Advertisement

ಪಾರಾಯಣ ಪ್ರಿಯ ವಿಶ್ವೇಶತೀರ್ಥರು!

10:50 PM Dec 29, 2019 | Lakshmi GovindaRaj |

ಬೆಂಗಳೂರು: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪಾರಾಯಣ ಮಾಡದೇ ಮಲಗುತ್ತಿರಲಿಲ್ಲ. 8 ವರ್ಷದ ಬಾಲಕರಿದ್ದಾಗಿನಿಂದ ಇಲ್ಲಿಯವರೆಗೂ ಎಂಥ ಸಂದರ್ಭ ಬಂದರೂ, ಪಾರಾಯಣ ಬಿಟ್ಟ ದಿನವೇ ಇಲ್ಲ!

Advertisement

ದೇಶದ ಯಾವುದೇ ಭಾಗಕ್ಕೆ ತೆರಳಿದರೂ, ಪಾರಾಯಣದ ಮುಖ್ಯ ಭಾಗವಾದ ವಾಯುಸ್ತುತಿ ಪುನಶ್ಚರಣೆ (ಮಧ್ವಾಚಾರ್ಯರ ಜತೆಯಲ್ಲಿದ್ದ ತ್ರಿವಿಕ್ರಮ ಪಂಡಿತಾಚಾರ್ಯ ಅವರು ರಚಿಸಿದ 41 ಶ್ಲೋಕಗಳನ್ನು ಒಂದರಿಂದ 41ರವರೆಗೆ ಮತ್ತು 41ನೇ ಶ್ಲೋಕದಿಂದ 1ರವರೆಗೆ ಪಠಿಸುವುದು) ಮಾಡುತ್ತಿದ್ದರಂತೆ. ದೇಶಾದ್ಯಂತ ಮಠದ 80ಕ್ಕೂ ಅಧಿಕ ಶಾಖೆಗಳಿದ್ದು, ಅಲ್ಲಿಗೆ ಹೋದಾಗ ಅಲ್ಲಿನ ಮಕ್ಕಳೊಂದಿಗೆ ಬೆರೆತು, ಪಾಠ, ಪ್ರವಚನದಲ್ಲಿ ನಿರತರಾಗುತ್ತಿದ್ದರು. ಬಳಿಕ ರಾತ್ರಿ ವೇಳೆ ಪಾರಾಯಣ ಮುಗಿಸಿಯೇ ಮಲಗುತ್ತಿದ್ದರು.

ಒಮ್ಮೆ ಶ್ರೀಗಳು ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ವಿದ್ಯಾಪೀಠಕ್ಕೆ ಬಂದಾಗ ರಾತ್ರಿ 1 ಗಂಟೆಯಾಗಿತ್ತು. ಅಂದು ಮಧ್ಯರಾತ್ರಿಯೇ ಪಾರಾಯಣ ಮುಗಿಸಿ ರಾತ್ರಿ 2 ಗಂಟೆಗೆ ಮಲಗಿದ್ದರು. ಆದರೂ, ಮುಂಜಾನೆ 4 ಗಂಟೆಗೆ ಎದ್ದು ತಮ್ಮ ದಿನಚರಿ ಆರಂಭಿಸಿದರು ಎಂದು ಗುರುಕುಲದ ವಿದ್ಯಾರ್ಥಿ ವೆಂಕಟೇಶ್‌ ಸ್ಮರಿಸಿದರು.

ಪ್ರತಿದಿನ ಯೋಗಾಭ್ಯಾಸ: ಶ್ರೀಗಳು ಬೆಳಗ್ಗೆ 4 ಗಂಟೆಗೆ ಎದ್ದು, ಯೋಗ ಮಾಡುತ್ತಿದ್ದರು. ಸುಮಾರು 15ರಿಂದ 20 ನಿಮಿಷ ವಿವಿಧ ಯೋಗಾಸನಗಳನ್ನು ಮಾಡಿ ಸ್ನಾನಕ್ಕೆ ತೆರಳುತಿದ್ದರು. ಬಳಿಕ ಪೂಜೆ, ಜಪದರ್ಪಣದಲ್ಲಿ ನಿರತರಾಗುತ್ತಿದ್ದರು. ಬೆಳಗ್ಗೆ 7.30ಕ್ಕೆ 12 ಮತ್ತು 13ನೇ ತರಗತಿ ವಿದ್ಯಾರ್ಥಿಗಳಿಗೆ ಸುಧಾಪಾಠ ಮಾಡಿದ ನಂತರ ಹಾಲು ಸೇವಿಸಿ, ಸಾರ್ವಜನಿಕರ ಭೇಟಿ ಮಾಡುತ್ತಿದ್ದರು. ಸಂಜೆ ಸಭಾಗೃಹದಲ್ಲಿ ಭಕ್ತರಿಗೆ ಉಪನ್ಯಾಸ ನೀಡಿ, ಫ‌ಲಾಹಾರ ಸೇವಿಸಿದ ನಂತರ ವಿಶ್ರಾಂತಿಗೆ ತೆರಳುತ್ತಿದ್ದರು.

