಯೂ ನಿಂತರು. ಈ ಶಾಲೆಗೆ ಕೇವಲ ರಾಜೇಶ ಮಾತ್ರ ಅಲ್ಲ, ಕಮಲಾ, ಗಣೇಶ, ಇಸ್ಮಾಯಿಲ್, ಜೋಸೆಫ್ ಎಲ್ಲರೂ, ಅವರ ಪಾಲಕರೂ ಬರಲು ಹಾತೊರೆಯುತ್ತಾರೆ. ಅರ್ಜಿ ಪಡೆದು, ಪಟ ಪಟನೆ ಭರ್ತಿ ಮಾಡಿ, ಮಾರ್ಕ್ಸ್ ಕಾರ್ಡ್ ಜೋಡಿಸಿ ಮರಳಿ ಕೊಡುವಾಗ- “ನಮಗೆ ಸೀಟ್ ಬೇಕೇ ಬೇಕು, ಕೊಡದೇ ಇರಬೇಡಿ’ ಎಂದು ಅಲ್ಲಿದ್ದ ಅಟೆಂಡರ್ ಬಳಿಯೂ ಹೇಳಿ ಹೋಗುತ್ತಾರೆ. ಹಾಗಂತ, ಇಡೀ ಜಿಲ್ಲೆಗೆ ಇದೊಂದೇ ಶಾಲೆಯೇ? ಇಲ್ಲ. ಆ ಮಟ್ಟದ ಡಿಮ್ಯಾಂಡ್ ಈ ಶಾಲೆಗೆ ಇದೆ.
Related Articles
Advertisement
ಈ ಶಾಲೆಯಲ್ಲಿ ಪ್ರತೀ ವರ್ಷ ಹತ್ತಿಪ್ಪತ್ತಲ್ಲ, ಬರೋಬ್ಬರಿ 500 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಾರೆ!. ಸರಾಸರಿ 85ರಷ್ಟು ಫಲಿತಾಂಶ ಸಾಧಿಸುತ್ತಾರೆ. ಪ್ರತಿ ವರ್ಷ ಮೂರರಿಂದ ಎಂಟು ರ್‍ಯಾಂಕ್‌ಗಳು ಈ ಶಾಲೆಗೆ ಕಟ್ಟಿಟ್ಟ ಬುತ್ತಿ. ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡೆ, ಪ್ರತಿಭಾ ಕಾರಂಜಿಯಲ್ಲೂ ಈ ಶಾಲೆಯ ಪ್ರೊಫೈಲ್ ಸಣ್ಣದೇನಿಲ್ಲ.
ಕ್ಲಾಸ್ ರೂಂ ವಿಚಾರಕ್ಕೆ ಬಂದರೆ, ಈ ವರ್ಷದ ಮೂರೂ ತರಗತಿಗಳು ಸೇರಿ 1,473 ಮಕ್ಕಳಿದ್ದಾರೆ. ಎಂಟಕ್ಕೆ ಎಂಟು, ಒಂಬತ್ತಕ್ಕೆ ಎಂಟು, ಹತ್ತನೇ ತರಗತಿಗೆ 10 ವಿಭಾಗಗಳು ಇವೆ. 33ಕ್ಕೂ ಅಧಿಕ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಮಕ್ಕಳಿಗೆ ಪಾಠ ಪ್ರವಚನ ಮಾಡುತ್ತಾರೆ. ಉಳಿದಂತೆ ಎಲ್ಲ ಶಾಲೆಗಳಲ್ಲಿ ಇದ್ದಂತೆ ಬಿಸಿಯೂಟ, ಹಾಲು, ಸೈಕಲ್ಲು, ಉಚಿತ ಪಠ್ಯ ಪುಸ್ತಕ ವಿತರಣೆ ಎಲ್ಲವೂ ಇದೆ. ನಾವೂ ಶೇ.80ರಷ್ಟು ಅಂಕ ಪಡೆದ ಮಕ್ಕಳನ್ನು ಪಡೆದರೆ ಹೀಗೇ ಸಾಧನೆ ಮಾಡ್ತೇವೆ ಎನ್ನಬೇಡಿ. ಇಲ್ಲಿ ಜಸ್ಟ ಪಾಸ್ ಆದವರಿಗೂ ಅವಕಾಶ ಇದೆ ಎನ್ನುವ ಉಪ ಪ್ರಾಚಾರ್ಯ ನಾಗರಾಜ್ ನಾಯ್ಕ ಶಾಲೆಯ ಟೀಂ ವರ್ಕ್ ಬಗ್ಗೆ ಖುಷಿಯಿಂದ ಹೇಳುತ್ತಾರೆ.
