Advertisement

ಪರಶುರಾಂಪುರದಲ್ಲಿ ಮಾರಮ್ಮ ಹಬ್ಬ

05:00 PM Sep 18, 2019 | Naveen |

ಪರಶುರಾಂಪುರ: ಗ್ರಾಮವೂ ಸೇರಿದಂತೆ ದೊಡ್ಡಚೆಲ್ಲೂರು, ಕ್ಯಾದಿಗುಂಟೆ, ಚೌಳೂರು, ಜಾಜೂರು, ಹರವಿಗೊಂಡನಹಳ್ಳಿ, ನಾಗಗೊಂಡನಹಳ್ಳಿ, ಕಡೇಹುಡೆ ಸೇರಿದಂತೆ ವಿವಿಧ ಹಳ್ಳಿಗಳ ಗ್ರಾಮಸ್ಥರು ಮಂಗಳವಾರ ಮಾರಮ್ಮನ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು.

Advertisement

ಜನರು ತಮ್ಮೂರಿನ ಮಾರಿಗುಡಿಗಳನ್ನು ಚೆಂಡು ಹೂವು, ಬಾಳೆ ಕಂದು, ಮಾವಿನ ತೋರಣ, ಹಸಿ ತೆಂಗಿನ ಗರಿಗಳು ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ದೇವಿಯ ಮೂರ್ತಿಯನ್ನು ಬೇವಿನಸೊಪ್ಪು, ವಿವಿಧ ಒಡವೆ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು-ಮಕ್ಕಳು ತಮ್ಮ ಮನೆಗಳನ್ನು ಬೆಳಿಗ್ಗೆಯೇ ಸ್ವಚ್ಛಗೊಳಿಸಿ ಮಡಿಯಿಂದ ಸ್ನಾನ ಮಾಡಿ ಗ್ರಾಮದೇವತೆ ಮಾರಮ್ಮ ಹಿಟ್ಟಿನಾರತಿ ಮಾಡಲು ಸಿದ್ಧತೆ ನಡೆಸಿದರು. ಹಂಚಿ ಕಡ್ಡಿ, ಕಣಗಲೆ ಹೂವು, ವೀಳ್ಯದೆಲೆ, ಹೊಂಬಾಳೆ, ತಂಬಿಟ್ಟು, ತೆಂಗಿನಕಾಯಿ, ಬಾಳೆಹಣ್ಣುಗಳಿಂದ ತಂಬಿಟ್ಟಿನಾರತಿಯನ್ನು ಸಿದ್ಧಪಡಿಸಲಾಯಿತು. ದೇವರಿಗೆ ಎಡೆ ಅನ್ನ ತಯಾರಿಸಿ ಬೇವಿನಸೊಪ್ಪು, ಬೇಟೆ ಸೊಪ್ಪುಗಳನ್ನು ಕೈಯಲ್ಲಿ ಹಿಡಿದುಕೊಂಡು ಗ್ರಾಮದ ಮಾರಮ್ಮ ದೇವಿಯ ಗುಡಿಗೆ ಜಾನಪದ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿದರು.

ಮಾರಮ್ಮ ದೇವಿಯ ದೇವಸ್ಥಾನದಲ್ಲಿ ದೇವಿ ಮೂರ್ತಿಯ್ನು ವಿವಿಧ ಜಾತಿಯ ಹೂವುಗಳಿಂದ ಅಲಂಕರಿಸಿ ನೂರೊಂದು ಎಡೆ ಹಾಕಿ, ಹಣ್ಣು, ಕಾಯಿ, ಕರ್ಪೂರಗಳನ್ನಿಟ್ಟು ಹಿಟ್ಟಿನಾರತಿ ಬೆಳಗಲಾಯಿತು. ಮಹಿಳೆಯರು ಮತ್ತು ಮಕ್ಕಳು ಹಿಟ್ಟಿನಾರತಿಯನ್ನು ತಲೆಯ ಮೇಲೆ ಹೊತ್ತು ದೇವಿ ಗುಡಿಯನ್ನು ಪ್ರದಕ್ಷಿಣೆ ಹಾಕಿದರು. ಹರಕೆ ಹೊತ್ತ ಮಹಿಳೆಯರು-ಮಕ್ಕಳು ಬೇವಿನ ಉಡುಗೆ ಧರಿಸಿ ದೇವಿ ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿ ಹರಕೆ ತೀರಿಸಿದರು. ವೀಳ್ಯದೆಲೆ, ಅಡಿಕೆ, ತಂಬಿಟ್ಟು, ಬಾಳೆಹಣ್ಣನ್ನು ನೆರೆದಿದ್ದ ಭಕ್ತರಿಗೆ ಹಂಚಿದರು. ನಂತರ ಮಾರಮ್ಮನ ಹಬ್ಬದ ಅಂಗವಾಗಿ ತಮ್ಮ ಮನೆಗೆ ಬಂದ ಅತಿಥಿಗಳು, ಗೆಳೆಯರು, ಸಂಬಂಧಿಕರಿಗೆ ವಿಶೇಷ ಅಡುಗೆ ತಯಾರಿಸಿ ಉಣಬಡಿಸಿದರು. ಹನ್ನೆರೆಡು ಕೈವಾಡದವರು, ಗೌಡ, ಗೊಂಚಿಗಾರ, ಮಹಿಳಾ ಸಂಘದವರು, ರೈತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next