ನೆಲಮಂಗಲ: ಮಕ್ಕಳಲ್ಲಿನ ಪ್ರತಿಭೆ ಅನಾವರಣೆಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ. ಆದರೆ ಈ ವೇದಿಕೆಯಲ್ಲಿ ಭಾಗವಹಿಸದಂತೆ ಇಲಾಖೆ ಅಧಿಕಾರಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಕಟ್ಟಪ್ಪಣೆ ಮಾಡಿದ್ದಾರೆ. ಇದರಿಂದಾಗಿ ಮಕ್ಕಳು, ಪೋಷಕರು ಶಿಕ್ಷಕರು ಕಂಗಾಲಾಗಿದ್ದಾರೆ.
ಮಕ್ಕಳ ಪ್ರತಿಭೆಗೆ ಇಲಾಖೆ ಅಡ್ಡಗಾಲು: ತಾಲೂಕಿನಲ್ಲಿ ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆ 22 ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆ ನಡೆಸಲಾಗಿದೆ. ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಸ್ಪರ್ಧೆಗೆ ದಿನಾಂಕ ನಿಗದಿಯಾಗಿದೆ. ಆದರೆ ಕಥೆ ಹೇಳುವ ಹಾಗೂ ಛಧ್ಮ ವೇಷ ಸ್ಪರ್ಧೆಗಳು ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದರೂ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಸಾಧ್ಯವಾಗುತ್ತಿಲ್ಲ.
ತಾಲೂಕಿನ 72 ಪ್ರತಿಭಾವಂತ ಮಕ್ಕಳ ಪ್ರತಿಭೆಗೆ ಇಲಾಖೆಯೇ ಅಡ್ಡಗಾಲಾಗಿದೆ ಎಂದ ಆರೋಪಗಳು ಕೇಳಿಬಂದಿದೆ.
ಪೋಷಕರ ಆರೋಪ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧೆ ನಡೆಸಿ, ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುವುದನ್ನು ಖಚಿತ ಪಡಿಸಿದ ನಂತರ ಇಲಾಖೆ ಅಧಿಕಾರಿಗಳು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸದಂತೆ ತಿಳಿಸಿದ್ದಾರೆ. ಆದರೆ ಈ ಸಂಬಂದ ಇಲಾಖೆಯಿಂದ ಯಾವುದೇ ಆದೇಶ ಪ್ರತಿ ನೀಡಿಲ್ಲ. ಇದು ಅಧಿಕಾರಿಗಳ ವಿರುದ್ಧ ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಮಕ್ಕಳ ಪ್ರತಿಭೆಗೆ ವೇದಿಕೆ ನೀಡದೆ, ಇಲಾಖೆ ನಮ್ಮ ಮಕ್ಕಳ ಪ್ರತಿಭೆ ಮೊಟುಕು ಗೊಳಿಸುತ್ತಿದೆ ಎಂದು ವಂಚಿತ ಮಕ್ಕಳ ಪೋಷಕರು ಆರೋಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲ್ಗೊಳ್ಳಲು ಅವಕಾಶ ನೀಡಿ: ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕಥೆ ಹೇಳುವ ಹಾಗೂ ಛಧ್ಮ ವೇಷ ಸ್ಪರ್ಧೆಗಳಿಲ್ಲ ಎಂಬ ಕಾರಣಕ್ಕೆ ತಾಲೂಕು ಮಟ್ಟಕ್ಕೆ ಬಾರದಂತೆ ತಿಳಿಸಿರುವ ಅಧಿಕಾರಿಗಳು, ಈ ಬಾರಿ ಕ್ಲಸ್ಟರ್ ಮಟ್ಟದಲ್ಲಿ ಆಯ್ಕೆಯಾಗಿರುವ ಪ್ರತಿಭಾ ವಂತ ಮಕ್ಕಳಿಗೆ ತಾಲೂಕು ಮಟ್ಟದಲ್ಲಿ ಅವಕಾಶ ನೀಡಬೇಕು ಎಂದು ಪ್ರಥಮ ಸ್ಥಾನ ಪಡೆದ ಮಕ್ಕಳು ಮನವಿ ಮಾಡಿದ್ದಾರೆ.
ಕ್ಲಸ್ಟರ್ ಮಟ್ಟದಲ್ಲಿ ಸ್ಪರ್ಧೆ ನಡೆಸಿ, ಈಗ ತಾಲೂಕು ಮಟ್ಟದ ಸ್ಪರ್ಧೆಗಳಿಗೆ ಬರುವಂತಿಲ್ಲಎಂದು ಹೇಳುವ ಮೂಲಕ ಮಕ್ಕಳ ಪ್ರತಿಭೆಯನ್ನು ಆರಂಭದಲ್ಲಿ ಚಿವುಟಿ ಹಾಕುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದೆ ಮುಂದಿನ ಹಂತದಲ್ಲಿ ಸ್ಪರ್ಧೆ ನಡೆಸಿ ಮಕ್ಕಳಿಗೆ ಅನು ಕೂಲ ಮಾಡಬೇಕು. ಇಲ್ಲದೇ ಹೋದರೆ ಹೋರಾಟ ಮಾಡುತ್ತೇವೆ ಎಂದು ಪೋಷಕ ಮಹೇಶ ಹೇಳಿದರು. ಬಿಇಒ ಅಲ್ಮಾಸ್ ಪರ್ವೀನ್ ತಾಜ್ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿ ಪ್ರತಿಭಾವಂತ ಮಕ್ಕಳಿಗೆ ಅವಕಾಶ ಕಲ್ಪಿಸಲು ಕ್ರಮಕೈಗೊಳ್ಳುತ್ತೇವೆ ಎಂದರು.