ಇಲ್ಲಿಗೆ ಬರುವ ಮಕ್ಕಳ ಮಾತೃಭಾಷೆ ಉರ್ದು, ಕನ್ನಡ, ಕೊಂಕಣಿ, ಹಿಂದಿ, ಮರಾಠಿ, ಗುಜರಾತಿಗಳಾಗಿವೆ ಎಂಬುದನ್ನೂ ಗಮನಿಸಬೇಕು. ಕನ್ನಡೇತರ ಮಕ್ಕಳೂ ಇಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕವನ್ನು ಕನ್ನಡದಲ್ಲೂ ಪಡೀತಾರೆ ಅನ್ನೋದೂ ವಿಶೇಷ! ಕಳೆದ ವರ್ಷ ಮುಸ್ಲಿಂ ಹುಡುಗಿಯೊಬ್ಬಳು ಸಂಸ್ಕೃತದಲ್ಲಿ ಶೇ.100 ಅಂಕ ಪಡೆದು ರಾಜ್ಯದ ಗಮನ ಸೆಳೆದಿದ್ದಳು ಎಂಬುದನ್ನೂ ಮರೆಯೋಹಂಗಿಲ್ಲ.ಎಂಟು, ಒಂಭತ್ತನೇ ಕ್ಲಾಸಿಗೆ ವಿಶೇಷ ತರಗತಿಗಳು ಇಲ್ಲದಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ ಮಾತ್ರ ಬೆಳಗ್ಗೆ ಹಾಗೂ ಸಂಜೆ ಒಂದೊಂದು ಹೆಚ್ಚುವರಿ ತರಗತಿ ಇರುತ್ತದೆ. ಓದಿನಲ್ಲಿ ಹಿಂದಿರುವ ಮಕ್ಕಳನ್ನು ಒಟ್ಟು ಮಾಡಿ ಶನಿವಾರ ಪ್ರತ್ಯೇಕ ತರಗತಿ ನಡೆಸುತ್ತಾರೆ. ಒಟ್ಟಿನಲ್ಲಿ ಸರ್ಕಾರಿ ಸ್ಕೂಲಾ ಅಂತ ಮೂಗು ಮುರಿಯೋರಿಗೆ ಉತ್ತರ ಎಂಬಂತೆ ಶಿರಸಿಯ ಈ ಶಾಲೆ ಇದೆ. ಎಲ್ಲರೂ ದೊಡ್ಡವರು
ಶಾಲೆಯ ವಯಸ್ಸು ಈಗ 153ವರ್ಷ. 1865ರಲ್ಲಿ. ಆಂಗ್ಲೋ ವೆರ್ನಾಕುಲರ್ ಸ್ಕೂಲ್ ಎಂದು ಪ್ರಾರಂಭಿಸಲಾಗಿತ್ತು. ನಂತರ ಪುರ ಸಭೆ ಆಡಳಿತಕ್ಕೆ ಒಳಪಟ್ಟಾಗ ಸ್ಥಳ ದೇವತೆಯ ಹೆಸರು ಇಟ್ಟರು. ಮಾರಿಕಾಂಬ ಶಾಲೆಯಲ್ಲಿ ಪಿಯುಸಿಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ, ಕಂಪ್ಯೂಟರ್ ಸೈನ್ಸ್ ವಿಭಾಗಗಳಿವೆ. ಈ ಪ್ರೌಢ ಶಾಲೆಯಲ್ಲಿ ಪ್ರತೀ ವರ್ಷ 400ರಷ್ಟು ವಿದ್ಯಾರ್ಥಿಗಳು ಹಳೇ ವಿದ್ಯಾರ್ಥಿಗಳಾಗುತ್ತಾರೆ. ಹಳೆ ವಿದ್ಯಾರ್ಥಿಗಳ ಪೈಕಿ ಪ್ರಸಿದ್ದ ನಾಟಕಕಾರ, ಡಾ. ಗಿರೀಶ್ ಕಾರ್ನಾಡ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಚಿತ್ರನಟ ನೀರ್ನಳ್ಳಿ ರಾಮಕೃಷ್ಣ, ಗೋವಾದ ವೈಸ್ ಚಾನ್ಸಲರ್ ಆಗಿದ್ದ ಡಾ. ಬಿ.ಎಸ್.ಸೋಂದೆ, ಚುನಾವಣಾ ಆಯುಕ್ತರಾಗಿದ್ದ ಎಂ.ಆರ್.ಹೆಗಡೆ, ಜಸ್ಟೀಸ್ ಜಿ.ಎನ್.ವೈದ್ಯ ಹೀಗೆ ಇಲ್ಲಿ ಓದಿದ ದೇಶದಲ್ಲೇ ಹೆಸರು ಮಾಡಿದ ಅನೇಕ ಸಾಧಕರ, ಕಲಾವಿದರ, ಅಧಿಕಾರಿಗಳ ಸಂಖ್ಯೆ ಸಣ್ಣದಲ್ಲ. ಈ ಸಾಧನೆಗೆ ಆ ಶಾಲೆಯೇ ಕಾರಣ
ಈಗಿನ ಖಾಸಗಿ ಶಾಲೆಗಳನ್ನು ನೋಡಿದಾಗ ನನಗೆ ಜ್ಞಾಪಕಕ್ಕೆ ಬರೋದು ಯಾವುದಕ್ಕೂ ಸರಿಸಾಟಿ ಇಲ್ಲದ ಶಿರಸಿಯ ಮಾರಿಕಾಂಬ ಸರ್ಕಾರಿ ಪ್ರೌಢಶಾಲೆ ಮತ್ತು ಅದರ ಶಿಸ್ತು. ಬದುಕಿಗೆ ಮಾತ್ರ ಅಲ್ಲ, ವಿಜ್ಞಾನ, ಗಣಿತದಲ್ಲಿ ನನಗೆ ಒಳ್ಳೇ ಅಡಿಪಾಯ ಹಾಕಿಕೊಟ್ಟಿದ್ದು ಇದೇ ಶಾಲೆ. ಇವತ್ತು ನಾನೇನಾದರೂ ಸಾಧನೆ ಮಾಡಿದ್ದರೆ, ಈ ಸರ್ಕಾರಿ ಶಾಲೆಯ ಅಡಿಪಾಯದ ಮೇಲೆಯೇ.
-ಮಾಧವ ಭಟ್ಟ, ಬಯೋಟೆಕ್ ವಿಜ್ಞಾನಿ, ವರ್ಜೀನಿಯಾ ಅಮೆರಿಕ – ರಾಘವೇಂದ್ರ ಬೆಟ್ಟಕೊಪ್ಪ