ಬೆಂಗಳೂರು: ಮಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಕಾರ್ಯಕ್ರಮದ ಸ್ಮರಣಾರ್ಥವಾಗಿ ತುಳುನಾಡು ನಿರ್ಮಾತೃ ಪರಶುರಾಮನ ಭವ್ಯ ಪುತ್ಥಳಿಯನ್ನು ಉಡುಗೊರೆ ರೂಪದಲ್ಲಿ ಕೊಡಲು ನಿಶ್ಚಯಿಸಲಾಗಿದ್ದು, ಉಡುಪಿಯಲ್ಲಿ ಪುತ್ಥಳಿ ನಿರ್ಮಿಸಲಾಗುತ್ತಿದೆ.
ಈ ಪುತ್ಥಳಿಯ ಭಾವಚಿತ್ರ ‘ಉದಯವಾಣಿ’ಗೆ ಲಭ್ಯವಾಗಿದ್ದು, ಸಮುದ್ರದೆಡೆಗೆ ಮುಖಮಾಡಿ ನಿಂತ ಪರಶುರಾಮ ಕೊಡಲಿಯನ್ನು ಬೀಸಲು ಸಿದ್ದವಾಗಿರುವ ರೀತಿ ನಿರ್ಮಾಣವಾಗಿದ್ದು ಬಲಗೈಯಲ್ಲಿ ಬಿಲ್ಲನ್ನು ಪರಶುರಾಮ ಹಿಡಿದಿದ್ದಾನೆ. ಪರಶುರಾಮ ಕೊಡಲಿ ಎಸೆದಾಗ ಸಮುದ್ರ ಹಿಂದಕ್ಕೆ ಸರಿದು ಸೃಷ್ಟಿಯಾದ ಭೂ ಭಾಗವೇ ತುಳುನಾಡು ಎಂಬುದು ಪುರಾಣ ಪ್ರತೀತಿ.
ಹೀಗಾಗಿ ತುಳುನಾಡ ಪ್ರಾತಿನಿಧಿಕ ರೂಪವಾಗಿ ಪರಶುರಾಮ ವಿಗ್ರಹವನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ. ಈ ಕಲಾಕೃತಿಯನ್ನು ವಿಶೇಷ ಆಸ್ಥೆಯಿಂದ ಸಿದ್ಧಪಡಿಸುವುದಕ್ಕೆ ಸಚಿವ ಸುನಿಲ್ ಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯ ಖ್ಯಾತ ಶಿಲ್ಪಿಯೊಬ್ಬರ ಮಾರ್ಗದರ್ಶನದಲ್ಲಿ ಪ್ರತಿಮೆ ನಿರ್ಮಾಣವಾಗಿದೆ.
ಒಂದು ಗಂಟೆ ಸಭೆ: ಈ ಕಾರ್ಯಕ್ರಮದ ಬಳಿಕ ಸುಮಾರು ಒಂದು ಗಂಟೆ ಕಾಲ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಹಿರಿಯ ನಾಯಕರ ಜತೆ ಸಭೆ ನಡೆಸಲಿದ್ದಾರೆ. ಕೋರ್ ಕಮಿಟಿ ಸ್ವರೂಪದಲ್ಲೇ ಈ ಸಭೆ ನಡೆಯುತ್ತದೆ ಎಂದು ತಿಳಿದು ಬಂದಿದೆ. ಹೀಗಾಗಿ ಪ್ರಧಾನಿ ಮೋದಿ ಮಂಗಳೂರು ಭೇಟಿ ಒಂದರ್ಥರದಲ್ಲಿ ಬಿಜೆಪಿ ಚುನಾವಣಾ ದಿನಚರಿಯ ಆರಂಭಕ್ಕೆ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ದಾಳಿಂಬೆ ಬರಗಾಲದ ಸಮೃದ್ಧ ಬೆಳೆ: 10 ಎಕರೆ, 100 ಟನ್ ಇಳುವರಿ 1 ಕೋಟಿ ಆದಾಯ ..!
ಯಕ್ಷ ಸ್ವಾಗತ: ಪ್ರಧಾನಿ ಮೋದಿ ಮಂಗಳೂರು ಆಗಮನಕ್ಕಾಗಿ ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಧ್ವನಿಯಲ್ಲಿ ನಿರ್ಮಿಸಿರುವ ಸ್ವಾಗತ ಗೀತೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಶಾಸಕರು ಪರಿಶೀಲನಾ ಸಭೆಯನ್ನೂ ನಡೆಸಿದ್ದಾರೆ.