Advertisement

ಕಬ್ಬನ್‌ ಪಾರ್ಕೋ? ಪಾರ್ಕಿಂಗ್‌ ಲಾಟೋ? 

11:58 AM Mar 06, 2017 | Team Udayavani |

ಬೆಂಗಳೂರು: ರಾಜಧಾನಿಯ ಹೃದಯ ಭಾಗದಲ್ಲಿರುವ ಹಸಿರು ಉದ್ಯಾನ ಕಬ್ಬನ್‌ಪಾರ್ಕ್‌ ನಿಧಾನವಾಗಿ ವಾಹನಗಳ ಪಾರ್ಕಿಂಗ್‌ ತಾಣವಾಗಿ ಮಾರ್ಪಾಟಾಗುತ್ತಿದೆ. ಕಬ್ಬನ್‌ಪಾರ್ಕ್‌ನ ಶೇ.60 ರಷ್ಟು ಪ್ರದೇಶದಲ್ಲಿ ಕಳೆದ ಒಂದು ವಾರದಿಂದೀಚೆಗೆ ವಾಹನಗಳು ತುಂಬಿ ತುಳುಕುತ್ತಿವೆ. ಹೀಗಾಗಿ ವಾಯು ವಿಹಾರಕ್ಕಾಗಿ ಬರುವವರು ವಾಹನಗಳು ಉಗುಳುವ ಹೊಗೆ ಸೇವಿಸುವಂತಾಗಿದೆ. 

Advertisement

ನೃಪತುಂಗ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧವಾಗಿರುವುದು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್‌ ಕ್ರಿಕೆಟ್‌ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ನಿಲುಗಡೆ ಪ್ರಮಾಣ ಹೆಚ್ಚಾಗಿದೆ ಎಂದು ಸಂಚಾರ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಅದರೆ, ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳಿಲ್ಲದಿರುವುದೇ ಸಮಸ್ಯೆಗೆ ಕಾರಣ ಎನ್ನುತ್ತಾರೆ ಪಾರ್ಕ್‌ನ ನಡಿಗೆದಾರರ ಅಧ್ಯಕ್ಷ ಉಮೇಶ್‌. 

ಅದರೆ, ಇದಕ್ಕೆ ಮೂಲಕ ಕಾರಣ, ನಗರ ಸಂಚಾರ ಪೊಲೀಸರು ಹಾಗೂ ತೋಟಗಾರಿಕಾ ಇಲಾಖೆ ನಡುವಿನ ಆಂತರಿಕ ಸಂಘರ್ಷ. ಹೀಗಾಗಿ ಐತಿಹಾಸಿಕ ಕಬ್ಬನ್‌ಪಾರ್ಕಿನ ಒಳಭಾಗ ಕೂಡ ಇದೀಗ ಪಾರ್ಕಿಂಗ್‌ ತಾಣವಾಗಿದೆ. ಕಬ್ಬನ್‌ಪಾರ್ಕ್‌ನ ಕೆಲವು ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷಿದ್ಧ. ಆದರೂ ಅದೇ ಸ್ಥಳದಲ್ಲಿ ನೂರಾರು ವಾಹನಗಳನ್ನು ನಿಲ್ಲಿಸಲಾಗಿವೆ. ಈ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸಂಚಾರ ಪೊಲೀಸರ ಕಡೆ ಬೊಟ್ಟು ಮಾಡುತ್ತಾರೆ.

ಪೊಲೀಸರನ್ನು ಕೇಳಿದರೆ, ಕಬ್ಬನ್‌ ಪಾರ್ಕ್‌ ಒಳಭಾಗದ ಪಾರ್ಕಿಂಗ್‌ಗೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಈವರೆಗೂ ಕಬ್ಬನ್‌ಪಾರ್ಕಿಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಮಾಡಲಾಗುತ್ತಿತ್ತು. ಆದರೆ ಇದೀಗ ಪಾರ್ಕಿಂಗ್‌ ಜಾಗ ಹೊರತಾಗಿ ಉದ್ಯಾನದ ಬೇಲಿಮುರಿದು ಒಳಭಾಗದಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಹೀಗಾಗಿ ಪಾರ್ಕಿಂಗ್‌ ನಿರ್ವಹಣೆ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಮೂಕಪ್ರೇಕ್ಷಕರಾಗಿದ್ದಾರೆ. 

ಕಬ್ಬನ್‌ಪಾರ್ಕ್‌ನಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು, “ಕಬ್ಬನ್‌ ಉದ್ಯಾನದ ಹೊರಭಾಗದಲ್ಲಿ ಅನಧಿಕೃತವಾಗಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಿದ್ದೇವೆ. ಆದರೆ ಕಬ್ಬನ್‌ ಪಾರ್ಕಿನ ರಸ್ತೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಹಾಗೂ ನೋ ಪಾರ್ಕಿಂಗ್‌ ಜಾಗದ ಉಸ್ತುವಾರಿಯನ್ನು ತೋಟಗಾರಿಕೆ ಇಲಾಖೆ ಟೆಂಡರ್‌ ಕೊಟ್ಟಿದೆ.