ಅಂದಿನ ಕೆಲಸದ ಬಗ್ಗೆ ಮನನ: ಪೇಜಾವರ ಶ್ರೀಗಳು ಪೂಜೆ, ಮಕ್ಕಳಿಗೆ ಪಾಠ, ಸಾರ್ವಜನಿಕ ಕಾರ್ಯಕ್ರಮಗಳು ಹೀಗೆ ಹತ್ತಾರು ಕಾರ್ಯಗಳಿದ್ದರೂ, ಪ್ರತಿದಿನ ಅಂದಿನ ಕೆಲಸ, ಕಾರ್ಯಗಳ ಮನನ ಮಾಡುವುದನ್ನು ಮರೆಯುತ್ತಿರಲಿಲ್ಲ. ಮಧ್ವಾಚಾರ್ಯರ ಗ್ರಂಥಗಳ ಬಗ್ಗೆ ವಿಶೇಷ ಪಾಂಡಿತ್ಯ ಹೊಂದಿದ್ದ ಅವರು, ಉಪನ್ಯಾಸದ ವೇಳೆ ಭಕ್ತರಿಗೆ ಹೊಸ ವಿಷಯ ತಿಳಿಸುವ ಉದ್ದೇಶದಿಂದ ಸಂಸ್ಕೃತ, ವೇದ, ಪುರಾಣಗಳನ್ನು ಕರಗತ ಮಾಡಿಕೊಂಡಿದ್ದರು.

Advertisement

ವಿದ್ಯಾಪೀಠದಲ್ಲಿ ಶ್ರೀಗಳ ಉಪಾಹಾರ ಏನು?: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಬೆಳಗ್ಗೆ ತಿಂಡಿ ತಿನ್ನುತ್ತಿರಲಿಲ್ಲ. ಸಕ್ಕರೆಯ ಸಿಹಿ, ಕಹಿ, ಕೇಸರಿ ಹಾಲು ಸ್ವೀಕರಿಸುತ್ತಿದ್ದರು. ಮಧ್ಯಾಹ್ನ ಅನ್ನ, ಸಾರು ಮತ್ತು ರಾತ್ರಿ ಅವಲಕ್ಕಿ, ಸಾರು ಸೇವಿಸುತ್ತಿದ್ದರು. ವಿಶೇಷವಾಗಿ ಬಾಳೆಹಣ್ಣನ್ನು ಜೇನುತುಪ್ಪದೊಂದಿಗೆ ಸೇವಿಸುತ್ತಿದ್ದರು. ಹಾಲು ಸೇವನೆ ಅವರ ಆರೋಗ್ಯದ ಗುಟ್ಟಾಗಿತ್ತು ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ಯಾರ್ಥಿ ತಿಳಿಸಿದರು.

ಮಹತ್‌ ಯೋಜನೆಗಳು: ಪೇಜಾವರ ಶ್ರೀಗಳು ತಾವು ಬದುಕಿದ್ದಾಗಲೇ ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ತೆರೆಯಲು ಕಾರ್ಯಯೋಜನೆ ಆರಂಭಿಸಿದ್ದರು. ಬಡವರ ಸೇವೆ ಉದ್ದೇಶದ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಒಂದು ಅಥವಾ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಉಡುಪಿಯ ಪಾಜಕದಲ್ಲಿ ಭಾರತೀಯ ಸಂಸ್ಕೃತಿಯ ಜತೆಗೆ ಇಂಗ್ಲಿಷ್‌ ಶಿಕ್ಷಣ ನೀಡಲು ಅನುಕೂಲ ಆಗುವಂತೆ ಆನಂದತೀರ್ಥ ವಿದ್ಯಾಮಂದಿರ ಯೋಜನೆ ಹಾಕಿಕೊಂಡಿದ್ದರು.

ದ್ವಿತೀಯ ಪಿಯುಸಿವರೆಗೂ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣ ನೀಡುವ ಉದ್ದೇಶ ಶ್ರೀಗಳದ್ದಾಗಿತ್ತು. ಶ್ರೀಗಳ ಎಲ್ಲ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಆದರೆ, ಅವರು ನಮ್ಮ ಜತೆ ಇಲ್ಲ ಎಂಬ ಕೊರಗು ಇರುತ್ತದೆ. ಅವರು ಕೊಟ್ಟು ಹೋದ ಸದ್ಗುಣ, ಸದಾಚಾರ ಜೀವನ ಪದ್ಧತಿ ನಮ್ಮೊಂದಿಗೆ ಸದಾ ಇರುತ್ತದೆ ಎಂದು ಶ್ರೀಗಳ ಆಪ್ತ ಕಾರ್ಯದರ್ಶಿಯಾಗಿ ಹತ್ತರು ವರ್ಷ ಸೇವೆ ಸಲ್ಲಿಸಿದ ಡಿ.ಪಿ.ಅನಂತ್‌ ವಿವರಿಸಿದರು.

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next