ಬೆಂಗಳೂರು: ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳು ಮತ್ತು ಕೇಂದ್ರ ಪಠ್ಯ ಕ್ರಮ ಬೋಧನೆ ಮಾಡುತ್ತಿರುವ ಶಾಲೆಗಳು ನಿರ್ದಿಷ್ಟ ಮಾರಾಟಗಾರರ ಮೂಲಕ ಪುಸ್ತಕ, ಸಮವಸ್ತ್ರ ಮತ್ತು ಇತರ ಲೇಖನ ಸಾಮಗ್ರಿಗಳನ್ನು ಖರೀದಿಸುವಂತೆ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕ, ಪೋಷಕರಿಗೆ ಒತ್ತಾಯಿಸುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಿಸಿದೆ.
ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳು ನೋಂದಣಿ ಮತ್ತು ಅನುಮತಿ ಪಡೆಯುವಾಗ ಹಾಗೂ ಕೇಂದ್ರ ಪಠ್ಯಕ್ರಮ ಶಾಲೆಗೆ ಸಂಯೋಜನೆ ಪಡೆಯುವಾಗ ಇಲಾಖೆಯ ನಿಯಮಾವಳಿ ಅನುಸರಿಸಬೇಕೆಂಬ ಷರತ್ತಿನ ಮೇರೆಗೆ ನೋಂದಣಿ, ಮಾನ್ಯತೆ, ನಿರಾಕ್ಷೇಪಣಾ ಪತ್ರ ನೀಡಲಾಗಿತ್ತು. ಆದರೂ, ಇಲಾಖೆ ನೀಡಿರುವ ಅದೇಶ ಪಾಲಿಸದೇ ಬಹುತೇಕ ಖಾಸಗಿ ಶಾಲೆಗಳಲ್ಲಿ ಪಠ್ಯ, ನೋಟ್‌ಪುಸ್ತಕ, ಸಮವಸ್ತ್ರ ಹಾಗೂ ಇತರ ಲೇಖನ ಸಾಮಗ್ರಿಗಳನ್ನು ಶಾಲೆಗಳಲ್ಲಿ ಅಥವಾ ನಿರ್ದಿಷ್ಟ ಮಾರಾಟಗಾರರಿಂದ ಖರೀದಿಸುವಂತೆ ಪಾಲಕರಿಗೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ.
ಈ ವಿಚಾರವಾಗಿ ಪಾಲಕ, ಪೋಷಕರ ಮೇಲೆ ಒತ್ತಡ ಹೇರುವ ಶಾಲೆಗಳ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗವು ದೂರು ದಾಖಲಿಸಿಕೊಂಡಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಅನಧಿಕೃತ ಪಠ್ಯಕ್ರಮ ಬೋಧನೆಗೆ ಪರೋಕ್ಷವಾಗಿ ಸಹಕಾರ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ದೂರುಗಳು ಬಂದಲ್ಲಿ ಆಯಾ ಶಾಲಾ ಆಡಳಿತ ಮಂಡಳಿ, ಮುಖ್ಯಸ್ಥರು ಹಾಗೂ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಕೆ ನೀಡಿದೆ.
ಸರ್ಕಾರದ ಆದೇಶದಂತೆ ರಾಜ್ಯದ ಯಾವುದೇ ಖಾಸಗಿ ಶಾಲೆಯು ಪಠ್ಯ ಪುಸ್ತಕಗಳನ್ನು (ರಾಜ್ಯ ಪಠ್ಯ ಹೊರತುಪಡಿಸಿ) ನೋಟ್ ಪುಸ್ತಕ, ಸಮವಸ್ತ್ರ ಮತ್ತು ಇತರ ಲೇಖನ ಸಾಮಗ್ರಿಗಳನ್ನು ನಿರ್ದಿಷ್ಠ ಮಾರಾಟಗಾರರಿಂದ ಖರೀದಿಸುವಂತೆ ಪಾಲಕರಿಗೆ ಒತ್ತಾಯಿಸುವುದನ್ನು ನಿರ್ಬಂಧಿಸಿ ಆದೇಶಿಸಲಾಗಿದೆ. ಪ್ರತಿ ತರಗತಿಗೆ ನಿಗದಿಪಡಿಸಿರುವಂತಹ ನೋಟ್ ಪುಸ್ತಕ, ಸಮವಸ್ತ್ರ ಮತ್ತು ಇತರ ಲೇಖನ ಸಾಮಗ್ರಿಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಪಾಲಕರು ಸ್ವತಂತ್ರರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದೆ.
ಕ್ರಮ ಕೈಗೊಳ್ಳುತ್ತಿಲ್ಲ: ಇದು ಹೊಸ ಸುತ್ತೋಲೆಯಲ್ಲ, ಹಳೆಯದನ್ನೇ ಪರಿಷ್ಕೃತ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಪುಸ್ತಕವನ್ನು ಮಾರುಕಟ್ಟೆಗೆ ನೀಡಿ, ಪಾಲಕ, ಪೋಷಕರು ಮಾರುಕಟ್ಟೆಯಿಂದಲೇ ಖರೀದಿಸುವಂತೆ ಮಾಡಿ, ಕೆಲವು ಶಾಲೆಗಳು ವಾಮಮಾರ್ಗದಲ್ಲಿ ಇಲಾಖೆಯ ಅಧಿಕಾರಿಗಳ ಜತೆ ಶಾಮೀಲಾಗಿ ಎನ್‌ಸಿಇಆರ್‌ಟಿ ಪಠ್ಯಕ್ರಮವಲ್ಲದ್ದನ್ನು ಮಾರಾಟ ಮಾಡುತ್ತಿರುವುದು ಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ನಿಗದಿತ ಸಮಯದಲ್ಲಿ ಪಠ್ಯಪುಸ್ತಕ ಪೂರೈಕೆ ಮಾಡಬೇಕು ಎಂದು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಆಗ್ರಹಿಸಿದರು.