Advertisement

ಹೀಗಾಗಿ, ಉದ್ಯಾನದ ಒಳಭಾಗದಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆಗೊಳಿಸಿರುವುದರ ವಿರುದ್ಧ ತೋಟಗಾರಿಕಾ ಇಲಾಖೆಯೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹೀಗಿರುವಾಗ ಅಲ್ಲಿನ  ಅವ್ಯವಸ್ಥೆಯನ್ನುಸರಿಪಡಿಸುವುದು ಅವರ ಕರ್ತವೇ ಹೊರತು ನಾವು ಮಧ್ಯಪ್ರವೇಶಿಸಲು ಅವಕಾಶವಿಲ್ಲ,” ಎಂದು ಹೇಳುತ್ತಾರೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, “ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನ ನಿಲ್ಲಿಸದಂತೆ ಸಿಬ್ಬಂದಿ ಹೇಳಿದರೂ ಸಾರ್ವಜನಿಕರು ಓಗೊಡುವುದಿಲ್ಲ.

ಸಾರ್ವಜನಿಕರು ಸಿಬ್ಬಂದಿ ಮಾತು ಕೇಳದಿದ್ದರೆ ಪೊಲೀಸರೇ ಈ ಜವಾಬ್ದಾರಿ ವಹಿಸಿಕೊಳ್ಳಬೇಕಲ್ಲವೇ?” ಎನ್ನುತ್ತಾರೆ. ವಾರದ ಕೊನೆ ದಿನಗಳಲ್ಲಿ ಸುಮಾರು 20ರಿಂದ 22 ಸಾವಿರ ಮಂದಿ ಪಾರ್ಕ್‌ಗೆ ಬರುತ್ತಾರೆ. ಹೀಗಾಗಿ ಭಾನುವಾರದಂದು ಹಿಂದಿನಂತೆ ಗೇಟ್‌ಬಂದ್‌ ಮಾಡಿ ಸಾರ್ವಜನಿಕರ ಮುಕ್ತ ಓಡಾಟಕ್ಕೆ ಅವಕಾಶಕಲ್ಪಿಸಲು ನಿರ್ಧರಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು, ಆದರೆ, ಸರ್ಕಾರದಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳುತ್ತಾರೆ. 

ಪಾರ್ಕಿಂಗ್‌ ದಂಧೆ: ಈ ಮಧ್ಯೆ, ಕಬ್ಬನ್‌ಪಾಕ್‌ನಲ್ಲಿ ಅನಧಿಕೃತ ಪಾರ್ಕಿಂಗ್‌ ಶುಲ್ಕ ವಸೂಲು ಮಾಡುವ ದಂಧೆಯೂ ಪ್ರಾರಂಭವಾಗಿದ್ದು, ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟು ಗಂಟೆಗೆ 5 ರಿಂದ 10 ರೂ. ಪಡೆಯಲಾಗುತ್ತಿದೆ. ಇದನ್ನು ಕಂಡರೂ ಕಾಣದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ನಡಿಗೆದಾರರರು ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಪಾರ್ಕ್‌ ಒಳಗಣ ಪಾರ್ಕಿಂಗ್‌ ಟ್ರಾಫಿಕ್‌ನಿಂದ ಬೇಸರವಾಗಿದೆ.  ಭಾನುವಾರ ಕ್ರಿಕೆಟ್‌ ಪಂದ್ಯ ನೋಡಲು ಬಂದವರು ಭದ್ರತಾ ಸಿಬ್ಬಂದಿ ಸೂಚನೆಯನ್ನೂ ಉಲ್ಲಂ ಸಿ ವಾಹನ ನಿಲ್ಲಿಸಿದ್ದಾರೆ. ಇದರಿಮದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಂಜೆ ಪಂದ್ಯ ಮುಗಿದ ಕೂಡಲೇ ವಾಹನಗಳನ್ನು ತೆರವುಗೊಳಿಸಲಾಯ್ತು. ಸೋಮವಾರದಿಂದ ಪಾರ್ಕ್‌ ಒಳಗಡೆ ವಾಹನ ನಿಲುಗಡೆ  ಮಾಡದಂತೆ ತಡೆಗೋಡೆ ನಿರ್ಮಿಸಲಾಗುವುದು. 
-ಮಹಾಂತೇಶ  ರುಗೋಡ, ಉಪ ನಿರ್ದೇಶಕ, ತೋಟಗಾರಿಕಾ ಇಲಾಖೆ   

* ಮಂಜುನಾಥ್‌ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next