Advertisement

ಬೆಟ್ಟದ ತುದಿ ಏರಿದ ಪರಸಂಗದ ತಿಮ್ಮ!

11:14 AM Jun 26, 2018 | |

ಸಾಮಾನ್ಯವಾಗಿ ಚಿತ್ರದಲ್ಲಿ ಏನಾದರೊಂದು ರಿಸ್ಕ್ ಇದ್ದೇ ಇರುತ್ತೆ. ಅದು ಆ್ಯಕ್ಷನ್‌ ಇರಬಹುದು, ಚೇಸಿಂಗ್‌ ಇರಬಹುದು ಅಥವಾ ಲಾಂಗು-ಕತ್ತಿ ಬೀಸೋದೇ ಇರಬಹುದು. ಅಂತಹ ಅದ್ಭುತ ಸನ್ನಿವೇಶಗಳನ್ನು ಅಷ್ಟೇ ರೋಚಕವಾಗಿ ಕಟ್ಟಿಕೊಡುವ ಪ್ರಯತ್ನದಲ್ಲಿ ಆ ಚಿತ್ರತಂಡ ಯಶಸ್ವಿಯಾಗಿರುತ್ತೆ. ಒಂದು ಕಥೆಗೆ ಅದು ಬೇಕೇ ಬೇಕು ಅಂತ ನಿರ್ದೇಶಕ ನಿರ್ಧರಿಸಿದರೆ ಸಾಕು, ಅದು ಎಂಥದ್ದೇ ರಿಸ್ಕ್ ಇದ್ದರೂ, ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹದೊಂದಿಗೆ ಕಥೆಗೆ ಪೂರಕವಾದದ್ದನ್ನು ಕೊಡುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡುವುದು ಸಹಜ.

Advertisement

ಈಗ ರಘು ನಿರ್ದೇಶನದ “ಪರಸಂಗ’ ಚಿತ್ರದಲ್ಲೂ ಅಂಥದ್ದೊಂದು ರಿಸ್ಕ್ ನಡುವೆ ಯಶಸ್ವಿಯಾಗಿ ಚಿತ್ರೀಕರಣ ನಡೆದಿದೆ. ಹೌದು, “ಪರಸಂಗ’ ಚಿತ್ರತಂಡ ಒಂದು ಸಾವಿರಕ್ಕೂ ಹೆಚ್ಚು ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ಚಿತ್ರೀಕರಣ ಮಾಡಿದೆ. ರಿಸ್ಕ್ನಲ್ಲೇ ಚಿತ್ರೀಕರಿಸಿರುವ ಚಿತ್ರತಂಡ, ತಾನು ಅಂದುಕೊಂಡ ತಾಣವನ್ನು ಪ್ರೇಕ್ಷಕರಿಗೆ ತೋರಿಸುವ ಉತ್ಸಾಹದಲ್ಲಿದೆ. ಅಂದಹಾಗೆ, ಎಚ್‌.ಡಿ.ಕೋಟೆ ಸಮೀಪದ ಚಿಕ್ಕದೇವಿ ಬೆಟ್ಟದಲ್ಲಿ “ಪರಸಂಗ’ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಸೆರೆಹಿಡಿಯಲಾಗಿದೆ.

ಚಿತ್ರಕ್ಕೆ ಆ ತಾಣ ಬೇಕಿದ್ದರಿಂದ ರಿಸ್ಕ್ ಆದರೂ ಸರಿ, ಬೆಟ್ಟದ ತುದಿಗೆ ಹೋಗಿ ಚಿತ್ರೀಕರಿಸಿಕೊಂಡು ಬರಬೇಕೆಂಬ ಹಠದಿಂದ ಅಂದುಕೊಂಡಿದ್ದನ್ನು ಪೂರೈಸಿದೆ. ನಿರ್ದೇಶಕರು ಹೇಳುವಂತೆ, ಆ ತಾಣದಲ್ಲಿ ಈವರೆಗೆ ಯಾರೂ ಚಿತ್ರೀಕರಿಸಿಲ್ಲ. ಆದರೆ, ಹಲವು ವರ್ಷಗಳ ಹಿಂದೆ ಆ ಬೆಟ್ಟದ ಸಮೀಪದಲ್ಲಿ ಉಪೇಂದ್ರ ಅವರ “ಹೆಚ್‌ಟುಓ’ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣಗೊಂಡಿತ್ತು. “ಪರಸಂಗ’ ಆ ಬೆಟ್ಟದ ತುದಿ ಏರಿ ಚಿತ್ರೀಕರಿಸಿದೆ. “ಇಡೀ ಚಿತ್ರತಂಡದೊಂದಿಗೆ ಬೆಳಗ್ಗೆ ಬೆಟ್ಟ ಏರಲು ಶುರುಮಾಡಿದರೆ, ತುದಿ ತಲುಪಲು ಮಧ್ಯಾಹ್ನವಾಗುತ್ತಿತ್ತು.

ಕೇವಲ ಎರಡು ತಾಸು ಚಿತ್ರೀಕರಿಸಿಕೊಂಡು ಪುನಃ, ಕೆಳಗೆ ಇಳಿಯಬೇಕಾಗುತ್ತಿತ್ತು. ಎರಡು ದಿನಗಳ ಕಾಲ ಆ ಬೆಟ್ಟ ಏರುವುದು, ಇಳಿಯುವುದು ಮಾಡಿ, ಪ್ರಮುಖ ದೃಶ್ಯ ಚಿತ್ರೀಕರಿಸಿದ್ಧೇವೆ’ ಎಂಬುದು ನಿರ್ದೇಶಕರ ಮಾತು. ಆ ದೃಶ್ಯದಲ್ಲಿ ಮನೋಜ್‌, ಮಿತ್ರ, ಅಕ್ಷತಾ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಹೆಚ್‌.ಕುಮಾರ್‌, ಕೆ.ಎಂ.ಲೋಕೇಶ್‌ ಹಾಗೂ ಮಹದೇವಗೌಡ ನಿರ್ಮಾಪಕರು. ಸುಜಯ್‌ ಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ. ಜುಲೈನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next