Advertisement
ಈ ಸಂಬಂಧ ಗಂಡನಿಂದ ಮೂರು ದಶಕಗಳ ಕಾಲ ದೂರವಾಗಿದ್ದ ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಿ ಜೀವನಾಂಶ ಮತ್ತು ಪರಿಹಾರ ನೀಡಲು ಆದೇಶಿಸಿದೆ. ಮೌಖೀಕವಾಗಿ ವೈವಾಹಿಕ ಜೀವನದಿಂದ ದೂರವಾದ ಬಳಿಕ ನಿಗದಿತ ಅವಧಿಯಲ್ಲಿ ಜೀವನಾಂಶ ಕೋರಿಲ್ಲ ಎಂದು ಮೊದಲ ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸಿದ್ದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಗೆ ಹೈಕೋರ್ಟ್ ಕೌಟುಂಬಿಕ ದೌರ್ಜನ್ಯ ಕಾಯ್ದೆ ಬಿಸಿ ಮುಟ್ಟಿಸಿದ್ದು, ಮೊದಲ ಪತ್ನಿಗೆ ಜೀವನಾಂಶ ಹಾಗೂ ಪರಿಹಾರ ಕೊಡುವಂತೆ ತೀರ್ಪು ನೀಡಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
Related Articles
Advertisement
ಪ್ರಕರಣ ಏನು?: ಕಳೆದ ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿನ ಸುನೀತಾ (54) ಹಾಗೂ ಕಂದಾಯ ಇಲಾಖೆ ಇನ್ಸ್‌ಪೆಕ್ಟರ್ ಆಗಿದ್ದ ಬೆಳಗಾವಿ ಮೂಲದ ಪ್ರಮೋದ್ (60)( ಇಬ್ಬರ ಹೆಸರೂ ಬದಲಿಸಲಾಗಿದೆ) ಮದುವೆಯಾಗಿದ್ದು, ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಸುನೀತಾ ಬೆಂಗಳೂರಿಗೆ ಹಿಂತಿರುಗಿ ತವರು ಮನೆಯಲ್ಲಿ ವಾಸಿಸುತ್ತಾರೆ. ಬಳಿಕ ಆಕೆಗೆ ಮಗಳಾಗಿದ್ದು, ಆಕೆಗೂ ಮದುವೆ ಮಾಡಿ ಅಳಿಯ ಹಾಗೂ ಮಗಳ ಜೊತೆಯಲ್ಲಿಯೇ ವಾಸಿಸುತ್ತಾರೆ.
ಮೊದಲ ಪತ್ನಿ ಸುನೀತಾ ಬಿಟ್ಟು ಹೋದ ಬಳಿಕ ಪ್ರಮೋದ್ ಎರಡನೇ ಮದುವೆ ಮಾಡಿಕೊಂಡಿದ್ದ. ಇಬ್ಬರು ಮಕ್ಕಳ ಜೊತೆ ಅಲ್ಲಿಯೇ ವಾಸಿಸುತ್ತಿದ್ದು, 2016ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಈ ಮಧ್ಯೆ ಪತಿಯಿಂದ ಪರಿತ್ಯಕ್ತಗೊಂಡು ಮೂವತ್ತು ವರ್ಷಗಳ ಬಳಿಕ ಪತಿಯಿಂದ ಜೀವನಾಂಶ ಕೊಡಿಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯ ಅರ್ಜಿದಾರ ಮಹಿಳೆಗೆ ಮಾಸಿಕ 10, ಸಾವಿರ ರೂ. ಜೀವನಾಂಶ, 1ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಬೆಂಗಳೂರಿನಲ್ಲಿ ಬಾಡಿಗೆ ಮನೆ ವಾಸಕ್ಕೆ ಮಾಸಿಕ 1 ಸಾವಿರ ರೂ ನೀಡಬೇಕು ಎಂದು ಪ್ರತಿವಾದಿ ಪ್ರಮೋದ್‌ಗೆ ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಪ್ರಮೋದ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಮೊದಲ ಪತ್ನಿಗೆ ಮಾಸಿಕ 5 ಸಾವಿರ ರೂ. ಜೀವನಾಂಶ ಹಾಗೂ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಆದೇಶ ರದ್ದುಪಡಿಸಿ ಜೀವನಾಂಶ ಹಾಗೂ ಪರಿಹಾರ ಮೊತ್ತ ಕಡಿಮೆಗೊಳಿಸುವಂತೆ ಪ್ರಮೋದ್ ಹೈಕೋರ್ಟ್ ಮೆಟ್ಟಿಲೇರಿದ್ದರೆ, ಮೊದಲ ಪತ್ನಿ ಸುನೀತಾ, ಜೀವನಾಂಶ ಹಾಗೂ ಪರಿಹಾರ ಮೊತ್ತ ಹೆಚ್ಚಿಸುವಂತೆ ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಮಹಿಳೆಯ ವಾದವೇನು?ಪತಿ ಮದುವೆಯಾದ ಬಳಿಕ ಸರಿಯಾಗಿ ನಡೆಸಿಕೊಂಡಿಲ್ಲ. ನನ್ನನ್ನು ಕಡೆಗಣಿಸಿ ಬೇರೊಂದು ಮದುವೆ ಮಾಡಿಕೊಂಡಿದ್ದಾರೆ. ಸದ್ಯ ನಿವೃತ್ತಿ ವೇತನ, ಕೃಷಿ ಭೂಮಿ, ಎರಡನೇ ಪತ್ನಿ ವೇತನ, ಮಕ್ಕಳ ದುಡಿಮೆ ಸೇರಿ ತಿಂಗಳಿಗೆ 1 ಲಕ್ಷ ರೂ.ಗಳಿಗೂ ಅಧಿಕ ಆದಾಯವಿದೆ. ಸದ್ಯ ಮಗಳು ಹಾಗೂ ಅಳಿಯನ ಮನೆಯಲ್ಲಿ ವಾಸಿಸುತ್ತಿದ್ದು, ಪ್ರತ್ಯೇಕವಾಗಿ ಜೀವನ ನಡೆಸಲು ಪ್ರತಿ ತಿಂಗಳ ಊಟ, ಬಟ್ಟೆ, ವೈದ್ಯಕೀಯ ಖರ್ಚುಗಳು ಸೇರಿ 20 ಸಾವಿರ ರೂ ಜೀವನಾಂಶ ಕೊಡಿಸಬೇಕು ಎಂಬುದು ಮಹಿಳೆಯ ವಾದವಾಗಿತ್ತು. – ಮಂಜುನಾಥ್ ಲಘುಮೇನಹಳ್ಳಿ