ಕುಂದಾಪುರ: ಪ್ರಧಾನಿ ಮೋದಿ ಅವರು ನಡೆಸಿಕೊಡುವ “ಪರೀಕ್ಷಾ ಪೇ ಚರ್ಚಾ’ – ವಿದ್ಯಾರ್ಥಿಗಳೊಡನೆ ಸಂವಾದ ಕಾರ್ಯಕ್ರಮಕ್ಕೆ ಅಲ್ಬಾಡಿ - ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಅನುಷಾ ಅವರು ಆಯ್ಕೆಯಾಗಿದ್ದಾರೆ.
ದೇಶದ ವಿವಿಧೆಡೆಯಿಂದ 10.39 ಲಕ್ಷ ವಿದ್ಯಾರ್ಥಿಗಳು “ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಭಾಗಿ ಆಗಲು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1,500 ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮ ವೀಕ್ಷಿಸಲು ಆಯ್ಕೆಯಾಗಿದ್ದಾರೆ. ಇವರಲ್ಲಿ ಕೇವಲ 30 ವಿದ್ಯಾರ್ಥಿಗಳು ಮಾತ್ರ ಪ್ರಧಾನಿ ಜತೆಗೆ ಮಾತನಾಡಲಿದ್ದಾರೆ. ಇದಕ್ಕೆ ಆಯ್ಕೆಯಾಗಿರುವ ಆರ್ಡಿಯ ವಿದ್ಯಾರ್ಥಿನಿಯ ಹೆಸರು ಅನುಷಾ.
ದೇಶಾದ್ಯಂತ ಆಯ್ಕೆಯಾಗಿರುವ ಮೂವತ್ತು ಶಾಲೆಗಳಲ್ಲಿ ಆರ್ಡಿ- ಅಲ್ಬಾಡಿ ಶಾಲೆಯೂ ಒಂದು. ಕರ್ನಾಟಕದಿಂದ ಬೆಂಗಳೂರಿನ ಒಂದು ಮತ್ತು ಆರ್ಡಿ ಶಾಲೆ ಮಾತ್ರ ಆಯ್ಕೆಯಾಗಿವೆ.
ಚಾರಮಕ್ಕಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ ತಯಾರಿಸಿದ್ದ “ಪರೀಕ್ಷಾ ಪೇ ಚರ್ಚಾ’ದ ಪ್ರಮೋಶನಲ್ ವೀಡಿಯೋವನ್ನು ಅಂದು ಪ್ರಧಾನಿ ಮೋದಿ ಅವರು ವೀಕ್ಷಿಸಲಿದ್ದು, ಸಂವಾದ ಸಂದರ್ಭ ವೀಡಿಯೋ ಕೂಡ ಪ್ರಸಾರವಾಗಲಿದೆ. ಇದ ಕ್ಕಾಗಿ ಶುಕ್ರವಾರ ದಿಲ್ಲಿಯ ತಂಡ ಶಾಲೆಗೆ ಬಂದು ಕಿರುಚಿತ್ರ ತಯಾರಿಸಲಿದೆ. ಸಂವಾದದ ದಿನ ಇನ್ನಷ್ಟೇ ನಿಗದಿಯಾಗಬೇಕಿದೆ.
ಗುಡ್ಡೆಯಂಗಡಿ ನಿವಾಸಿ ಕೃಷ್ಣ ಕುಲಾಲ್-ಜಯಲಕ್ಷ್ಮೀ ದಂಪತಿಯ ಪುತ್ರಿ ಅನುಷಾ ಅಲಾºಡಿ-ಆರ್ಡಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಈಕೆ ಭವಿಷ್ಯದಲ್ಲಿ ಎಂಜಿನಿಯರಿಂಗ್ ಮಾಡುವ ಕನಸು ಹೊಂದಿದ್ದಾರೆ.
“ಪರೀಕ್ಷಾ ಪೇ ಚರ್ಚಾ’ ಕಾರ್ಯ ಕ್ರಮದಲ್ಲಿ ಪ್ರಧಾನಿ ಜತೆ ಸಂವಾದ ನಡೆಸಲು ದೇಶದಲ್ಲಿ 30 ಮಂದಿಯಲ್ಲಿ ಒಬ್ಬಳಾಗಿ ಆಯ್ಕೆಯಾದುದು ಜೀವನದ ಅತ್ಯಂತ ಸಂತಸದ ಕ್ಷಣವಾಗಿದೆ. ಈ ಶಾಲೆಯ ವಿದ್ಯಾರ್ಥಿನಿ ಯಾದುದು ಅದೃಷ್ಟ. ನಂಬಲು ಅಸಾಧ್ಯ ವಾದ ಅವಕಾಶ ಇದು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಮತ್ತು ಎಲ್ಲ ಶಿಕ್ಷಕ ವೃಂದದ ಶ್ರಮ, ಪ್ರೋತ್ಸಾಹದ ಫಲ.
– ಅನುಷಾ, “ಪರೀಕ್ಷಾ ಪೇ ಚರ್ಚಾ’ಗೆ ಆಯ್ಕೆಯಾಗಿರುವ ವಿದ್ಯಾರ್ಥಿನಿ