ಬೆಂಗಳೂರು: ಕಾರ್ಕಳ ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ಶ್ರೀ ಪರಶುರಾಮನ ಕಂಚಿನ ಮೂರ್ತಿ ಸ್ಥಾಪನೆಗೆ ಸಂಬಂಧಿಸಿ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲು ಕೋರಿ ಕಾಮಗಾರಿ ನಿರ್ವಹಿಸುತ್ತಿರುವ ಕ್ರಿಶ್ ಆರ್ಟ್ ವರ್ಲ್ಡ್ ಸಲ್ಲಿಸಿರುವ ಮನವಿಯನ್ನು ಕಾನೂನು ರೀತಿ ಪರಿಗಣಿಸಿ ಎರಡು ವಾರಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ಕ್ರಿಶ್ ಆರ್ಟ್ ವರ್ಲ್ಡ್ ನ ಮಾಲಕ ಕೃಷ್ಣ ನಾಯಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ.
ಅರ್ಜಿದಾರರಾದ ಕ್ರಿಶ್ ಆರ್ಟ್ ವರ್ಲ್ಡ್ ಅವರ 2024ರ ಜ. 9ರ ಮನವಿಯಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಿರ್ಮಿತಿ ಕೇಂದ್ರ ಎ. 22ರಂದು ಹೈ ಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಎರಡು ವಾರಗಳಲ್ಲಿ ಪರಿಗಣಿ ಸುವಂತೆ ನಿರ್ಮಿತಿ ಕೇಂದ್ರಕ್ಕೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಕಾಮಗಾರಿ ಪೂರ್ಣಗೊಳಿಸಿಕೊಡುವಂತೆ ನಿರ್ಮಿತಿ ಕೇಂದ್ರ ಕ್ರಿಶ್ ಆರ್ಟ್ ವರ್ಲ್ಡ್ ಗೆ ಕೇಳಿಕೊಂಡಿತ್ತು. ಆದರೆ ಪರಶುರಾಮನ ಮೂರ್ತಿಯ ಸೊಂಟದಿಂದ ಕೆಳಗೆ ಎರಡು ಕಾಲುಗಳನ್ನು ತೆಗೆಯಲು ಅವಕಾಶ ನೀಡಿದ್ದಲ್ಲಿ ಹಾಗೂ ಸದ್ಯ ಮೂರ್ತಿ ಇರುವ ಸ್ಥಳದಲ್ಲಿ ಭಯದ ವಾತವಾರಣವಿರುವ ಕಾರಣ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿ ಮೂರ್ತಿ ಸೊಂಟದಿಂದ ಕೆಳಗೆ ಕಾಲಿನ ಭಾಗವನ್ನು ತೆಗೆದು ಪುನಾರಚಿಸಿ ಹಸ್ತಾಂತರಿಸಲು ಸುಮಾರು 6 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಕ್ರಿಶ್ ಆರ್ಟ್ ವರ್ಲ್ಡ್ ಮನವಿ ಸಲ್ಲಿಸಿತ್ತು. ಇದನ್ನು ಪರಿಗಣಿಸದ ಕಾರಣ ಕ್ರಿಶ್ ಆರ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಕಾಮಗಾರಿ ಪೂರ್ಣಗೊಳಿಸಲು ಷರತ್ತು
ಕಾಮಗಾರಿಯ ಒಪ್ಪಂದದಂತೆ ಮೂಲ ವೆಚ್ಚ 1.83 ಕೋ. ರೂ., ಜಿಎಸ್‌ಟಿ ಹಾಗೂ ಇತರ ತೆರಿಗೆಗಳನ್ನು ಸೇರಿಸಿ ಅಂತಿಮ ವೆಚ್ಚ 2.04 ಕೋ. ರೂ.ಗಳಂತೆ ಕ್ರಿಶ್ ಆರ್ಟ್ ವರ್ಲ್ಡ್ ಕಾಮಗಾರಿ ಪೂರ್ಣಗೊಳಿಸಬೇಕು. ಮೂರ್ತಿ ಹಸ್ತಾಂತರಿಸುವ ಮೊದಲು ನಿರ್ಮಿತಿ ಕೇಂದ್ರ ನಡೆಸುವ ತಾಂತ್ರಿಕ ಪರಿಶೀಲನೆಗೆ ಕ್ರಿಶ್ ಆರ್ಟ್ ವರ್ಲ್ಡ್ ಸಹಕರಿಸಿಬೇಕು. ಕೋರ್ಟ್ ಆದೇಶ ಹೊರಡಿಸಿದ ದಿನಾಂಕದಿಂದ ಮುಂದಿನ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಹಣ ಹಿಂದಿರುಗಿಸಬೇಕು ಎಂದು ನಿರ್ಮಿತಿ ಕೇಂದ್ರವು ಹೈಕೋರ್ಟ್‌ಗೆ ನೀಡಿರುವ ಮುಚ್ಚಳಿಕೆಯಲ್ಲಿ ಕ್ರಿಶ್ ಆರ್ಟ್ ವರ್ಲ್ಡ್ ಗೆ ಷರತ್ತು ವಿಧಿಸಿದೆ.